ADVERTISEMENT

ತುಮಕೂರು | ಡಿಜಿಟಲ್‌ ಅರೆಸ್ಟ್‌: ವೃದ್ಧಗೆ ₹88 ಲಕ್ಷ ವಂಚನೆ

​ಪ್ರಜಾವಾಣಿ ವಾರ್ತೆ
Published 7 ಜುಲೈ 2025, 6:00 IST
Last Updated 7 ಜುಲೈ 2025, 6:00 IST
(ಸಾಂದರ್ಭಿಕ ಚಿತ್ರ)
(ಸಾಂದರ್ಭಿಕ ಚಿತ್ರ)   

ತುಮಕೂರು: ನವದೆಹಲಿ ಪೊಲೀಸರ ಹೆಸರಿನಲ್ಲಿ ಕರೆ ಮಾಡಿದ ವಂಚಕರು ಡಿಜಿಟಲ್‌ ಅರೆಸ್ಟ್‌ ಮಾಡುವುದಾಗಿ ಬೆದರಿಸಿ ನಗರದ ರಾಘವೇಂದ್ರ ನಗರದ 74 ವರ್ಷದ ಮೃತ್ಯುಂಜಯ ಎಂಬುವರಿಗೆ ₹88 ಲಕ್ಷ ವಂಚಿಸಿದ್ದಾರೆ.

ಮೃತ್ಯುಂಜಯ ಅವರಿಗೆ ಜೂನ್‌ 18ರಂದು ಕರೆ ಮಾಡಿದ ಆರೋಪಿ, ‘ನವದೆಹಲಿ ಟೆಲಿಕಾಮ್‌ ಅಧಿಕಾರಿ’ ಎಂದು ಪರಿಚಯಿಸಿಕೊಂಡಿದ್ದಾರೆ. ನಿಮ್ಮ ಹೆಸರಿನಲ್ಲಿ ಮುಂಬೈನಲ್ಲಿ ಸಿಮ್‌ ಖರೀದಿಸಿ ಅಕ್ರಮ ಹಣ ವರ್ಗಾವಣೆಗೆ ಬಳಸಲಾಗುತ್ತಿದೆ. ನಿಮ್ಮ ಬಳಿ ಹಿರಿಯ ಅಧಿಕಾರಿ ಮಾತನಾಡುತ್ತಾರೆ ಎಂದು ತಿಳಿಸಿದ್ದಾರೆ. ನಂತರ ಸೈಬರ್‌ ಕ್ರೈಮ್‌ ಅಧಿಕಾರಿ ಎಂದು ಮತ್ತೊಬ್ಬರು ವಾಟ್ಸ್‌ ಆ್ಯಪ್‌ ವಿಡಿಯೊ ಕರೆ ಮಾಡಿದ್ದಾರೆ.

‘2023ರಲ್ಲಿ ₹583 ಕೋಟಿ ವಂಚನೆ ಪ್ರಕರಣದಲ್ಲಿ ನರೇಶ್‌ ಗೋಯಲ್‌ ಎಂಬುವರನ್ನು ಅರೆಸ್ಟ್‌ ಮಾಡಿದ್ದು ಆತ ನಿಮ್ಮ ಹೆಸರಿನಲ್ಲಿ ಮುಂಬೈನ ಕೆನರಾ ಬ್ಯಾಂಕ್‌ನಲ್ಲಿ ಖಾತೆ ತೆರೆದಿದ್ದಾನೆ. 24 ಕುಟುಂಬಗಳ ₹2 ಕೋಟಿ ಹಣ ಅದಕ್ಕೆ ಜಮಾ ಆಗಿದ್ದು ಕಮಿಷನ್‌ ರೂಪದಲ್ಲಿ ನಿಮಗೆ ₹25 ಲಕ್ಷ ನೀಡಿರುವುದಾಗಿ ತಿಳಿಸಿದ್ದಾನೆ. ಆತನ ಮನೆ ಶೋಧಿಸಿದಾಗ ನಿಮ್ಮ ದಾಖಲೆ ಸಿಕ್ಕಿವೆ. ನಿಮ್ಮನ್ನು ಡಿಜಿಟಲ್‌ ಅರೆಸ್ಟ್‌ ಮಾಡಲಾಗುತ್ತದೆ. ಮನೆ ಬಿಟ್ಟು ಎಲ್ಲಿಗೂ ಹೋಗಬಾರದು, ಕರೆ ಕಟ್‌ ಮಾಡಬಾರದು’ ಎಂದು ಸೂಚಿಸಿದ್ದಾರೆ.

ADVERTISEMENT

19ರಂದು ಮತ್ತೆ ಕರೆ ಮಾಡಿ ಬಂಧಿಸುವ ಬೆದರಿಕೆ ಹಾಕಿ, ಮೃತ್ಯುಂಜಯ ಅವರ ಸ್ಥಿರಾಸ್ತಿ ಮತ್ತು ಚರಾಸ್ತಿ ಮಾಹಿತಿ ಪಡೆದಿದ್ದಾರೆ. ‘ಪ್ರಕರಣದಿಂದ ಹೊರ ಬರಬೇಕಾದರೆ ಹಣ ಹೂಡಿಕೆ ಮಾಡಬೇಕು. ಪರಿಶೀಲನೆ ನಂತರ ನಿಮ್ಮ ಹಣ ವಾಪಸ್‌ ನೀಡುತ್ತೇವೆ’ ಎಂದು ತಿಳಿಸಿದ್ದಾರೆ.

21ರಂದು ಆರೋಪಿಗಳು ಸೂಚಿಸಿದ ಖಾತೆಗೆ ₹13 ಲಕ್ಷ ವರ್ಗಾಯಿಸಿದ್ದಾರೆ. ಅದೇ ದಿನ ರಾತ್ರಿ ವಿಡಿಯೊ ಕರೆ ಮಾಡಿ, ‘ವಿವಿಧ ಬ್ಯಾಂಕ್‌ಗಳಲ್ಲಿನ ಠೇವಣಿ ಹಣ ವಿತ್‌ ಡ್ರಾ ಮಾಡಬೇಕು’ ಎಂದಿದ್ದಾರೆ.

ಒಡವೆ ಅಡವಿಟ್ಟು ಹಣ ಹೊಂದಿಕೆ

ಜೂನ್‌ 23ರಂದು ಮತ್ತೆ ₹40 ಲಕ್ಷ ವರ್ಗಾವಣೆ ಮಾಡಿದ್ದಾರೆ. ಆರೋಪಿ ಮಾರನೇ ದಿನ ಕರೆ ಮಾಡಿ ಇನ್ನೂ ₹60 ಲಕ್ಷ ಹೂಡಿಕೆ ಮಾಡಬೇಕು ಎಂದು ಹೇಳಿದ್ದಾರೆ. ಮೃತ್ಯುಂಜಯ ‘ಅಷ್ಟೊಂದು ಹಣವಿಲ್ಲ’ ಎಂದಾಗ ಆರೋಪಿ ‘ಚಿನ್ನಾಭರಣ ಅಡವಿಟ್ಟು ಹಣ ಹಾಕುವಂತೆ’ ಒತ್ತಾಯಿಸಿದ್ದಾರೆ. ಅದಕ್ಕೆ ತಗಲುವ ಬಡ್ಡಿ ನಾವೇ ಕಟ್ಟುತ್ತೇವೆ ಎಂದು ನಂಬಿಸಿದ್ದಾರೆ. ಜೂನ್‌ 30ರಂದು ಬ್ಯಾಂಕ್‌ನಲ್ಲಿ ಒಡವೆ ಅಡವಿಟ್ಟು ₹25 ಲಕ್ಷ ಹಣ ವಂಚಕರು ತಿಳಿಸಿದ ಖಾತೆಗೆ ವರ್ಗಾಯಿಸಿದ್ದಾರೆ.

ಇನ್ನೂ ₹10 ಲಕ್ಷ ಹೂಡಿಕೆ ಮಾಡಬೇಕು ಎಂದಿದ್ದಾರೆ. ಮೃತ್ಯುಂಜಯ ಸಂಬಂಧಿಕರ ಬಳಿ ಹಣ ಕೇಳಿದ್ದು, ಅವರಿಗೆ ಅನುಮಾನ ಬಂದು ವಿಚಾರಿಸಿದಾಗ ವಂಚನೆಗೆ ಒಳಗಾಗಿರುವುದು ಗೊತ್ತಾಗಿದೆ. ಡಿಜಿಟಲ್‌ ಅರೆಸ್ಟ್‌ ಹೆಸರಿನಲ್ಲಿ ₹88 ಲಕ್ಷ ಪಡೆದು ವಂಚಿಸಿದವರ ವಿರುದ್ಧ ಕ್ರಮಕೈಗೊಳ್ಳುವಂತೆ ಮೃತ್ಯುಂಜಯ ಸೈಬರ್‌ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.