ADVERTISEMENT

ಶುದ್ಧ ಕುಡಿಯುವ ನೀರು ಸರಬರಾಜಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2025, 5:55 IST
Last Updated 13 ಡಿಸೆಂಬರ್ 2025, 5:55 IST

ಕುಣಿಗಲ್: ಪುರಸಭೆಯ ಕುಡಿಯುವ ನೀರು ಪೂರೈಕೆ ಘಟಕದಲ್ಲಿ ನೀರು ಸಮರ್ಪಕವಾಗಿ ಶುದ್ಧೀಕರಣವಾಗುತ್ತಿಲ್ಲ ಎಂದು ಪುರಸಭೆ ಮಾಜಿ ಅಧ್ಯಕ್ಷ ಕೆ.ಎಲ್. ಹರೀಶ್ ಆರೋಪಿಸಿದರು.

ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ದೊಡ್ಡಕೆರೆಯಿಂದ ನೀರನ್ನು ವಿವಿಧ ಹಂತದಲ್ಲಿ ಶುದ್ಧೀಕರಿಸಿ ಪೂರೈಸಬೇಕು. ಆದರೆ ಪುರಸಭೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಬ್ಲೀಚಿಂಗ್ ಪೌಡರ್, ಕ್ಲೋರಿನ್ ಬಳಸದೆ ನೇರವಾಗಿ ಕೆರೆ ನೀರು ಪೂರೈಕೆ ಮಾಡಲಾಗುತ್ತಿದೆ. ನೀರು ಶುದ್ಧೀಕರಣ ಘಟಕಕ್ಕೆ ಭೇಟಿ ನೀಡಿ ಇದನ್ನು ಪರಿಶೀಲಿಸಿದ್ದೇನೆ’ ಎಂದರು.

ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಅಮೃತ್-2 ಯೋಜನೆ ಅಡಿ ₹50 ಕೋಟಿ ವೆಚ್ಚದಲ್ಲಿ ಶುದ್ಧ ಕುಡಿಯುವ ನೀರು ಪೂರೈಕೆ ಕಾಮಗಾರಿ ನಡೆಸಲಾಗುತ್ತಿದೆ. ಯಾವುದೇ ಅನುಭವ ಇಲ್ಲದ ಕಾಂಗ್ರೆಸ್ ಕಾರ್ಯಕರ್ತರಿಗೆ ಕಾಮಗಾರಿ ನೀಡಲಾಗಿದೆ. ಕಾಮಗಾರಿ ನಿರ್ವಹಣೆ ಮಾಡಬೇಕಾದ ಎಂಜಿನಿಯರ್‌ಗೆ ಅನುಭವ ಇಲ್ಲದೆ ಯೂಟ್ಯೂಬ್ ನೋಡಿ ಕಾಮಗಾರಿ ಮಾಡಿದ್ದಾರೆ ಎಂದು ದೂರಿದರು.

ADVERTISEMENT

ನಿರಂತರ ಶುದ್ಧ ಕುಡಿಯುವ ನೀರು ಪೂರೈಕೆ ಕಾಮಗಾರಿ ವ್ಯಾಪಕ ಅಕ್ರಮ ಹಾಗೂ ಸಾಕಷ್ಟು ಲೋಪಗಳಿಂದ ಕೂಡಿದ್ದು ಕೇಂದ್ರ ಸರ್ಕಾರದ ಬಹುಪಾಲು ಇರುವುದರಿಂದ ಈ ನಿಟ್ಟಿನಲ್ಲಿ ಸಂಸದರ ಗಮನ ಸೆಳೆದು ಕೇಂದ್ರದ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಲೋಪಗಳನ್ನು ಪತ್ತೆ ಹಚ್ಚಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.

ಪುರಸಭೆ ಅಧಿಕಾರಿಗಳು ಜನರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಸಮಸ್ಯೆ ಹೇಳಿಕೊಳ್ಳಲು ಹೋದರೆ ಯಾವುದೇ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ಇರುವುದಿಲ್ಲ. ಅಧಿಕಾರಿಗಳು ಸಂಪೂರ್ಣ ಬೇಜವಾಬ್ದಾರಿ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದು ಅಧಿಕಾರಿಗಳ ನಿರ್ಲಕ್ಷದಿಂದಲೇ ಸಾಕಷ್ಟು ಸಮಸ್ಯೆ ಉದ್ಭವವಾಗುತ್ತಿವೆ. ಶಾಸಕರು ಅಧಿಕಾರಿಗಳಿಗೆ ಜನರ ಸಮಸ್ಯೆಗೆ ಸ್ಪಂದಿಸಿ ಕೆಲಸ ಮಾಡುವಂತೆ ನಿರ್ದೇಶಿಸಬೇಕು ಎಂದು ಹೇಳಿದರು.

ಪುರಸಭೆ ಮಾಜಿ ಸದಸ್ಯ ಶ್ರೀನಿವಾಸ್, ಮಾರುತಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.