ADVERTISEMENT

ಭಾಷೆ ಉಳಿವಿಗೆ ಕನ್ನಡದಲ್ಲೇ ವ್ಯವಹರಿಸಿ: ಜೆ.ಸಿ. ಮಾಧುಸ್ವಾಮಿ

ಸಾಂಸ್ಕೃತಿಕ ಪ್ರಕಾರಗಳನ್ನು ಶಾಸ್ತ್ರೀಯವಾಗಿ ಸಶಕ್ತಗೊಳಿಸಿ: ಜೆ.ಸಿ. ಮಾಧುಸ್ವಾಮಿ ಅಭಿಮತ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2022, 6:37 IST
Last Updated 2 ನವೆಂಬರ್ 2022, 6:37 IST
ಚಿಕ್ಕನಾಯಕನಹಳ್ಳಿಯಲ್ಲಿ ಆಯೋಜಿಸಿದ್ದ ರಾಜ್ಯೋತ್ಸವದಲ್ಲಿ ರೋಟರಿ ಶಾಲೆಯವರು ಪ್ರದರ್ಶಿಸಿದ್ದ ಪುನೀತ್‌ ರಾಜ್‌ಕುಮಾರ್‌ ಪುಣ್ಯಸ್ಮರಣೆ ಸ್ಥಬ್ಧಚಿತ್ರ
ಚಿಕ್ಕನಾಯಕನಹಳ್ಳಿಯಲ್ಲಿ ಆಯೋಜಿಸಿದ್ದ ರಾಜ್ಯೋತ್ಸವದಲ್ಲಿ ರೋಟರಿ ಶಾಲೆಯವರು ಪ್ರದರ್ಶಿಸಿದ್ದ ಪುನೀತ್‌ ರಾಜ್‌ಕುಮಾರ್‌ ಪುಣ್ಯಸ್ಮರಣೆ ಸ್ಥಬ್ಧಚಿತ್ರ   

ಚಿಕ್ಕನಾಯಕನಹಳ್ಳಿ: ಭಾಷೆ ಉಳಿಯಬೇಕಾದರೆ ನಾವೆಲ್ಲರೂ ಕನ್ನಡದಲ್ಲೇ ಮಾತನಾಡುವ ಔದಾರ್ಯ ತೋರಬೇಕು ಎಂದು ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದರು.

ಇಲ್ಲಿನ ತಾಲ್ಲೂಕು ಕ್ರೀಡಾಂಗಣದಲ್ಲಿ ಆಯೋಜಿಸಿದ್ದ 67ನೇ ಕನ್ನಡ ರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ನಗರ ಪ್ರದೇಶಗಳಲ್ಲಿ ಕನ್ನಡಿಗರು ಅನ್ಯಭಾಷಿಕರ ಜತೆ ಅವರದೇ ಭಾಷೆಯಲ್ಲಿ ಮಾತನಾಡುವುದನ್ನು ಮೊದಲು ಬಿಡಬೇಕು. ನಮ್ಮ ಭಾಷೆ ಬೆಳೆಯಬೇಕಾದರೆ ಈ ನೆಲದ ಕಲೆ, ಸಾಹಿತ್ಯ, ನಾಟಕ ಮತ್ತಿತರ ಸಾಂಸ್ಕೃತಿಕ ಪ್ರಕಾರಗಳನ್ನು ಮತ್ತಷ್ಟು ಶಾಸ್ತ್ರೀಯವಾಗಿ ಸಶಕ್ತಗೊಳಿಸಬೇಕು. ಈ ಕೈಂಕರ್ಯದಲ್ಲಿ ನಾವೆಲ್ಲರೂ ತೊಡಗಬೇಕು ಎಂದರು.

ADVERTISEMENT

ಪರಭಾಷೆ ಹಾಗೂ ಡಬ್ಬಿಂಗ್ ಸಿನಿಮಾಗಳ ಹಾವಳಿಯಿಂದ ಕನ್ನಡದ ಚಿತ್ರಗಳು ಸೊರಗುವಂತಾಗಿದೆ. ಚಿತ್ರ ನಿರ್ಮಾಪಕರ ಬೇಡಿಕೆ ಆಧರಿಸಿ ಸಾಧ್ಯವಾದಷ್ಟು ಮಟ್ಟಿಗೆ 200 ಸೀಟುಗಳುಳ್ಳ ಚಿತ್ರಮಂದಿರಗಳನ್ನು ಸರ್ಕಾರವೇ ನಿರ್ಮಿಸಿ ಕನ್ನಡ ಸಿನಿಮಾಗಳಿಗೆ ಅನುಕೂಲ ಮಾಡಿಕೊಡಬೇಕೆಂಬ ಮನವಿಯನ್ನು ಸರ್ಕಾರದ ಮುಂದಿಟ್ಟಿರುವುದಾಗಿ ತಿಳಿಸಿದರು.

ರಾಜ್ಯದಲ್ಲಿ ಕಾನೂನಾತ್ಮಕವಾಗಿ ಕನ್ನಡ ಬಳಕೆ ಕಡ್ಡಾಯಗೊಳಿಸುವ ನಿಟ್ಟಿನಲ್ಲಿ ಮಸೂದೆಯೊಂದನ್ನು ಮಂಡಿಸಿರುವುದಾಗಿ ತಿಳಿಸಿದ ಅವರು, ಮುಂದಿನ ಅಧಿವೇಶನದಲ್ಲಿ ಕಾರ್ಯರೂಪಕ್ಕೆ ಬರುವ ಸಂಭವವಿದೆ. ಉಚ್ಛ ನ್ಯಾಯಾಲಯ ಬಿಟ್ಟು ಉಳಿದೆಲ್ಲ ನ್ಯಾಯಾಲಯಗಳಲ್ಲಿ ಕನ್ನಡ ಬಳಕೆ ಕಡ್ಡಾಯವಾಗಬೇಕಿದೆ ಎಂದರು.

ಶಾಸ್ತ್ರೀಯ ಭಾಷೆಯ ಸ್ಥಾನಮಾನ ದೊರೆತರೂ ಕನ್ನಡದ ಸ್ಥಿತಿ ಬದಲಾಗಿಲ್ಲ. ಭಾಷೆಯ ಬೆಳವಣಿಗೆಗೆ ಪೂರಕ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದರು.

ರಾಜ್ಯ ಸರ್ಕಾರ ರೈತರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡುವ ಯೋಜನೆ ತಂದಿದೆ. ರಾಜ್ಯದ ನದಿಗಳ ಜೋಡಣೆ ಮೂಲಕ ಗ್ರಾಮೀಣ ರೈತರ ಹಿತ ಕಾಯುವತ್ತ ಸರ್ಕಾರ ಗಮನ ನೀಡಲಿದೆ. ಸಹಾಯಧನ ನೀಡಿದ್ದರಿಂದ ರಾಜ್ಯದಲ್ಲಿ ಹಾಲಿನ ಉತ್ಪಾದನೆ 88 ಲಕ್ಷ ಲೀಟರ್‌ಗೆ ಹೆಚ್ಚಳವಾಗಿದೆ ಎಂದು ತಿಳಿಸಿದರು.

ತಹಶೀಲ್ದಾರ್ ತೇಜಸ್ವಿನಿ ನಾಡ ಧ್ವಜಾರೋಹಣ ನೆರವೇರಿಸಿದರು. ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ಐದು ಸ್ಕೂಟರ್‌ಗಳನ್ನು ‌ಸಚಿವರು ಫಲಾನುಭವಿಗಳಿಗೆ ಹಸ್ತಾಂತರಿಸಿದರು. ಪಶು ಚಿಕಿತ್ಸೆಗಾಗಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಜಾರಿಗೆ ತಂದಿರುವ ಸಂಚಾರಿ ಚಿಕಿತ್ಸಾ ವಾಹನಕ್ಕೆ ಚಾಲನೆ ನೀಡಲಾಯಿತು.

ಸ್ಥಬ್ಧ ಚಿತ್ರಗಳನ್ನೊಳಗೊಂಡು ವಿವಿಧ ಶಾಲೆಗಳ ಸಾವಿರಾರು ವಿದ್ಯಾರ್ಥಿಗಳು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು.

ಅಪ್ಪು ಸ್ಮರಣೆ: ಪಟ್ಟಣದ ರೋಟರಿ ಶಾಲೆಯವರು ಸಿದ್ಧಪಡಿಸಿದ ದಿ.ನಟ ಪುನೀತ್‌ ರಾಜ್‌ಕುಮಾರ್‌ ಚಿರಸ್ಮರಣೆ ಸ್ಥಬ್ಧಚಿತ್ರ ಗಮನ ಸೆಳೆಯಿತು. ಡಾ. ರಾಜ್‌ಕುಮಾರ್, ಪುನೀತ್‌ ರಾಜ್‌ಕುಮಾರ್ ಅಭಿನಯದ ಭಕ್ತ ಪ್ರಹ್ಲಾದ ಚಿತ್ರದ ದೃಶ್ಯ ಪ್ರದರ್ಶಿಸಲಾಯಿತು.

ಪುರಸಭಾ ಅಧ್ಯಕ್ಷೆ ಪುಷ್ಪಾ, ಉಪಾಧ್ಯಕ್ಷೆ ಲಕ್ಷ್ಮಿ, ತಾಪಂ ಇಒ ವಸಂತಕುಮಾರ್, ಪುರಸಭೆ ಮುಖ್ಯಾಧಿಕಾರಿ ಶ್ರೀನಿವಾಸ್, ಕನ್ನಡ ಸಂಘದ ವೇದಿಕೆ ಅಧ್ಯಕ್ಷ ರೇಣುಕಸ್ವಾಮಿ, ಕೃಷ್ಣೇಗೌಡ, ಸಿ.ಡಿ.ಚಂದ್ರಶೇಖರ್, ತರಬೇನಹಳ್ಳಿ ಷಡಕ್ಷರಿ, ಕಸಾಪ ತಾಲೂಕು ಅಧ್ಯಕ್ಷ ರವಿಕುಮಾರ್, ಅಧಿಕಾರಿಗಳು, ಶಿಕ್ಷಕರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.