ADVERTISEMENT

ಅಶ್ವತ್ಥನಾರಾಯಣ ಬಂಧನಕ್ಕೆ ತುಮಕೂರು ಜಿಲ್ಲಾ ಕುರುಬರ ಸಂಘ ಆಗ್ರಹ

ಸಚಿವರ ಹೇಳಿಕೆಗೆ ಖಂಡನೆ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2023, 15:03 IST
Last Updated 16 ಫೆಬ್ರುವರಿ 2023, 15:03 IST
   

ತುಮಕೂರು: ‘ಟಿಪ್ಪುವನ್ನು ಮೇಲಕ್ಕೆ ಕಳುಹಿಸಿದಂತೆ ಸಿದ್ದರಾಮಯ್ಯ ಅವರನ್ನೂ ಹೊಡೆದುಹಾಕಿ’ ಎಂಬ ಉನ್ನತ ಶಿಕ್ಷಣ ಸಚಿವ ಸಿ.ಎನ್‌.ಅಶ್ವತ್ಥನಾರಾಯಣ ಅವರ ಹೇಳಿಕೆಯನ್ನು ಜಿಲ್ಲಾ ಕುರುಬರ ಸಂಘ ಖಂಡಿಸಿದೆ.

ಸಚಿವ ಅಶ್ವತ್ಥನಾರಾಯಣ ಅವರನ್ನು ಬಂಧಿಸಿ, ಕಾನೂನು ಕ್ರಮಕೈಗೊಳ್ಳಬೇಕು. ಬಹಿರಂಗವಾಗಿ ಸಿದ್ದರಾಮಯ್ಯ ಅವರ ಕ್ಷಮೆ ಕೇಳಬೇಕು ಎಂದು ಸಂಘದ ಅಧ್ಯಕ್ಷ ಟಿ.ಆರ್‌.ಸುರೇಶ್‌ ಆಗ್ರಹಿಸಿದ್ದಾರೆ.

ಬಂಧನಕ್ಕೆ ಒತ್ತಾಯ: ಸಚಿವ ಸಿ.ಎನ್.ಅಶ್ವತ್ಥನಾರಾಯಣ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್ ಕಟೀಲ್‌ ಪ್ರಚೋದನಾಕಾರಿ ಹೇಳಿಕೆಗಳ ಮೂಲಕ ಹಿಂಸೆಗೆ ಕರೆ ನೀಡಿದ್ದಾರೆ. ಈ ಇಬ್ಬರನ್ನು ಕೂಡಲೇ ಬಂಧಿಸಬೇಕು ಎಂದು ಸಿಪಿಐಎಂ ಒತ್ತಾಯಿಸಿದೆ.

ADVERTISEMENT

‘ಟಿಪ್ಪುವನ್ನು ಪ್ರೀತಿಸುವವರು ಉಳಿಯಬಾರದು’ ಎಂದು ಕಟೀಲ್‌ ಹೇಳುತ್ತಾರೆ, ‘ಟಿಪ್ಪುವನ್ನು ಮೇಲಕ್ಕೆ ಕಳುಹಿಸಿದಂತೆ ಸಿದ್ದರಾಮಯ್ಯ ಅವರನ್ನು ಹೊಡೆಯಬೇಕು’ ಎಂದು ಅಶ್ವತ್ಥನಾರಾಯಣ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಗಳಿಂದ ಯಾರಾದರೂ ಪ್ರೇರೇಪಿತರಾಗಿ ಇಂತಹ ಕೃತ್ಯಗಳಿಗೆ ಮುಂದಾಗಬಹುದು. ಪ್ರಚೋದನಕಾರಿ ಹೇಳಿಕೆಗಳಿಗೆ ಕಡಿವಾಣ ಹಾಕಬೇಕು ಎಂದು ಸಿಪಿಐಎಂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಸೈಯದ್‌ ಮುಜೀಬ್‌, ಜಿಲ್ಲಾ ಕಾರ್ಯದರ್ಶಿ ಎನ್‌.ಕೆ.ಸುಬ್ರಮಣ್ಯ ಆಗ್ರಹಿಸಿದ್ದಾರೆ.

ಬಿಜೆಪಿ ಸರ್ಕಾರ ತನ್ನ ಕೆಲಸಗಳಿಂದ ಜನಸಾಮಾನ್ಯರ ಒಲವು ಗಳಿಸಿಕೊಳ್ಳಲಾಗದೆ, ಚುನಾವಣೆ ಸಮಯದಲ್ಲಿ ತಮ್ಮ ಮುಖಂಡರ ಮೂಲಕ ದ್ವೇಷ ಹರಡುವ, ಹಿಂಸಾಚಾರಕ್ಕೆ ಉತ್ತೇಜನ ನೀಡುವ ಮಾತುಗಳನ್ನು ಆಡಿಸುತ್ತಿದೆ. ಜನರನ್ನು ಕಚ್ಚಾಟಕ್ಕೆ ಇಳಿಸಿ ಪಡೆದ ಅಧಿಕಾರವನ್ನು ಅದೇ ಜನರನ್ನು ದಿವಾಳಿ ಮಾಡಲು ಬಳಸುತ್ತಿದೆ ಎಂದು ಕಿಡಿಕಾರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.