
ತುಮಕೂರು: ಹಮಾಲಿ ಕಲ್ಯಾಣ ಮಂಡಳಿ ರಚನೆ, ಸೇವಾ ಭದ್ರತೆ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಬುಧವಾರ ಹಮಾಲಿ ಕಾರ್ಮಿಕರ ಫೆಡರೇಷನ್ ಸಿಐಟಿಯು ನೇತೃತ್ವದಲ್ಲಿ ಹಮಾಲಿ ಕಾರ್ಮಿಕರು ಪ್ರತಿಭಟನೆ ನಡೆಸಿದರು.
ಹಮಾಲಿ ಕಾರ್ಮಿಕ ಸಂಘಟನೆ ಮುಖಂಡ ನಾಗರಾಜ, ‘ಹಮಾಲಿ ಕಾರ್ಮಿಕರಿಗೆ ಹಣಕಾಸಿನ ನೆರವು ನೀಡುವ ಯೋಜನೆ ಜಾರಿಗೊಳಿಸಬೇಕು. ಹಣಕಾಸು ಸಂಪನ್ಮೂಲ ಕ್ರೋಢಿಕರಿಸುವ ಯೋಜನೆ ರೂಪಿಸಬೇಕು. ಸಾಮಾಜಿಕ ಭದ್ರತೆ ಒದಗಿಸಬೇಕು. ಹಮಾಲಿ ಕಲ್ಯಾಣ ಮಂಡಳಿ ರಚನೆಗೆ ₹500 ಕೋಟಿ ಮೀಸಲಿಡಬೇಕು’ ಎಂದು ಆಗ್ರಹಿಸಿದರು.
ಮುಖಂಡ ರವಿಚಂದ್ರ, ‘ಎಪಿಎಂಸಿಯಲ್ಲಿ ಕೆಲಸ ಮಾಡಿ ನಿವೃತ್ತರಾದವರಿಗೆ ಕನಿಷ್ಠ ₹1 ಲಕ್ಷ ಇಡಿಗಂಟು ನೀಡಬೇಕು. ಹಮಾಲರಿಗೆ ಕಾರ್ಮಿಕರ ಭವಿಷ್ಯನಿಧಿ, ಪಿಂಚಣಿ ಹಾಗೂ ವಸತಿ ಯೋಜನೆಯ ನೆರವು ಕಲ್ಪಿಸಬೇಕು’ ಎಂದು ಒತ್ತಾಯಿಸಿದರು.
ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಸುಬ್ರಮಣ್ಯ, ‘ಹಮಾಲರಿಗೆ ವೈದ್ಯಕೀಯ ಮರುಪಾವತಿ ಯೋಜನೆ ಮುಂದುವರಿಸಬೇಕು. ಸಮವಸ್ತ್ರ ವಿತರಣೆಗೆ ಕ್ರಮ ವಹಿಸಬೇಕು. ಕಾರ್ಮಿಕ ಕಾನೂನು ಜಾರಿಗೊಳಿಸಬೇಕು. ಕನಿಷ್ಠ ವೇತನ ನೀಡಬೇಕು’ ಎಂದರು.
ಮುಖಂಡರಾದ ಸಿದ್ದರಾಜು, ರಾಬಿನ್‌ಸನ್, ಲಕ್ಷ್ಮಿಕಾಂತ, ನಾಗೆಂದ್ರ, ಗೋಪಾಲ್ ಇತರರು ಪಾಲ್ಗೊಂಡಿದ್ದರು. ಹೆಚ್ಚುವರಿ ಜಿಲ್ಲಾಧಿಕಾರಿ ಎನ್.ತಿಪ್ಪೇಸ್ವಾಮಿ ಅವರಿಗೆ ಮನವಿ ಸಲ್ಲಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.