
ಶಿರಾ: ಮಾದಕ ವಸ್ತುಗಳು ಯುವಜನರ ಬದುಕನ್ನು ಹಾಳು ಮಾಡುತ್ತದೆ. ಈ ಬಗ್ಗೆ ಯುವಕರು ಜಾಗೃತರಾಗಬೇಕು ಎಂದು ಡಿವೈಎಸ್ ಪಿ.ಬಿ.ಕೆ. ಶೇಖರ್ ಹೇಳಿದರು.
ತಾಲ್ಲೂಕಿನ ಪಟ್ಟನಾಯಕನಹಳ್ಳಿ ಶಾಂತಿನಿಕೇತನ ವಿದ್ಯಾಸಂಸ್ಥೆಯ ಬರಗೂರು ರಾಮಚಂದ್ರಪ್ಪ ಸಭಾಂಗಣದಲ್ಲಿ ನಡೆದ ಅಪರಾಧ ತಡೆ ಮಾಸಾಚರಣೆ, ನಶೆ ಮುಕ್ತ ತುಮಕೂರು ಅಭಿಯಾನ ಮತ್ತು ವಿವಿಧ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
‘ನಾವು ಕಾನೂನನ್ನು ಗೌರವಿಸಿದರೆ, ಕಾನೂನು ನಮಗೆ ರಕ್ಷಣೆ ನೀಡುತ್ತದೆ. ಸಾರ್ವಜನಿಕರು ಸಮವಸ್ತ್ರವನ್ನು ಧರಿಸದ ಪೊಲೀಸರು ಎಂಬುದನ್ನು ತಿಳಿಯಬೇಕು’ ಎಂದರು.
ಪಟ್ಟನಾಯಕನಹಳ್ಳಿ ಪೊಲೀಸ್ ಠಾಣೆ ಪಿಎಸ್ಐ ಹರೀಶ್ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಅಕ್ರಮ ಚಟುವಟಿಕೆಗಳು ಕಂಡು ಬಂದರೆ ‘112’ ಕರೆ ಮಾಡಿ, ಸಾರ್ವಜನಿಕರ ಸಹಕಾರದಿಂದ ಜನಸ್ನೇಹಿ ಪೊಲೀಸ್ ವ್ಯವಸ್ಥೆ ನಿರ್ಮಾಣ ಸಾಧ್ಯ ಎಂದರು.
ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಪಿ.ಪಾಂಡುರಂಗಯ್ಯ ಮಾತನಾಡಿ, ಸಮಾಜದಲ್ಲಿ ಶಾಂತಿ ಮತ್ತು ನೆಮ್ಮದಿಯ ಬದುಕಿಗೆ ಪೊಲೀಸ್ ವ್ಯವಸ್ಥೆಯೇ ಕಾರಣವಾಗಿದೆ ಎಂದರು.
ಮಾದಕ ವಸ್ತು ಸೇವನೆ ಬಗ್ಗೆ ಪೊಲೀಸ್ ಇಲಾಖೆ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಪ್ಪ, ಪಿಎಸ್ಐ ಸುಹೇಲ್ ಅಹಮದ್, ರೇಣುಕಾ ಯಾದವ್, ಡಾ.ತಿಮ್ಮರಾಜು, ಶಾಂತಿನಿಕೇತನ ವಿದ್ಯಾಸಂಸ್ಥೆ ಪ್ರಾಂಶುಪಾಲೆ ಪಿ.ಆರ್.ಪ್ರತಿಭಾ ಸತೀಶ್, ರೇಣುಕಾ, ಪ್ರಜ್ವಲ್, ಪಿ.ಬಿ.ಕೀರ್ತಿ ಪ್ರಜ್ವಲ್, ಇಸಿಒ ಕರಿಯಣ್ಣ ಹಾಜರಿದ್ದರು.