ADVERTISEMENT

ತುಮಕೂರು: ದೇವರಾಯನದುರ್ಗದಲ್ಲಿ ರೋಪ್‌ವೇಗೆ ಬೇಡಿಕೆ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2026, 6:34 IST
Last Updated 24 ಫೆಬ್ರುವರಿ 2026, 6:34 IST
ದೇವರಾಯನದುರ್ಗ ಅರಣ್ಯ ಪ್ರದೇಶ
ದೇವರಾಯನದುರ್ಗ ಅರಣ್ಯ ಪ್ರದೇಶ   

ತುಮಕೂರು: ನಗರದ ಜನರ ಶ್ವಾಸಕೋಶದಂತಿರುವ ತಾಲ್ಲೂಕಿನ ದೇವರಾಯನದುರ್ಗದಲ್ಲಿ ರೋಪ್‌ವೇ ನಿರ್ಮಾಣಕ್ಕೆ ಗ್ರಾಮಾಂತರ ಶಾಸಕ ಬಿ.ಸುರೇಶ್‍ಗೌಡ ಮುಂದಾಗಿದ್ದಾರೆ.

ದೇವರಾಯನದುರ್ಗದಲ್ಲಿ ಸೋಮವಾರ ಅರಣ್ಯ ಇಲಾಖೆ ಅಧಿಕಾರಿಗಳ ಜತೆ ಶಾಸಕರು ಚರ್ಚೆ ನಡೆಸಿದರು. ರೋಪ್‌ವೇ ನಿರ್ಮಿಸುವಂತೆ ಕೋರಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.

ರೋಪ್‌ವೇ ನಿರ್ಮಾಣಕ್ಕೆ ಇಲಾಖೆ ಅಧಿಕಾರಿಗಳು ತಾತ್ವಿಕ ಒಪ್ಪಿಗೆ ನೀಡಿದ್ದಾರೆ. ₹61 ಕೋಟಿಯಿಂದ ₹150 ಕೋಟಿ ವೆಚ್ಚವಾಗಬಹುದು. ಗಣಿ ಇಲಾಖೆಯ ಪರಿಸರ ಪುನರ್ ನಿರ್ಮಾಣಕ್ಕಾಗಿ ಲಭ್ಯವಿರುವ ಅನುದಾನದಲ್ಲಿ ರೋಪ್‌ವೇ ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ. ನಾಮದ ಚಿಲುಮೆ ಸುತ್ತಮುತ್ತಲಿನ ಪರಿಸರದಲ್ಲಿ ಪೂರ್ಣ ಪ್ರಮಾಣದ ಪ್ರಾಣಿ ಸಂಗ್ರಹಾಲಯ ಸ್ಥಾಪಿಸಲೂ ಅಧಿಕಾರಿಗಳೊಂದಿಗೆ ಚರ್ಚಿಸಲಾಯಿತು ಎಂದು ಹೇಳಿದ್ದಾರೆ.

ADVERTISEMENT

ದೇವರಾಯನದುರ್ಗ ಸಮುದ್ರ ಮಟ್ಟದಿಂದ 3,904 ಅಡಿ ಎತ್ತರದಲ್ಲಿದ್ದು, 4,117 ಹೆಕ್ಟೇರ್ ಪ್ರದೇಶದಲ್ಲಿ ಅರಣ್ಯ ವ್ಯಾಪಿಸಿಕೊಂಡಿದೆ. ಇದು ಸಂರಕ್ಷಿತ ಅರಣ್ಯ ಪ್ರದೇಶವಾಗಿದ್ದು, 1,200 ಅಡಿ ಎತ್ತರದಲ್ಲಿ ರೋಪ್‌ವೇ ನಿರ್ಮಿಸಬೇಕಿದೆ. ಮೋನೋ ಕೇಬಲ್ ಇರಬೇಕೆ ಅಥವಾ ಎರಡು-ಮೂರು ಕೇಬಲ್ ಇರಬೇಕೆ ಎಂಬ ಬಗ್ಗೆ ಮುಂದಿನ ದಿನಗಳಲ್ಲಿ ತಾಂತ್ರಿಕ ತಜ್ಞರು ನಿರ್ಧರಿಸಲಿದ್ದಾರೆ ಎಂದು ವಿವರಿಸಿದ್ದಾರೆ.

ದಿನನಿತ್ಯ ಸಾವಿರಾರು ಮಂದಿ, ವರ್ಷಕ್ಕೆ 4 ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ಬೆಟ್ಟಕ್ಕೆ ಭೇಟಿ ನೀಡುತ್ತಾರೆ. ರೋಪ್‌ವೇ ಬಳಕೆಯಿಂದ ವಾರ್ಷಿಕ ₹15 ಕೋಟಿ ಹಣ ಸಂಗ್ರಹವಾಗಬಹುದು ಎಂದರು.

ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪವಿತ್ರ, ವಲಯ ಅರಣ್ಯಾಧಿಕಾರಿ ನಮಿತಾ ಇತರರು ಸಭೆಯಲ್ಲಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.