ADVERTISEMENT

ಮತಯಂತ್ರದಲ್ಲಿ ಹಣೆಬರಹ ಭದ್ರ: ಶೇ 82.67 ಮತದಾನ

ಹುಳಿಯಾರು ಪಟ್ಟಣ ಪಂಚಾಯಿತಿಯ 16 ವಾರ್ಡ್‌ಗಳಿಗೆ ಚುನಾವಣೆ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2021, 4:30 IST
Last Updated 30 ಮಾರ್ಚ್ 2021, 4:30 IST
ಹುಳಿಯಾರಿನ ಎಂಪಿಎಸ್‌ ಶಾಲೆಯ ಮತಗಟ್ಟೆಗೆ ಮತದಾನ ಮಾಡಲು ವೃದ್ಧೆಯನ್ನು ಕರೆ ತರುತ್ತಿರುವ ಕುಟುಂಬದ ಸದಸ್ಯರು
ಹುಳಿಯಾರಿನ ಎಂಪಿಎಸ್‌ ಶಾಲೆಯ ಮತಗಟ್ಟೆಗೆ ಮತದಾನ ಮಾಡಲು ವೃದ್ಧೆಯನ್ನು ಕರೆ ತರುತ್ತಿರುವ ಕುಟುಂಬದ ಸದಸ್ಯರು   

ಹುಳಿಯಾರು: ಇಲ್ಲಿನ ಪಟ್ಟಣ ಪಂಚಾಯಿತಿಗೆ ಸೋಮವಾರ ನಡೆದ ಚುನಾವಣೆ ಶಾಂತಿಯುತವಾಗಿದ್ದು, ಶೇಕಡ 82.67ರಷ್ಟು ಮತದಾನವಾಗಿದೆ. ಅಭ್ಯರ್ಥಿಗಳ ಹಣೆಬರಹ ಮತ ಯಂತ್ರದಲ್ಲಿ ಭದ್ರವಾಗಿದೆ.

ಒಟ್ಟು 16 ವಾರ್ಡ್‌ಗಳಿಗೆ ಬೆಳಿಗ್ಗೆ 7 ಗಂಟೆಯಿಂದ ಆರಂಭಗೊಂಡು ಸಂಜೆ 5 ವರೆಗೆ ಮತದಾನ ನಡೆಯಿತು. ಬೆಳಿಗ್ಗೆ ಬಿರುಸಿನಿಂದ ಆರಂಭವಾದ ಮತದಾನ ಮಧ್ಯಾಹ್ನದ ವೇಳೆಗೆ ನೀರಸವಾಗಿತ್ತು. ಇದೇ ಮೊದಲ ಬಾರಿಗೆ ನಡೆದ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಮತ ಯಂತ್ರ(ಇವಿಎಂ)ಗಳನ್ನು ಬಳಸಲಾಗಿತ್ತು. ಎಲ್ಲಾ ಕ್ಷೇತ್ರಗಳಲ್ಲೂ ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಹಾಗೂ ಕೆಲವೇ ಕ್ಷೇತ್ರಗಳಲ್ಲಿ ಪಕ್ಷೇತರ ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದಾರೆ.

ಮಧ್ಯಾಹ್ನದ ವೇಳೆಗೆ ಕೆಲವು ಮತಗಟ್ಟೆಗಳಲ್ಲಿ ಶೇಕಡ 75ರಷ್ಟು ಮತದಾನವಾಗಿತ್ತು. 9ನೇ ವಾರ್ಡ್‌ನಲ್ಲಿ ಅತಿಹೆಚ್ಚು ಶೇಕಡ 94.89ರಷ್ಟು ಮತದಾನವಾರೆ, ಅತಿ ಕಡಿಮೆ ಮತದಾನ 15ನೇ ವಾರ್ಡ್‌ನಲ್ಲಿ(ಶೇಕಡ 72.06) ಆಗಿದೆ. ಸಂಜೆ ವೇಳೆಗೆ ಅಭ್ಯರ್ಥಿಗಳು ಮತದಾರರನ್ನು ಹುಡುಕಿ ತಂದು ಮತದಾನ ಮಾಡಿಸುತ್ತಿದ್ದರು.

ADVERTISEMENT

10ನೇ ವಾರ್ಡ್‌ನ ಮತದಾರರಪಟ್ಟಿಯಲ್ಲಿ ಹೆಸರು ಬಿಟ್ಟು ಹೋಗಿದೆ ಎಂದು ಕೆಲವರು ಆರೋಪಿಸಿದರು. ಹಾಗೆಯೇ ಪಟ್ಟಣದಲ್ಲಿ ಒಂದು ಬಡಾವಣೆಯಿಂದ ಮತ್ತೊಂದು ಬಡಾವಣೆಯಲ್ಲಿ ಬಾಡಿಗೆ ಮನೆಗೆ ಹೋಗಿರುವ ಮತದಾರರ ಹೆಸರು ಬಿಟ್ಟು ಹೋಗಿದೆ. ನಮಗೆ ಮೊದಲೇ ಬಿಎಲ್‌ಒಗಳು ತಿಳಿಸಿದ್ದರೆ ಹೆಸರು ನೋಂದಣಿ ಮಾಡುತ್ತಿದ್ದೆವು ಎಂದು ಕೆಲವರು ದೂರಿದರು.

ವಾರ್ಡ್‌ವಾರು ಮತ ದಾನ:1ನೇವಾರ್ಡ್ –ಶೇ 86.28, 2ನೇ ವಾರ್ಡ್‌– ಶೇ 85.53, 3ನೇ ವಾರ್ಡ್– ಶೇ‌ 80.97, 4ನೇ ವಾರ್ಡ್– ಶೇ‌ 78.49, 5ನೇ ವಾರ್ಡ್– ಶೇ 77.14, 6ನೇ ವಾರ್ಡ್– ಶೇ 73.97, 7ನೇ ವಾರ್ಡ್– ಶೇ‌ 77.07, 8ನೇ ವಾರ್ಡ್– ಶೇ‌ 92.12, 9ನೇ ವಾರ್ಡ್– ಶೇ 94.89, 10ನೇ ವಾರ್ಡ್– ಶೇ‌ 91.74, 11ನೇ ವಾರ್ಡ್– ಶೇ‌ 88.09, 12ನೇ ವಾರ್ಡ್– ಶೇ‌ 82.81, 13ನೇ ವಾರ್ಡ್– ಶೇ‌ 81.46, 14ನೇ ವಾರ್ಡ್– ಶೇ‌ 85.30, 15ನೇ ವಾರ್ಡ್– ಶೇ‌ 72.06 ಮತ್ತು 16ನೇ ವಾರ್ಡ್‌ನಲ್ಲಿ ಶೇಕಡ‌ 79.07ರಷ್ಟು ಮತದಾನವಾಗಿದೆ ಎಂದು ಚುನಾವಣಾಧಿಕಾರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.