ADVERTISEMENT

‘ಎತ್ತಿನಹೊಳೆ’ ತಿಪಟೂರಿಗೂ ಹರಿಯಲಿ

ತಿಪಟೂರು: ಹೋರಾಟ ಸಮಿತಿ ಪದಾಧಿಕಾರಿಗಳ ಒತ್ತಾಯ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2020, 5:26 IST
Last Updated 17 ಸೆಪ್ಟೆಂಬರ್ 2020, 5:26 IST
ಎತ್ತಿನಹೊಳೆ ಕಾಮಗಾರಿಯ ಒಂದು ದೃಶ್ಯ
ಎತ್ತಿನಹೊಳೆ ಕಾಮಗಾರಿಯ ಒಂದು ದೃಶ್ಯ   

ತಿಪಟೂರು: ಎತ್ತಿನಹೊಳೆ ಯೋಜನೆಯಲ್ಲಿ ತಿಪಟೂರು ತಾಲ್ಲೂಕಿಗೆ ನೀರಿನ ಹಂಚಿಕೆ ಮಾಡಬೇಕು, ಭೂಸಂತ್ರಸ್ತರಿಗೆ ನ್ಯಾಯಯುತ ಭೂ ಪರಿಹಾರ ನೀಡಬೇಕು ಎಂದು ಎತ್ತಿನಹೊಳೆ ಹೋರಾಟ ಸಮಿತಿ ಪದಾಧಿಕಾರಿಗಳು ಸರ್ಕಾರವನ್ನು ಒತ್ತಾಯಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಅಧ್ಯಕ್ಷ ತಿಮ್ಲಾಪುರ ದೇವರಾಜು, ನಿರಂತರ ಹೋರಾಟದ ಪ್ರಯತ್ನದಿಂದಾಗಿ ‘ನೀರಿನ ಹಂಚಿಕೆಯಾಗಿದೆ’. ‘ತಿಪಟೂರಿಗೆ ನೀರು ಸಿಗುತ್ತದೆ’ ಎಂದು ಮೂಗಿಗೆ ತುಪ್ಪ ಸವರುವ ಮಾತುಗಳು ಕೇಳಿಬರುತ್ತಿವೆ. ಇದುವರೆಗೂ ಅಧಿಕೃತ ಆದೇಶ ಬಂದಿಲ್ಲ. ಎತ್ತಿನಹೊಳೆಯ ಕಾಲುವೆ ತಿಪಟೂರಿನ ಮೇಲೆ ಹಾದು ಹೋಗುತ್ತಿದ್ದು, 1000 ಎಕರೆಗೂ ಹೆಚ್ಚು ಭೂಮಿ ಸ್ವಾಧೀನವಾಗುತ್ತಿದೆ. ಆದರೂ ಈ ಯೋಜನೆಯಲ್ಲಿ ತಿಪಟೂರಿಗೆ ಒಂದು ಹನಿ ನೀರಿನ ಹಂಚಿಕೆಯಾಗಿಲ್ಲ ಎಂದು ದೂರಿದರು.

ಚಿಕ್ಕನಾಯಕನಹಳ್ಳಿ, ಗುಬ್ಬಿ ತಾಲ್ಲೂಕುಗಳಿಗೂ ಅರ್ಧಚಂದ್ರವೇ. ಸಣ್ಣ ನೀರಾವರಿ ಸಚಿವರು ತುಮಕೂರಿನವರೇ ಅಗಿದ್ದರೂ, ಜಿಲ್ಲೆಯ ತಾಲ್ಲೂಕುಗಳಿಗೆ ಮೋಸವಾಗಿದೆ. ಮಂತ್ರಿಗಳಾಗಲೀ, ಶಾಸಕರಾಗಲೀ ನೀರಿನ ಹಂಚಿಕೆ ಬಗ್ಗೆ ಮಾತನಾಡದಿರುವುದು ದೊಡ್ಡ ದುರಂತ ಎಂದು ಹೇಳಿದರು.

ADVERTISEMENT

ಈಗಾಗಲೇ ಹಾಸನ ಜಿಲ್ಲೆಯ ಬೇಲೂರು, ಸಕಲೇಶಪುರ, ಅರಸೀಕರೆ ತಾಲ್ಲೂಕುಗಳಲ್ಲಿ ಕಾಮಗಾರಿ ಬಹುತೇಕ ಮುಕ್ತಾಯದ ಹಂತಕ್ಕೆ ಬಂದಿದೆ. ಆದರೆ, ಅಲ್ಲಿನ ಭೂ ಸಂತ್ರಸ್ತರಿಗೆ ಪರಿಹಾರವನ್ನೇ ಕೊಟ್ಟಿಲ್ಲ. ಈಗ ತುಮಕೂರು ಜಿಲ್ಲೆಯ ತಿಪಟೂರು, ಗುಬ್ಬಿ, ತುಮಕೂರು ಹಾಗೂ ಕೊರಟಗೆರೆ ತಾಲ್ಲೂಕುಗಳಲ್ಲಿ ಸಂತ್ರಸ್ತರ ಅಹವಾಲು ಸಹ ಆಲಿಸದೆ ಭೂಸ್ವಾಧೀನ ಪ್ರಕ್ರಿಯೆ ನಡೆಸುತ್ತಿರುವುದು ಪ್ರಜಾಪ್ರಭುತ್ವದ ಕಗ್ಗೋಲೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎತ್ತಿನಹೊಳೆ ಹೋರಾಟ ಸಮಿತಿ ಕಾರ್ಯದರ್ಶಿ ಎಸ್.ಎನ್.ಸ್ವಾಮಿ ಮಾತನಾಡಿದರು.

ಸುದ್ದಿಗೋಷ್ಠಿಯಲ್ಲಿ ಮೀಸೆ ತಿಮ್ಮನಹಳ್ಳಿ ಮಂಜುನಾಥ್, ಬೊಮ್ಮೆನ ಹಳ್ಳಿ ರಾಜಣ್ಣ, ಸಚಿನ್ ಬೊಮ್ಮ ಲಾಪುರ, ರೇವಣಸಿದ್ಧಯ್ಯ, ಅಯ್ಯಣ್ಣ ಹುಚ್ಚನಹಟ್ಟಿ, ಷಡಕ್ಷರಿ, ಯೋಗಾ ನಂದಸ್ವಾಮಿ, ಸಿದ್ದಲಿಂಗ ಮೂರ್ತಿ, ಶ್ರೀಕಾಂತ್, ಸರ್ವೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.