ADVERTISEMENT

ಶೈಕ್ಷಣಿಕ ಜಿಲ್ಲೆಯ ಜನಪ್ರತಿನಿಧಿಗೆ ಒಲಿದ ಶಿಕ್ಷಣ ಖಾತೆ

ಸರ್ಕಾರದ ಖಾತೆಗಳಲ್ಲಿ ಮಹತ್ವದ ಬದಲಾವಣೆ, ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್‌ಗೆ ಶಿಕ್ಷಣ ಖಾತೆ

​ಪ್ರಜಾವಾಣಿ ವಾರ್ತೆ
Published 24 ಜೂನ್ 2019, 17:02 IST
Last Updated 24 ಜೂನ್ 2019, 17:02 IST
ಎಸ್.ಆರ್.ಶ್ರೀನಿವಾಸ್
ಎಸ್.ಆರ್.ಶ್ರೀನಿವಾಸ್   

ತುಮಕೂರು: ಗುಬ್ಬಿ ಕ್ಷೇತ್ರದಿಂದ ಸತತ ನಾಲ್ಕನೇ ಬಾರಿ ಶಾಸಕರಾಗಿ ಆಯ್ಕೆಯಾದ ಎಸ್‌.ಆರ್.ಶ್ರೀನಿವಾಸ್ (ವಾಸು) ಅವರಿಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸ್ಥಾನ ಲಭಿಸಿದೆ. ಕೆಲ ತಿಂಗಳುಗಳ ಹಿಂದೆಯಷ್ಟೇ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಸಣ್ಣ ಕೈಗಾರಿಕೆ ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದರು.

ಈಗ ಮಹತ್ವದ ಖಾತೆಗಳಲ್ಲೊಂದಾದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಖಾತೆಯು ಅವರಿಗೆ ಒಲಿದು ಬಂದಿದೆ. ಸಣ್ಣ ಕೈಗಾರಿಕೆ ಸಚಿವ ಸ್ಥಾನ ಪಕ್ಷೇತರ ಶಾಸಕರಾದ ಎಚ್.ನಾಗೇಶ್ ಅವರಿಗೆ ಲಭಿಸಿದೆ.

ಶೈಕ್ಷಣಿಕ ಜಿಲ್ಲೆ ಎಂಬ ಹೆಗ್ಗಳಿಕೆ ಹೊಂದಿರುವ ತುಮಕೂರು ಜಿಲ್ಲೆಯವರಾದ ಶ್ರೀನಿವಾಸ್ ಅವರಿಗೆ ಶಿಕ್ಷಣ ಖಾತೆ ಲಭಿಸಿರುವುದು ಜಿಲ್ಲೆಯ ಶಿಕ್ಷಣ ಪ್ರೇಮಿಗಳಿಗೆ, ಅವರ ಬೆಂಬಲಿಗರಿಗೆ ಬಹು ನಿರೀಕ್ಷೆ ಹುಟ್ಟಿಸಿದೆ.

ADVERTISEMENT

ಗುಬ್ಬಿ ತಾಲ್ಲೂಕು ಸೇರವೆಗಾರನಪಾಳ್ಯ ಗ್ರಾಮದವರಾಗಿದ್ದು, ಕೃಷಿ ಕುಟುಂಬದಿಂದ ಬಂದವರು. ಸಿ.ಎಸ್.ಪುರ ಕ್ಷೇತ್ರದ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾಗುವ ಮೂಲಕ ರಾಜಕೀಯ ಕ್ಷೇತ್ರ ಪ್ರವೇಶಿಸಿದರು.

2004ರಲ್ಲಿ ಗುಬ್ಬಿ ವಿಧಾನ ಸಭಾ ಕ್ಷೇತ್ರಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದು ಪ್ರಥಮ ಪ್ರಯತ್ನದಲ್ಲೇ ಗೆಲುವು ಸಾಧಿಸಿದರು.
ಬಳಿಕ 2008, 2013, 2018ರಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸತತವಾಗಿ ಗೆಲುವು ಸಾಧಿಸಿದ್ದಾರೆ.

ತುಮಕೂರು ಸರ್ಕಾರಿ ಕಲಾ ಕಾಲೇಜಿನಲ್ಲಿ ಬಿ.ಎ ಪದವಿ ಪಡೆದಿದ್ದಾರೆ. ಶೆಟಲ್ ಬ್ಯಾಡ್ಮಿಂಟನ್ ಕ್ರೀಡಾಪಟುವಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.