ADVERTISEMENT

ತುಮಕೂರು: ರಾಗಿ ಬೆಳೆಗೆ ಹೇಮಾವತಿ ನೀರು ನೀಡಲು ನಿರ್ಧಾರ

​ಪ್ರಜಾವಾಣಿ ವಾರ್ತೆ
Published 21 ಜುಲೈ 2021, 5:44 IST
Last Updated 21 ಜುಲೈ 2021, 5:44 IST
ಕುಣಿಗಲ್ ತಾಲ್ಲೂಕು ಮಾರ್ಕೋನಹಳ್ಳಿ ಜಲಾಶಯದ ಪ್ರವಾಸಿ ಮಂದಿರದಲ್ಲಿ ನಡೆದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಶಾಸಕ ಡಾ.ರಂಗನಾಥ್ ಮಾತನಾಡಿದರು. ಉಪವಿಭಾಗಾಧಿಕಾರಿ ಅಜೇಯ್, ಸಹಾಯಕ ಕೃಷಿ ನಿರ್ದೇಶಕಿ ಸೌಮ್ಯಶ್ರೀ, ತಹಶೀಲ್ದಾರ್ ಮಹಾಬಲೇಶ್ವರ್, ಹೇಮಾವತಿ ನಾಲಾ ವಲಯದ ಕಾರ್ಯಪಾಲಕ ಇಂಜನಿಯರ್ ಜಯರಾಮಯ್ಯ ಇದ್ದಾರೆ
ಕುಣಿಗಲ್ ತಾಲ್ಲೂಕು ಮಾರ್ಕೋನಹಳ್ಳಿ ಜಲಾಶಯದ ಪ್ರವಾಸಿ ಮಂದಿರದಲ್ಲಿ ನಡೆದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಶಾಸಕ ಡಾ.ರಂಗನಾಥ್ ಮಾತನಾಡಿದರು. ಉಪವಿಭಾಗಾಧಿಕಾರಿ ಅಜೇಯ್, ಸಹಾಯಕ ಕೃಷಿ ನಿರ್ದೇಶಕಿ ಸೌಮ್ಯಶ್ರೀ, ತಹಶೀಲ್ದಾರ್ ಮಹಾಬಲೇಶ್ವರ್, ಹೇಮಾವತಿ ನಾಲಾ ವಲಯದ ಕಾರ್ಯಪಾಲಕ ಇಂಜನಿಯರ್ ಜಯರಾಮಯ್ಯ ಇದ್ದಾರೆ   

ಕುಣಿಗಲ್: ತಾಲ್ಲೂಕಿನ ಮಾರ್ಕೋನಹಳ್ಳಿ, ಮಂಗಳ ಜಲಾಶಯದ ಅಚ್ಚುಕಟ್ಟು ಪ್ರದೇಶದ ರೈತರ ರಾಗಿ ಬೆಳೆಗೆ ನೀರನ್ನು ಕೊಡಲು ಉಪವಿಭಾಗಾಧಿಕಾರಿ ಅಜೇಯ್ ಅಧ್ಯಕ್ಷತೆಯಲ್ಲಿ ನಡೆದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು.

ಹೇಮಾವತಿ ನಾಲಾ ವಲಯದ ಕಾರ್ಯಪಾಲಕ ಎಂಜನಿಯರ್ ಜಯರಾಮಯ್ಯ ಮಾತನಾಡಿ, ರಾಗಿ ಬೆಳೆದರೆ ನೀರು ಉಳಿತಾಯವಾಗುವುದಲ್ಲದೆ, ಅಂತರ್ಜಲ ಹೆಚ್ಚಾಗುತ್ತದೆ ಎಂದರು.

ಮಾರ್ಕೋನಹಳ್ಳಿ ಜಲಾಶಯದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ರೈತರು ಕೂಡ ಅಭಿಪ್ರಾಯ ವ್ಯಕ್ತಪಡಿಸಿದರು. ಜಲಾಶಯದ ಅಚ್ಚುಕಟ್ಟು ಪ್ರದೇಶದಲ್ಲಿ ಮೊದಲಿಂದಲೂ ಭತ್ತ ಬೆಳೆಯುತ್ತಿದ್ದು, ಇತ್ತೀಚಿನ ಕೆಲವು ವರ್ಷಗಳಿಂದ ರಾಗಿ ಬೆಳೆಯಲು ಸೂಚನೆ ನೀಡಲಾದ ಕಾರಣ ರಾಗಿ ಬೆಳೆಯಲಾಗುತ್ತಿದೆ. ಸದ್ಯ ಸರ್ಕಾರ ಉಚಿತ ಅಕ್ಕಿ ನೀಡುತ್ತಿದೆ. ಮುಂದಿನ ದಿನಗಳಲ್ಲಿ ಭತ್ತ ಬೆಳೆಯದಿದ್ದಲ್ಲಿ ಅಕ್ಕಿಯನ್ನು ಕೆ.ಜಿ.ಗೆ ₹50 ನೀಡಿ ಖರೀದಿಸಬೇಕಾಗುತ್ತದೆ. ಭತ್ತ ಬೆಳೆಯಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದ್ದರು.

ADVERTISEMENT

ಒಂದು ವರ್ಗದ ರೈತರು ರಾಗಿ ಬೆಳೆಯಲು ಭತ್ತಕ್ಕಿಂತಲೂ ಕಡಿಮೆ ಪ್ರಮಾಣದ ನೀರಿನ ಅಗತ್ಯವಿದೆ. ಅಲ್ಲದೆ 120 ದಿನಗಳಲ್ಲಿ ಜಲಾಶಯದಲ್ಲಿರುವ ನೀರಿಗನುಗುಣವಾಗಿ ರಾಗಿ ಬೆಳೆದರೆ ನೀರಿನ ಉಳಿತಾಯವಾಗುತ್ತದೆ. ರಾಗಿಗೆ ಸರ್ಕಾರ ಬೆಂಬಲ ಬೆಲೆ ನೀಡುತ್ತಿರುವುದರಿಂದ ರೈತರಿಗೆ ಆರ್ಥಿಕವಾಗಿ ಹೆಚ್ಚು ಅನುಕೂಲವಾಗುತ್ತದೆ ಎಂದರು.

ಶಾಸಕ ಡಾ.ರಂಗನಾಥ ರೈತರ ಅಭಿಪ್ರಾಯ ಸಂಗ್ರಹಿಸಿ ಮಾತನಾಡಿ, ಜಲಾಶಯದ ನೀರಿನ ಲಭ್ಯತೆ ಮತ್ತು ರೈತರ ಆರ್ಥಿಕ ಪ್ರಗತಿಯ ದೃಷ್ಟಿಯಿಂದ ರಾಗಿ ಬೆಳೆಯುವುದನ್ನು ಬೆಂಬಲಿಸಿದರು. ತಾಲ್ಲೂಕಿನಲ್ಲಿ ಕಳೆದ ಸಾಲಿನಲ್ಲಿ 10,595 ರೈತರ ರಾಗಿ ಖರೀದಿ ಮಾಡಲಾಗಿದೆ. 8,017 ರೈತರಿಗೆ ಹಣ ನೀಡಲಾಗಿದೆ. ಉಳಿದ 2,575
ರೈತರಿಗೆ ಹಣ ಬಿಡುಗಡೆಯಾಗಿದೆ ಎಂದರು.

ಗ್ರಾಮಸ್ಥರ ಆರೋಪ: ಮಾರ್ಕೋನಹಳ್ಳಿ ಜಲಾಶಯದ ವ್ಯಾಪ್ತಿಯ ಸಾಲುಗೆರೆಗಳ ಪೈಕಿ ಸೆಣಬ ಕೆರೆಯಿಂದ ಪಲ್ಲೆರಾಯನಹಳ್ಳಿ ವ್ಯಾಪ್ತಿಯಲ್ಲಿ ಸಾವಿರ ಎಕರೆ ಅಚ್ಚಕಟ್ಟು ಪ್ರದೇಶವಿದ್ದು, ಈ ಭಾಗದ ನಾಲೆಯನ್ನು ಸೋಸದ ( ಹೂಳು ಎತ್ತದ) ಕಾರಣ ಸೆಣಬ, ಕೋಡಹಳ್ಳಿ, ಕಿಲಾರ, ಪಲ್ಲೆರಾಯನಹಳ್ಳಿ, ತೋರೆ ಬೊಮ್ಮನಹಳ್ಳಿ ಮತ್ತು ಪುರ ವ್ಯಾಪ್ತಿಯ ಪ್ರದೇಶಗಳಿಗೆ ನೀರು
ಇಪ್ಪತ್ತು ವರ್ಷಗಳಿಂದ ಹರಿದಿಲ್ಲ ಕೂಡಲೇ ಗಮನ ಹರಿಸಲು ಗ್ರಾಮಸ್ಥರು ಸಭೆಯಲ್ಲಿ ಆಗ್ರಹಿಸಿದರು.

ತಹಶೀಲ್ದಾರ್ ಮಹಾಬಲೇಶ್ವರ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಸೌಮ್ಯಶ್ರೀ, ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ನಾಗರಾಜು, ನಾಲಾವಲಯದ ಎಂಜನಿಯರ್ ಜೈರಾಜ್, ಆನಂದ್, ಗೋವಿಂದೇಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.