ADVERTISEMENT

ಮಣ್ಣಿನ ವಸ್ತುಗಳಿಗೆ ಭವಿಷ್ಯದಲ್ಲಿ ಬೇಡಿಕೆ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2021, 3:10 IST
Last Updated 27 ಫೆಬ್ರುವರಿ 2021, 3:10 IST
ಗಂಕಾರನಹಳ್ಳಿಯಲ್ಲಿ ನಡೆದ ತರಬೇತಿ ಶಿಬಿರದಲ್ಲಿ ಕುಂಬಾರರಿಗೆ ವಿದ್ಯುತ್ ಚಾಲಿತ ತಿಗರಿ ಯಂತ್ರಗಳನ್ನು ವಿತರಿಸಲಾಯಿತು
ಗಂಕಾರನಹಳ್ಳಿಯಲ್ಲಿ ನಡೆದ ತರಬೇತಿ ಶಿಬಿರದಲ್ಲಿ ಕುಂಬಾರರಿಗೆ ವಿದ್ಯುತ್ ಚಾಲಿತ ತಿಗರಿ ಯಂತ್ರಗಳನ್ನು ವಿತರಿಸಲಾಯಿತು   

ಕೊಡಿಗೇನಹಳ್ಳಿ: ದೇಶವು ಮುಂದೆ ಪ್ಲಾಸ್ಟಿಕ್ ಮುಕ್ತವಾಗಲಿದ್ದು, ಪ್ರಕೃತಿಕವಾಗಿ ತಯಾರಾಗುವ ವಸ್ತುಗಳಿಗೆ ಭವಿಷ್ಯದಲ್ಲಿ ಭಾರಿ ಬೇಡಿಕೆ ಸೃಷ್ಟಿಯಾಗಲಿದೆ. ಆದ್ದರಿಂದ ಕುಂಬಾರರು ವೃತ್ತಿಯಲ್ಲಿ ವೈವಿಧ್ಯತೆ ಅಳವಡಿಸಿಕೊಳ್ಳುವುದರ ಮೂಲಕ ಆರ್ಥಿಕವಾಗಿ ಸದೃಢರಾಗಿ ಎಂದು ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ಸಹಾಯಕ ನಿರ್ದೇಶಕ ಅರುಣ್ ರಾಜ್ ತಿಳಿಸಿದರು.

ಪುರವರ ಹೋಬಳಿಯ ಗಂಕಾರನಹಳ್ಳಿಯಲ್ಲಿ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ ಬೆಂಗಳೂರು ಹಾಗೂ ಕುಂಭಕಲಾ ಕುಶಲ
ಕರ್ಮಿಗಳ ಸಂಘದ ಸಹಯೋಗದಿಂದ ನಡೆದ ತರಬೇತಿ ಶಿಬಿರದಲ್ಲಿ ತರಬೇತು ದಾರರಿಗೆ ವಿದ್ಯುತ್ ಚಾಲಿತ ತಿಗರಿ ಯಂತ್ರಗಳನ್ನು ವಿತರಿಸಿ ಮಾತನಾಡಿದರು.

ಖಾದಿ ಗ್ರಾಮೋದ್ಯೋಗ ಆಯೋಗದ ಸಂಯೋಜಕ ಮರಾಠೆ ಮಾತನಾಡಿ, ಹೆಚ್ಚು ಬಾಳಿಕೆ ಮತ್ತು ಅಡಿಗೆ ಬೇಗ ಆಗಬೇಕೆಂದು ಇಂದಿನ ಜನರು ಸಿಲ್ವರ್ ಹಾಗೂ ಇತರೆ ಪಾತ್ರೆಗಳಿಗೆ ಹೆಚ್ಚು ಆದ್ಯತೆ ನೀಡಿದ ಪರಿಣಾಮ ಇಂದು ನಾವೇ ಬಾಳಿಕೆ ಬರದಂತಾಗಿದೆ. ಮುಂದೆ ರೈಲ್ವೆ ಮತ್ತು ಇತರೆ ಕಡೆ ಮಣ್ಣಿನ ಮಡಿಕೆ ಮತ್ತು ದಿನನಿತ್ಯದ ಬಳಕೆಗೆ ಮಣ್ಣಿನ ವಸ್ತುಗಳ ಅಳವಡಿಕೆಗೆ ಅನುಮತಿ ನೀಡಿರುವುದರಿಂದ ಗ್ರಾಮೀಣ ಭಾಗದ ನಿರುದ್ಯೋಗ ಯುವಕರಿಗೆ ಪ್ರಧಾನಮಂತ್ರಿ ಯೋಜನೆಯಿಂದ ಸಿಗುವ ಸೌಲಭ್ಯಗಳ ಸದ್ಬಳಕೆಗೆ ಅವಕಾಶ ಮಾಡಿಕೊಡಿ’ ಎಂದರು.

ADVERTISEMENT

ತುಮಕೂರು ಜಿಲ್ಲಾ ಕುಂಬಾರರ ಸಂಘದ ಅಧ್ಯಕ್ಷ ಶ್ರೀನಿವಾಸ್ ಮಾತನಾಡಿ, ಕುಂಬಾರಿಕೆ ಕಸುಬು ನಶಿಸುತ್ತಿರುವ ಸಂದರ್ಭದಲ್ಲಿ ಸರ್ಕಾರ ಹಲವು ರೀತಿಯಲ್ಲಿ ಪ್ರೋತ್ಸಾಹ ನೀಡುತ್ತಿದೆ. ಕಸುಬುದಾರರು ಕೇವಲ ವಸ್ತುಗಳನ್ನು ತಯಾರಿಸಿದರೆ ಸಾಲದು ಅವುಗಳನ್ನು ಜನರಿಗೆ ತಲುಪಿಸಲು ಕಾರ್ಯಪ್ರವೃತ್ತರಾಗಬೇಕು ಎಂದರು.

ತುಮಕೂರು ರೈತ ಸಂಘದ ಮುಖಂಡ ಬಸವರಾಜು ಮಾತನಾಡಿ, ಹಿಂದೆ ಸಮಾಜಕ್ಕೆ ಒಂದು ಭಾಗವಾಗಿದ್ದ ಕುಂಬಾರಿಕೆ ವೃತ್ತಿ ಕಾಲಘಟ್ಟ ಬದಲಾದಂತೆ ಕಡೆಗಣನೆಗೆ ಒಳಗಾಗಿದೆ. ವೃತ್ತಿಪರರು ತಮ್ಮ ವಸ್ತುಗಳಿಗೆ ಬೇಡಿಕೆ ಹೆಚ್ಚಿಸಿಕೊಂಡು, ಅದಕ್ಕೆ ತಕ್ಕಂತೆ ಮಾರುಕಟ್ಟೆ ವಿಸ್ತರಿಸಿಕೊಳ್ಳಬೇಕು ಎಂದರು.

ಮಧುಗಿರಿ ತಾಲ್ಲೂಕು ಕುಂಬಾರರ ಸಂಘದ ಅಧ್ಯಕ್ಷ ಮಲ್ಲೇಶಪ್ಪ, ಜಿಲ್ಲಾ ಉಪಾಧ್ಯಕ್ಷ ಗುರುಮೂರ್ತಿ ಮಾತನಾಡಿದರು. ಶಿಕ್ಷಕ ಶಶಿಕುಮಾರ್, ಅಶ್ವತ್ಥಪ್ಪ, ಸಿದ್ದಪ್ಪ, ಮುಖ್ಯ ತರಬೇತಿದಾರ ಸಂಪಂಗಿರಾಮ್, ರೇವಣ್ಣ ಶೆಟ್ಟಿ,ಮಹೇಶ್, ನಾರಾಯಣಗೌಡ, ಮಹೇಶ್, ಮಂಜುನಾಥ್, ತರಬೇತಿ ಆಯೋಜಕರಾದ ಹನುಮಂತರಾಐಪ್ಪ, ಮೋಹನ್, ನಾಗೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.