ADVERTISEMENT

ಇಳಿದ ತರಕಾರಿ, ಹೆಚ್ಚಿದ ಹಣ್ಣಿನ ಬೆಲೆ

ಮೀನು, ಕೋಳಿಯೂ ದುಬಾರಿ: ಧಾನ್ಯಗಳ ಬೆಲೆಯಲ್ಲಿ ಹೆಚ್ಚಿನ ವ್ಯತ್ಯಾಸವಿಲ್ಲ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2021, 5:39 IST
Last Updated 28 ಫೆಬ್ರುವರಿ 2021, 5:39 IST
ಹಣ್ಣು
ಹಣ್ಣು   

ತುಮಕೂರು: ಈ ವಾರ ಮಾರುಕಟ್ಟೆಯಲ್ಲಿ ತರಕಾರಿ ಬೆಲೆಯಲ್ಲಿ ಹೆಚ್ಚಿನ ವ್ಯತ್ಯಾಸ ಕಂಡು ಬಂದಿಲ್ಲ. ಆದರೆ ಅಡುಗೆ ಎಣ್ಣೆ ಬೆಲೆ ಏರಿಕೆ ಮುಂದುವರಿದಿದ್ದರೆ, ಕೋಳಿ, ಮೀನಿನ ಬೆಲೆಯೂ ದುಬಾರಿಯಾಗಿದೆ.

ಮತ್ತೆ ಏರಿಕೆಯತ್ತ ಮುಖ ಮಾಡಿದ್ದ ಬೀನ್ಸ್ ಬೆಲೆ ಸ್ಥಿರವಾಗಿದೆ. ಬೆಂಡೆಕಾಯಿ ಬೆಲೆಯೂ ಕಡಿಮೆಯಾಗಿದೆ. ಬೀನ್ಸ್ ಕೆ.ಜಿ ₹ 25–30ಕ್ಕೆ, ಬೆಂಡೆಕಾಯಿ ₹ 25–30ಕ್ಕೆ ಇಳಿಕೆಯಾಗಿದೆ.

ಬೇಸಿಗೆ ಕಾಲಿಟ್ಟಿದ್ದು, ತಂಪು ಪಾನೀಯಗಳಿಗೆ ಹೆಚ್ಚಾಗಿ ಬಳಸುವ ನಿಂಬೆ ಹಣ್ಣು ಬೆಲೆ ಕೊಂಚ ದುಬಾರಿಯಾಗಿದೆ. ಉಳಿದಂತೆ ತರಕಾರಿ, ಸೊಪ್ಪಿನ ಬೆಲೆಯಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ.

ADVERTISEMENT

ಬಿಸಿಲು ಹೆಚ್ಚಾದಂತೆ ಜನರೂ ಪಾನೀಯಗಳಿಗೆ ಮೊರೆ ಹೋಗುತ್ತಿದ್ದು, ಹಣ್ಣಿನ ಬೆಲೆ ಏರಿಕೆಯತ್ತ ಮುಖಮಾಡಿದೆ. ಜೂಸ್‌ಗೆ ಬಳಸುವ ಮೂಸಂಬಿ, ಕಿತ್ತಳೆ, ಕಲ್ಲಂಗಡಿ ಹಣ್ಣಿನ ಬೆಲೆ ಹೆಚ್ಚಳವಾಗುತ್ತಿದೆ.

ಧಾನ್ಯಗಳ ಬೆಲೆಯಲ್ಲಿ ಹೆಚ್ಚಿನ ವ್ಯತ್ಯಾಸ ಕಂಡುಬಂದಿಲ್ಲ. ಕಡಲೆ ಬೀಜ, ಬಟಾಣಿ ಬೆಲೆ ಅಲ್ಪ ಏರಿಕೆಯಾಗಿದ್ದು, ಅಡುಗೆ ಎಣ್ಣೆ ಧಾರಣೆ ಇಳಿಯುವಂತೆ ಕಾಣುತ್ತಿಲ್ಲ. ಸನ್‌ಫ್ಲವರ್ ಕೆ.ಜಿ ₹ 145, ಪಾಮಾಯಿಲ್ ಕೆ.ಜಿ ₹ 115ಕ್ಕೆ ಮಾರಾಟವಾಗುತ್ತಿದೆ. ಹುಣಸೆ ಹಣ್ಣು ಮಾರುಕಟ್ಟೆಗೆ ಬರಲಾರಂಭಿಸಿದ್ದು, ಬೆಲೆ ಇಳಿಕೆಯಾಗುತ್ತಿದೆ.

ಕೋಳಿ ದುಬಾರಿ: ಕಳೆದ ಕೆಲ ವಾರಗಳಿಂದ ಸ್ಥಿರವಾಗಿದ್ದ ಕೋಳಿ ಬೆಲೆ, ಈ ವಾರ ಹೆಚ್ಚಳವಾಗಿದೆ. ಕೆ.ಜಿ ₹ 110ಕ್ಕೆ ಮಾರಾಟವಾಗುತ್ತಿದ್ದ ಬ್ರಾಯ್ಲರ್ ಕೋಳಿ ಈಗ ₹ 130ಕ್ಕೆ ಜಿಗಿದಿದೆ. ರೆಡಿ ಚಿಕನ್ ಕೆ.ಜಿ ₹ 200ಕ್ಕೆ, ಮೊಟ್ಟೆಕೋಳಿ ಕೆ.ಜಿ ₹ 110ಕ್ಕೆ ಅಂಗಡಿಗಳಲ್ಲಿ ಮಾರಾಟವಾಗುತ್ತಿದೆ.

ಮೀನಿನ ಬೆಲೆಯೂ ಏರಿಕೆ: ಮೀನಿನ ಬೆಲೆಯೂ ಏರಿಕೆಯತ್ತ ಸಾಗಿದೆ. ಮಾರುಕಟ್ಟೆಗೆ ಮೀನು ಬರುವುದು ಕಡಿಮೆಯಾಗಿದ್ದು, ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ. ಡೀಸೆಲ್ ಬೆಲೆ ದುಬಾರಿಯಾಗಿರುವುದು, ಮೀನುಗಾರಿಕೆ ನಡೆಸಿ ಜೀವನ ನಡೆಸುವುದು ಕಷ್ಟಕರವಾದ ಪರಿಸ್ಥಿತಿ ಕರಾವಳಿ ಪ್ರದೇಶದಲ್ಲಿ ನಿರ್ಮಾಣವಾಗಿದೆ. ಬೋಟುಗಳು ಆಳ ಸಮುದ್ರಕ್ಕೆ ಇಳಿದು ಮೀನುಗಾರಿಕೆ ಮಾಡುತ್ತಿಲ್ಲ. ಸಾಕಷ್ಟು ಬೋಟುಗಳು ಸಮುದ್ರಕ್ಕೆ ಇಳಿಯುತ್ತಿಲ್ಲ. ಹಾಗಾಗಿ ಮೀನಿನ ಆವಕ ಕಡಿಮೆಯಾಗಿ, ಬೆಲೆ ಏರಿಕೆಯಾಗಿದೆ.

ಬೊಳಿಂಜರ್, ಬೂತಾಯಿ ಮೀನು ಬರುತ್ತಿಲ್ಲ. ಬಂಗುಡೆ ಕೆ.ಜಿ ₹ 280, ಅಂಜಲ್ ₹ 750, ಬಿಳಿಮಾಂಜಿ ₹ 860, ಕಪ್ಪುಮಾಂಜಿ ₹ 580, ಸೀಗಡಿ ಕೆ.ಜಿ ₹ 550ಕ್ಕೆ ನಗರದ ಮತ್ಸ್ಯದರ್ಶಿನಿಯಲ್ಲಿ ಮಾರಾಟವಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.