ADVERTISEMENT

ಬಗರ್‌ಹುಕುಂ; ಸಮಸ್ಯೆ ಇತ್ಯರ್ಥಕ್ಕೆ ಪಾದಯಾತ್ರೆ

ಫೆ.25ರಂದು ಗುಬ್ಬಿ ತಾಲ್ಲೂಕಿನ ಗಂಗಯ್ಯಪಾಳ್ಯದಲ್ಲಿ ಚಾಲನೆ; ದುಂಡು ಮೇಜಿನ ಸಭೆಯಲ್ಲಿ ನಿರ್ಣಯ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2020, 15:10 IST
Last Updated 12 ಫೆಬ್ರುವರಿ 2020, 15:10 IST

ತುಮಕೂರು: ಬಗರ್‌ಹುಕುಂ ಸಾಗುವಳಿಯ ಸಕ್ರಮ ಮತ್ತು ‘ಪಿ’ ನಂಬರ್‌ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸರ್ಕಾರದ ಮೇಲೆ ಒತ್ತಡ ಹಾಕಲು ಫೆ.25 ರಂದು ಗುಬ್ಬಿ ತಾಲ್ಲೂಕಿನ ಗಂಗಯ್ಯಪಾಳ್ಯದಿಂದ ತುಮಕೂರು ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ನಡೆಸಲು ಕರ್ನಾಟಕ ಪ್ರಾಂತ ರೈತ ಸಂಘ (ಕೆಪಿಆರ್‌ಎಸ್‌) ಹಾಗೂ ಬಗರ್‌ಹುಕುಂ ಸಾಗುವಳಿದಾರರ ಹೋರಾಟ ಸಮಿತಿ ನಿರ್ಧರಿಸಿದೆ.

ನಗರದ ಕನ್ನಡ ಭವನದಲ್ಲಿ ಬುಧವಾರ ನಡೆದ ದುಂಡು ಮೇಜಿನ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.

ಕರ್ನಾಟಕ ಪ್ರಾಂತ ರೈತ ಸಂಘ (ಕೆಪಿಆರ್‌ಎಸ್‌) ರಾಜ್ಯ ಘಟಕದ ಅಧ್ಯಕ್ಷ ಜಿ.ಸಿ.ಬಯ್ಯಾರೆಡ್ಡಿ ಮಾತನಾಡಿ, ‘ಪ್ರಸ್ತುತ ದಿನಗಳಲ್ಲಿ ದುಡ್ಡಿದ್ದವರಿಗೆ, ಕಂಪನಿಗಳಿಗೆ, ಕೈಗಾರಿಕೆಗಳಿಗೆ, ರಿಯಲ್‌ ಎಸ್ಟೇಟ್‌ ಕುಳಗಳಿಗೆ ಸುಲುಭವಾಗಿ ಭೂಮಿ ಸಿಗುತ್ತಿದೆ. ಆದರೆ, ಬಡವರಿಗೆ, ದಲಿತರಿಗೆ, ರೈತರಿಗೆ ಭೂಮಿ ಸಿಗುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿ
ದರು.

ADVERTISEMENT

‘ಇಂದು 2 ಲಕ್ಷ ಎಕರೆ ಬಗರ್‌ಹುಕುಂ ಜಮೀನು ರೈತರು, ಬಡವರ ಕೈಯಲ್ಲಿದೆ. ಇಂದು ಅದನ್ನು ಪಡೆಯದಿದ್ದರೆ, ಮುಂದೆಂದೂ ಪಡೆಯಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಬಗರ್‌ಹುಕುಂ ರೈತರು ಎಚ್ಚೆತ್ತುಕೊಳ್ಳಬೇಕು. ಸರ್ಕಾರವು ಸಹ ಬಗರ್‌ಹುಕುಂ ಮತ್ತು ‘ಪಿ’ ನಂಬರ್ ಸಮಸ್ಯೆ ಇತ್ಯರ್ಥ ಪಡಿಸಲು ಬಜೆಟ್‌ನಲ್ಲಿ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ಕೆಪಿಆರ್‌ಎಸ್‌ ಜಿಲ್ಲಾ ಸಹ ಸಂಚಾಲಕ ಬಿ.ಉಮೇಶ್, ‘ಕೃಷಿ ಮತ್ತು ರೈತರು ಇಂದು ಬಿಕ್ಕಟ್ಟಿನಲ್ಲಿ ಸಿಲುಕಿದ್ದಾರೆ. ಇಂದಲ್ಲ, ನಾಳೆ ಭೂಮಿ ತಮ್ಮ ಕೈವಶವಾಗಬಹುದು ಎಂಬ ಆಶಾಭಾವನೆಯಲ್ಲಿ ದಿನಗಳನ್ನು ನೂಕುತ್ತಿದ್ದಾರೆ. ರೈತ ಹೋರಾಟದ ಹಿನ್ನೆಲೆಯಿಂದ ಬಂದ ಮುಖ್ಯಮಂತ್ರಿ ಯಡಿಯೂರಪ್ಪ ಕೃಷಿ ಮತ್ತು
ರೈತರನ್ನು ಉಳಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು’ ಎಂದು ಒತ್ತಾಯಿಸಿ
ದರು.

ಪರಿಸರ ಹೋರಾಟಗಾರ ಯತಿರಾಜು, ‘ಭೂಮಿಗೆ ಇಂದು ಬೆಲೆ ಬಂದಿದೆ. ಇದನ್ನು ಅರಿತ ಬಂಡವಾಳಶಾಹಿಗಳು ಬಡವರಿಂದ ಭೂಮಿ ಕಬಳಿಸುತ್ತಿದ್ದಾರೆ. ಸರ್ಕಾರದ ನೀತಿಗಳು ರೈತರ ಪರವಾಗಿಲ್ಲ. ಕಾರ್ಪೊರೇಟ್‌ಗಳಿಗೆ ಅನುಕೂಲ ಮಾಡಿಕೊಡಲು ಸರ್ಕಾರಗಳು ತುದಿಗಾಲಿನಲ್ಲಿ ನಿಂತಿವೆ’ ಎಂದು ಆರೋಪಿಸಿದರು.

ಸಾಮಾಜಿಕ ಹೋರಾಟಗಾರ ದೊರೈರಾಜು, ‘ಜಿಲ್ಲೆಯಲ್ಲಿ ಅತಿಹೆಚ್ಚು ಬಗರ್‌ಹುಕುಂ ರೈತರಿದ್ದಾರೆ. ಬಗರ್‌ಹುಕುಂ ರೈತರು ದುರ್ಬಲರು, ಶಕ್ತಿಹೀನರು ಎಂದು ಅರಿತ ಸರ್ಕಾರಗಳು ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ. ಈ ಬಗ್ಗೆ ಹೋರಾಟ ನಡೆಸದಿದ್ದರೆ ಮುಂದೆ ನಮ್ಮ ಹೆಣ ಹೂಳುವುದಕ್ಕೂ ಜಾಗ ಸಿಗುವುದಿಲ್ಲ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.