ತುಮಕೂರು: ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ (ಡಿಸಿಸಿ) ಚುನಾವಣೆಗೆ ಭಾನುವಾರದಿಂದ ನಾಮಪತ್ರ ಸಲ್ಲಿಕೆ ಆರಂಭವಾಗಿದ್ದು, ಮೊದಲ ದಿನ ಸಹಕಾರ ಸಚಿವ ಕೆ.ಎನ್.ರಾಜಣ್ಣ, ಶಾಸಕರಾದ ಕೆ.ಷಡಕ್ಷರಿ, ಎಚ್.ವಿ.ವೆಂಕಟೇಶ್ ಸೇರಿ 15 ಮಂದಿ ನಗರದ ಡಿಸಿಸಿ ಬ್ಯಾಂಕ್ ಕಚೇರಿಯಲ್ಲಿ ಉಮೇದುವಾರಿಕೆ ಸಲ್ಲಿಸಿದರು.
ಒಟ್ಟು 14 ನಿರ್ದೇಶಕ ಸ್ಥಾನಗಳಿಗೆ ಆ. 24ರಂದು ಮತದಾನ ನಡೆಯಲಿದೆ. ಉಮೇದುವಾರಿಕೆ ಸಲ್ಲಿಸಲು ಆ. 16ರ ವರೆಗೆ ಅವಕಾಶ ಕಲ್ಪಿಸಲಾಗಿದೆ. 17 ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ನಾಮಪತ್ರ ಹಿಂಪಡೆಯಲು ಆ. 18 ಕೊನೆಯ ದಿನವಾಗಿದೆ.
ಕೆ.ಎನ್.ರಾಜಣ್ಣ ನಾಮಪತ್ರ ಸಲ್ಲಿಸಿದ ನಂತರ ಸುದ್ದಿಗಾರರ ಜತೆ ಮಾತನಾಡಿ, ‘ಅವಿರೋಧ ಆಯ್ಕೆ ಆಗುವುದರಿಂದ ತಾಲ್ಲೂಕು, ಹೋಬಳಿ ಮಟ್ಟದ ಸಂಘಗಳಲ್ಲಿ ಅನ್ಯೋನ್ಯತೆ ಬರುತ್ತದೆ. ಯಾವುದೇ ವೈಷಮ್ಯ, ಅಸಮಾಧಾನ, ದ್ವೇಷದ ಮನೋಭಾವ ಮೂಡುವುದಿಲ್ಲ. ಕಳೆದ ಬಾರಿ ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಜಿಲ್ಲಾ ಬ್ಯಾಂಕ್ ರಾಜ್ಯಕ್ಕೆ ಮಾದರಿಯಾಗಿತ್ತು. ಈ ಬಾರಿಯೂ ಎಲ್ಲ ಸಹಕಾರಿಗಳಿಂದ ಸಕಾರಾತ್ಮಕ ಸ್ಪಂದನೆ ಸಿಗುತ್ತದೆ ಎಂಬ ವಿಶ್ವಾಸವಿದೆ’ ಎಂದರು.
ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿಯಲ್ಲಿ ಎಲ್ಲ ಪಕ್ಷ, ಜಾತಿಯವರಿದ್ದಾರೆ. ಎಲ್ಲರು ಒಮ್ಮತದಿಂದ 25 ವರ್ಷಗಳಿಂದ ಬ್ಯಾಂಕ್ ನಡೆಯುತ್ತಿದೆ. ಎಲ್ಲ ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗುತ್ತದೆ ಎಂದು ನಂಬಿದ್ದೇನೆ. ಮತದಾನ ಆದರೂ ಕೂಡ ಸಹಕಾರಿಗಳ ಮನಸ್ಸಲ್ಲಿ ಪ್ರೀತಿ, ವಿಶ್ವಾಸ ಗಳಿಸಿದವರು ವಿಜೇತರಾಗುತ್ತಾರೆ ಎಂದು ಹೇಳಿದರು.
ರಾಜಕಾರಣದಲ್ಲಿ ಯಾವಾಗ, ಏನಾಗುತ್ತದೆ ಎಂದು ಊಹಿಸಲು ಆಗುವುದಿಲ್ಲ. ನಾಮಪತ್ರ ಸಲ್ಲಿಸಲು ಎಲ್ಲರಿಗೂ ಅಧಿಕಾರ ಇದೆ. ಯಾರನ್ನೂ ಬೇಡ ಎನ್ನಲು ಆಗುವುದಿಲ್ಲ. ಅಪೇಕ್ಷೆ ಇದ್ದವರು ಸ್ಪರ್ಧಿಸುತ್ತಾರೆ. ಮತದಾರರು ಆಶೀರ್ವಾದ ಮಾಡಿದರೆ ನಿರ್ದೇಶಕರಾಗಿ ಆಯ್ಕೆಯಾಗುತ್ತಾರೆ ಎಂದು ತಿಳಿಸಿದರು.
ನಾಮಪತ್ರ ಸಲ್ಲಿಸಿದವರು ತುಮಕೂರು– ಕೆ.ಎನ್.ರಾಜಣ್ಣ ತಿಪಟೂರು– ಶಾಸಕ ಕೆ.ಷಡಕ್ಷರಿ ಪಾವಗಡ– ಶಾಸಕ ಎಚ್.ವಿ.ವೆಂಕಟೇಶ್ ಚಿಕ್ಕನಾಯಕನಹಳ್ಳಿ– ಎಸ್.ಆರ್.ರಾಜಕುಮಾರ್ ಕುಣಿಗಲ್– ಬಿ.ಶಿವಣ್ಣ ಎಸ್.ಪ್ರಮೋದ್ ಮಧುಗಿರಿ– ಜಿ.ಜೆ.ರಾಜಣ್ಣ ತುರುವೇಕೆರೆ– ಎಂ.ಸಿದ್ದಲಿಂಗಪ್ಪ ಶಿರಾ ಜಿ.ಎಸ್.ರವಿ ಕೊರಟಗೆರೆ– ಎಸ್.ಹನುಮಾನ್ ಗುಬ್ಬಿ– ಎಚ್.ಸಿ.ಪ್ರಭಾಕರ್. ‘ಬಿ’ ವರ್ಗ– ವಿಧಾನ ಪರಿಷತ್ ಸದಸ್ಯ ಆರ್.ರಾಜೇಂದ್ರ ‘ಸಿ’ ವರ್ಗ– ಎಸ್.ಲಕ್ಷ್ಮಿನಾರಾಯಣ್ ‘ಡಿ’ ವರ್ಗ– ಬಿ. ನಾಗೇಶ್‍ಬಾಬು ಡಿ (1) ರಲ್ಲಿ ಮಹಿಳಾ ಸಹಕಾರ ಸಂಘದಿಂದ ಮಾಲತಿ ಅವರು ಉಮೇದುವಾರಿಕೆ ದಾಖಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.