ADVERTISEMENT

ಕಾಡುಗೊಲ್ಲ ನಿಗಮ ಹೆಸರು ಬದಲಾವಣೆಗೆ ಕಾಡುಗೊಲ್ಲ ಸಂಘಟನೆಗಳ ಒಕ್ಕೂಟದ ಮುಖಂಡರ ವಿರೋಧ

ರಾಜಕೀಯ ಒತ್ತಡಕ್ಕೆ ಮಣಿಯಬೇಡಿ: ಸರ್ಕಾರಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2021, 5:36 IST
Last Updated 30 ನವೆಂಬರ್ 2021, 5:36 IST
ತುಮಕೂರು ಜಿಲ್ಲಾಧಿಕಾರಿ ಕಚೇರಿ ಎದುರು ಕಾಡುಗೊಲ್ಲ ಅಭಿವೃದ್ಧಿ ನಿಗಮದ ಹೆಸರು ಬದಲಿಸದಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಸಮುದಾಯದ ಮುಖಂಡರಾದ ಜಿ.ಕೆ.ನಾಗಣ್ಣ, ಶಿವಕುಮಾರಸ್ವಾಮಿ, ಡಿ.ಮಹಾಲಿಂಗಯ್ಯ, ರಮೇಶ್ ಇತರರು ಇದ್ದರು
ತುಮಕೂರು ಜಿಲ್ಲಾಧಿಕಾರಿ ಕಚೇರಿ ಎದುರು ಕಾಡುಗೊಲ್ಲ ಅಭಿವೃದ್ಧಿ ನಿಗಮದ ಹೆಸರು ಬದಲಿಸದಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಸಮುದಾಯದ ಮುಖಂಡರಾದ ಜಿ.ಕೆ.ನಾಗಣ್ಣ, ಶಿವಕುಮಾರಸ್ವಾಮಿ, ಡಿ.ಮಹಾಲಿಂಗಯ್ಯ, ರಮೇಶ್ ಇತರರು ಇದ್ದರು   

ತುಮಕೂರು: ಒತ್ತಡಕ್ಕೆ ಮಣಿದು ರಾಜ್ಯ ಕಾಡುಗೊಲ್ಲ ಅಭಿವೃದ್ಧಿ ನಿಗಮದ ಹೆಸರನ್ನು ಬದಲಿಸಬಾರದು ಎಂದು ಕಾಡುಗೊಲ್ಲ ಸಂಘಟನೆಗಳ ಒಕ್ಕೂಟದ ಮುಖಂಡರು ಒತ್ತಾಯಿಸಿದ್ದಾರೆ.

ಸೋಮವಾರ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದ ಸಮುದಾಯದ ಮುಖಂಡರು, ಹಿರಿಯೂರು ಶಾಸಕಿ ಪೂರ್ಣಿಮಾ ಅವರ ರಾಜಕೀಯ ಒತ್ತಡಕ್ಕೆ ಮಣಿದು ಕಾಡುಗೊಲ್ಲ ಬುಡಕಟ್ಟು ಜನರ ಅಭಿವೃದ್ಧಿಗಾಗಿ ರಚಿಸಿರುವ ನಿಗಮದ ಹೆಸರನ್ನು ಬದಲಾವಣೆ ಮಾಡಬಾರದು ಎಂದು ಆಗ್ರಹಿಸಿದರು.

ಕಾಡುಗೊಲ್ಲರ ಅಸ್ಮಿತೆ ಹೋರಾಟ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಕೆ. ನಾಗಣ್ಣ, ‘ಕಾಡುಗೊಲ್ಲರನ್ನು ಹಿಂದುಳಿದ ಪ್ರವರ್ಗ–1ರ ಜಾತಿ ಪಟ್ಟಿಗೆ ಸೇರಿಸಿ ಪ್ರತ್ಯೇಕ ಸ್ಥಾನಮಾನ ನೀಡಲಾಗಿದೆ. ಆದರೆ ಮೀಸಲಾತಿ ಸೌಲಭ್ಯ ಕಬಳಿಸಲು ಗೊಲ್ಲ ಸಮುದಾಯ ಮುಂದಾಗಿದ್ದು, ಸರ್ಕಾರದ ಹಂತದಲ್ಲಿ ಗೊಂದಲ ಮೂಡಿಸಲಾಗುತ್ತಿದೆ’ ಎಂದು ಆರೋಪಿಸಿದರು.

ADVERTISEMENT

ಶಿರಾ ಉಪಚುನಾವಣೆ ಸಂದರ್ಭದಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಕಾಡುಗೊಲ್ಲರ ಅಭಿವೃದ್ಧಿಗಾಗಿ ‘ರಾಜ್ಯ ಕಾಡುಗೊಲ್ಲ ಅಭಿವೃದ್ಧಿ ನಿಗಮ’ ಸ್ಥಾಪಿಸಿದ್ದರು. ನಂತರ ₹5 ಕೋಟಿ ಅನುದಾನ ಬಿಡುಗಡೆ ಮಾಡಿ, ವಿಶೇಷ ಅಧಿಕಾರಿ ನೇಮಕ ಮಾಡಿದ್ದರು. ಆದರೆ, ಕಾಡುಗೊಲ್ಲ ಜಾತಿಗೆ ಸೇರದ ಹಿರಿಯೂರು ಶಾಸಕಿ ಪೂರ್ಣಿಮಾ ಅವರು ಮುಖ್ಯಮಂತ್ರಿಗೆ ಪತ್ರ ಬರೆದು ‘ಗೊಲ್ಲ– ಕಾಡುಗೊಲ್ಲ ಅಭಿವೃದ್ಧಿ ನಿಗಮ’ ಎಂದು ಹೆಸರು ಬದಲಾವಣೆ ಮಾಡಲು ಕೇಳಿಕೊಂಡಿದ್ದಾರೆ. ಹೆಸರು ಬದಲಾಯಿಸಿದರೆ ಕಾಡುಗೊಲ್ಲರ ಅವನತಿಗೆ ಕಾರಣವಾಗಲಿದೆ ಎಂದು ಟೀಕಿಸಿದರು.

‘ಕಾಡುಗೊಲ್ಲ ಅಭಿವೃದ್ಧಿನಿಗಮಕ್ಕೆ ಗೊಲ್ಲ ಜಾತಿಯವರನ್ನು ಸೇರಿಸಿದರೆ ಸಮಸ್ಯೆಯಾಗಲಿದೆ. ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ರಾಜಕೀಯವಾಗಿ ಕಾಡು ಗೊಲ್ಲರಿಗಿಂತ ಗೊಲ್ಲರು ಹೆಚ್ಚು ಅಭಿವೃದ್ಧಿ ಹೊಂದಿದ್ದು, ತಮ್ಮ ಪ್ರಭಾವ ಬಳಸಿ ಎಲ್ಲಾ ಸೌಲಭ್ಯ ಪಡೆದುಕೊಳ್ಳುವ ಸಾಧ್ಯತೆ ಇದೆ’ ಎಂದುಕಾಡುಗೊಲ್ಲ ಸಮುದಾಯದ ಶಿವಕುಮಾರಸ್ವಾಮಿ ಆತಂಕ ವ್ಯಕ್ತಪಡಿಸಿದರು.

ಕಾಡುಗೊಲ್ಲ ಸಂಘಟನೆಗಳ ಒಕ್ಕೂಟದ ಡಿ.ಮಹಾಲಿಂಗಯ್ಯ, ಕಾಡುಗೊಲ್ಲ ಯುವ ಸೈನ್ಯದ ರಾಜ್ಯ ಘಟಕದ ಅಧ್ಯಕ್ಷ ರಮೇಶ್, ಪದಾಧಿಕಾರಿಗಳಾದ ಆರ್‌.ಪ್ರಕಾಶ್, ಮುತ್ತುರಾಜ್, ಗೋಪಿ ಹಿರಿಯೂರು, ಸುನಂದ್, ಶೋಭಾ ಮತ್ತಿತರರು ಉಪಸ್ಥಿತರಿದ್ದರು.

10 ಲಕ್ಷ ಕಾಡುಗೊಲ್ಲರು

ತುಮಕೂರು, ಚಿತ್ರದುರ್ಗ, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಮಂಡ್ಯ, ಬೆಂಗಳೂರು, ದಾವಣಗೆರೆ ಜಿಲ್ಲೆಯ ಗಡಿಭಾಗದಲ್ಲಿ ಕಾಡುಗೊಲ್ಲರ ಸಂಖ್ಯೆ ಹೆಚ್ಚಿದೆ. ಅಂದಾಜು 10 ಲಕ್ಷ ಜನಸಂಖ್ಯೆ ಇದೆ.

ತುಮಕೂರು,ಚಿತ್ರದುರ್ಗ, ದಾವಣಗೆರೆ ಲೋಕಸಭಾ ಕ್ಷೇತ್ರ ಹಾಗೂ ರಾಜ್ಯದ 37 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಡುಗೊಲ್ಲರ ಮತಗಳೇ ನಿರ್ಣಾಯಕವಾಗಿವೆ. ಆದರೂ ನಮಗೆ ಈವರೆಗೂ ರಾಜಕೀಯ ಪ್ರಾತಿನಿಧ್ಯ ಸಿಕ್ಕಿಲ್ಲ ಎಂದು ಸಮುದಾಯದ ಮುಖಂಡರು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.