
ಕೊರಟಗೆರೆ: ಗ್ರಾಮೀಣ ಭಾಗಗಳಲ್ಲಿ ಶುದ್ಧ ಕುಡಿಯುವ ನೀರು ಒದಗಿಸುವ ಸರ್ಕಾರದ ಯೋಜನೆ ಕೆಲವೇ ವರ್ಷಗಳಲ್ಲೇ ಮುಗ್ಗರಿಸಿದೆ.
ಹಳ್ಳಿ ಹಳ್ಳಿಗಳಲ್ಲಿ ಸ್ಥಾಪಿಸಲಾದ ಜಲ ಶುದ್ಧೀಕರಣ ಘಟಕಗಳು ಬಹಳಷ್ಟು ಕಡೆಗಳಲ್ಲಿ ಸಂಪೂರ್ಣ ಕಾರ್ಯರಹಿತವಾಗಿ, ಪಳೆಯುಳಿಕೆಗಳಾಗಿ ಮಾರ್ಪಟ್ಟಿದ್ದು, ಯೋಜನೆ ಗ್ರಾಮೀಣ ಭಾಗದಲ್ಲಿ ಮುಗ್ಗರಿಸಿದೆ.
ಗ್ರಾಮೀಣ ಪ್ರದೇಶಗಳಲ್ಲಿ ಸ್ಥಾಪಿಸಲಾದ ಬಹುತೇಕ ಜಲ ಶುದ್ಧೀಕರಣ ಘಟಕಗಳು ಅಳವಡಿಸಿದ ಕೆಲವೇ ತಿಂಗಳಲ್ಲಿ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿವೆ. ಈಗ, ಈ ಘಟಕಗಳು ಜನರ ಬಳಕೆಗೆ ಬಾರದೆ ನಿರುಪಯುಕ್ತವಾಗಿವೆ.
ತಾಲ್ಲೂಕಿನ ಗಡಿ ಭಾಗದ ಚಿಕ್ಕಪಾಳ್ಯ ಗ್ರಾಮದ ನೀರಿನ ಘಟಕ, ಬಿಡಿಪುರ ಗ್ರಾಮದ ರಂಗನಾಥ ದೇವಾಲಯದ ಸರ್ಕಾರಿ ಪ್ರೌಢಶಾಲೆ, ಪದವಿಪೂರ್ವ ಕಾಲೇಜು ಮುಂಭಾಗ, ಪಟ್ಟಣದ ಸಂತೆ ಮೈದಾನ, ಮಾರಮ್ಮನ ಬೀದಿ, ಮುಖ್ಯರಸ್ತೆಯ ಪೆಟ್ರೋಲ್ ಬಂಕ್ ಮುಂಭಾಗ ಸೇರಿದಂತೆ ಹಲವು ಗ್ರಾಮಗಳಲ್ಲಿ ಸಾರ್ವಜನಿಕ ಬಳಕೆಗೆ ಬಾರದೆ ಕೇವಲ ನೆಪಮಾತ್ರಕ್ಕೆ ಇರುವಂತಾಗಿದೆ.
ತಾಲ್ಲೂಕಿನ ಗಡಿಗ್ರಾಮ ಚಿಕ್ಕಪಾಳ್ಯದ ಗ್ರಾಮಸ್ಥರ ಪ್ರಕಾರ, ಘಟಕವನ್ನು ಸ್ಥಾಪಿಸಿದಂದಿನಿಂದ ಇಂದಿನವರೆಗೆ ಒಂದು ದಿನವೂ ಕೆಲಸ ಮಾಡಿಲ್ಲ. ಏಳೆಂಟು ವರ್ಷಗಳಿಂದ ಈ ಘಟಕ ಕೆಟ್ಟ ಸ್ಥಿತಿಯಲ್ಲೆ ಇದೆ. ಈ ಬಗ್ಗೆ ದೂರು ನೀಡಿದಾಗ ಒಂದೆರಡು ದಿನ ಮಾತ್ರ ಕೆಲಸ ನಿರ್ವಹಿಸುವ ಘಟಕ ನಂತರ ದುಸ್ಥಿತಿ ತಲುಪಿದೆ. ಘಟಕ ಹಾಕಿದಾಗಿನಿಂದ ಸರಿಯಾಗಿ ಒಂದು ಕೊಡ ಶುದ್ಧ ನೀರು ಸಿಗಲಿಲ್ಲ. ಪ್ರತಿದಿನ ಮೂರು ಕಿಲೋಮೀಟರ್ ದೂರದ ಬೊಮ್ಮಲದೇವಿಪುರ ಗ್ರಾಮದಿಂದ ನೀರು ತಂದು ಕುಡಿಯುವ ಸ್ಥಿತಿ ಇದೆ ಎಂದು ಗ್ರಾಮಸ್ಥರು ಸಮಸ್ಯೆ ತೆರೆದಿಡುತ್ತಾರೆ.
ಗಂಟಲು ಕೆರೆತ, ತಲೆನೋವು, ದೇಹವೇದನೆ ಮತ್ತು ಇತರೆ ಆರೋಗ್ಯ ಸಮಸ್ಯೆ ಎದುರಾಗುತ್ತಿವೆ. ಮೊದಲು ಶುದ್ಧ ನೀರು ಸಿಗುತ್ತಿತ್ತು. ಈಗ ಅದೇ ಸೌಕರ್ಯ ಕಣ್ಮರೆಯಾಗಿದೆ. ಮಕ್ಕಳು ಮತ್ತು ವೃದ್ಧರು ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂದು ಲಕ್ಷಮ್ಮ ತಿಳಿಸಿದರು.
ಪಟ್ಟಣ ಸೇರಿದಂತೆ ಅನೇಕ ಹಳ್ಳಿಗಳಲ್ಲಿ, ಜನರು ಶುದ್ಧ ನೀರಿಗಾಗಿ ಕಿಲೋಮೀಟರ್ ದೂರ ಪ್ರಯಾಣಿಸಬೇಕಾಗುತ್ತಿದೆ. ಪಟ್ಟಣದಲ್ಲಿ ಸುಮಾರು ಆರು ಸ್ಥಳಗಳಲ್ಲಿ ಘಟಕ ಪ್ರಾರಂಭಿಸಲಾಗಿತ್ತು. ಆದರೆ, ಅವುಗಳಲ್ಲಿ ಕೆಲವೇ ಕೆಲವು ಘಟಕಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ. ಅವೂ ಸಹ ಸರಿಯಾದ ನಿರ್ವಹಣೆಯ ಕೊರತೆಯಿಂದಾಗಿ ಒಂದು ದಿನ ಕೆಲಸ ಮಾಡಿದರೆ ಮತ್ತೊಂದು ದಿನ ಕೆಲಸ ಮಾಡದಿರುವ ಅನಿಶ್ಚಿತ ಸ್ಥಿತಿಯಲ್ಲಿವೆ. ಖಾಸಗಿ ನೀರಿನ ಘಟಕಗಳಲ್ಲಿ ದುಬಾರಿ ಹಣ ಕೊಟ್ಟು ನೀರು ಖರೀದಿ ಮಾಡಿ ಕುಡಿಯುವ ಅನಿವಾರ್ಯ ಸ್ಥಿತಿ ಗ್ರಾಮಸ್ಥರಿಗೆ ಎದುರಾಗಿದೆ.
ಈ ಯೋಜನೆಯ ಅಡಿಯಲ್ಲಿ, ವಿವಿಧ ಗ್ರಾಮಗಳಲ್ಲಿ ₹5 ಲಕ್ಷದಿಂದ ₹15 ಲಕ್ಷದವರೆಗೆ ಖರ್ಚು ಮಾಡಿ ಘಟಕ ಸ್ಥಾಪಿಸಲಾಗಿದೆ. ಆದರೆ, ಕಳಪೆ ಗುಣಮಟ್ಟದ ಸಾಮಗ್ರಿ, ಅಸಮರ್ಪಕ ಅಳವಡಿಕೆ ಮತ್ತು ನಿರ್ವಹಣೆಯ ಕೊರತೆಯಿಂದಾಗಿ ಈ ಘಟಕಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಇದರಿಂದಾಗಿ, ಸರ್ಕಾರದ ಯೋಜನೆ ಸಂಪೂರ್ಣವಾಗಿ ಅನುಷ್ಠಾನಗೊಳ್ಳದೆ, ಗ್ರಾಮೀಣ ಭಾಗದ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಗುರಿ ವಿಫಲಗೊಂಡಿದೆ ಎಂದು ಸ್ಥಳೀಯರು ಆರೋಪಿಸಿದರು.
ತಾಲ್ಲೂಕಿನಲ್ಲಿ ವಿವಿಧ ಎಂಟು ಯೋಜನೆಯಡಿ ಒಟ್ಟು 515 ಘಟಕಗಳನ್ನು ಪಟ್ಟಣ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಅಳವಡಿಸಲಾಗಿದೆ. ಅದರಲ್ಲಿ ಅಕ್ಟೋಬರ್ 2025ರ ಅಂತ್ಯಕ್ಕೆ 467 ಘಟಕ ನಿರ್ವಹಣೆಯಲ್ಲಿವೆ. 93 ಘಟಕ ದುಸ್ಥಿತಿಯಲ್ಲಿವೆ ಎಂದು ಅಧಿಕಾರಿಗಳು ಮಾಹಿತಿ ನೀಡುತ್ತಾರೆ. ಆದರೆ ವಾಸ್ತವದಲ್ಲಿ ಇದರಲ್ಲಿ ಶೇ 50ಕ್ಕೂ ಹೆಚ್ಚು ಘಟಕಗಳು ದುಸ್ಥಿತಿಗೆ ತಲುಪಿವೆ.
ಈ ಬಗ್ಗೆ ಸಂಬಂಧಿತ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಘಟಕಗಳ ನಿರ್ವಹಣಾ ಪ್ರಕ್ರಿಯೆಯಲ್ಲಿವೆ ಎಂದು ತಿಳಿಸುತ್ತಾರೆ. ಆದರೆ ಯಾರೊಬ್ಬರೂ ಇತ್ತ ತಿರುಗಿಯೂ ನೋಡುವುದಿಲ್ಲಲಕ್ಷ್ಮೀಶ ಕೊರಟಗೆರೆ
ಘಟಕಗಳನ್ನು ಕೆಲವು ಕಡೆ ಕೇವಲ ಖರ್ಚು ಮಾಡಲು ಕಾಗದಗಳಲ್ಲಿ ಯೋಜನೆ ಪೂರ್ಣಗೊಂಡಿದೆ ಎಂದು ತೋರಿಸಲು ಸ್ಥಾಪಿಸಲಾಗಿದೆ. ಗ್ರಾಮಸ್ಥರಿಗೆ ಶುದ್ಧ ನೀರು ಒದಗಿಸುವುದು ಉದ್ದೇಶವಲ್ಲಮಹೇಶ್ ಬೊಮ್ಮಲದೇವಿಪುರ
ಗ್ರಾಮೀಣ ಭಾಗಗಳಲ್ಲಿ ಶುದ್ಧ ನೀರು ಒದಗಿಸುವ ಸರ್ಕಾರಿ ಯೋಜನೆ ವಿಫಲಗೊಂಡಿದೆ. ಜನ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ತ್ವರಿತ ಪರಿಹಾರಕ್ಕೆ ಅಧಿಕಾರಿಗಳು ಕ್ರಮ ಜರುಗಿಸುವುದು ಅಗತ್ಯವಿಜಯ್ ಹೊಳವನಹಳ್ಳಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.