ಕೊಡಿಗೇನಹಳ್ಳಿಯಲ್ಲಿ ಬುಧವಾರ ತಾಲ್ಲೂಕು ಆಡಳಿತದಿಂದ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಶಾಸಕ ಕೆ.ಎನ್. ರಾಜಣ್ಣ ಫಲಾನುಭವಿಗಳಿಗೆ ಆದೇಶ ಪತ್ರ ನೀಡಿದರು
ಕೊಡಿಗೇನಹಳ್ಳಿ: ‘ಮತದಾರರು ನನಗೆ ಕೊಟ್ಟ ಬಹುಮತದಿಂದ ನಾನು ಅವರ ಋಣದಲ್ಲಿದ್ದೇನೆ. ಹಾಗಾಗಿ ನಾನು ರಾಜಕೀಯವಾಗಿ ಬೆನ್ನು ತೋರಿಸುವವನಲ್ಲ. ಅವರಿಗೆ ಎದೆಕೊಟ್ಟು ನಿಲ್ಲುವವನು’ ಎಂದು ಶಾಸಕ ಕೆ.ಎನ್. ರಾಜಣ್ಣ ತಿಳಿಸಿದರು.
ಗ್ರಾಮ ಪಂಚಾಯಿತಿ ಆವರಣದಲ್ಲಿ ಬುಧವಾರ ತಾಲ್ಲೂಕು ಆಡಳಿತದಿಂದ ನಡೆದ ಹೋಬಳಿ ಮಟ್ಟದ ಜನಸ್ಪಂದನಾ ಹಾಗೂ ವಿವಿಧ ಸೌಲಭ್ಯ ವಿರರಣಾ ಸಮಾರಂಭ ಉದ್ಘಾಟಸಿ ಮಾತನಾಡಿದರು.
ಸಹಕಾರ ಸಚಿವನಾಗಿ ಸಹಕಾರ ಸಂಘಗಳ ಕಾಯ್ದೆಗೆ ತಿದ್ದುಪಡಿಯಲ್ಲಿ ಗ್ರಾಮ ಪಂಚಾಯಿತಿ ಮಾದರಿಯಲ್ಲಿ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ರೀತಿ ಮೀಸಲಾತಿಗೆ ಅನುವು ಮಾಡಿಕೊಟ್ಟಿದ್ದೇನೆ. ಮುಂದೆ ಕಾಯ್ದೆ ಜಾರಿಯಾದಲ್ಲಿ ಜನರಿಗೆ ಅದರ ಪ್ರಯೋಜನ ತಿಳಿಯುತ್ತದೆ. ತಾಲ್ಲೂಕಿನ 46 ಕೆರೆಗಳಿಗೆ ಎತ್ತಿನಹೊಳೆ ಯೋಜನೆಯಡಿ ಕುಡಿಯುವ ನೀರು ಒದಗಿಸುವ ಕಾಮಗಾರಿ ಶರವೇಗದಲ್ಲಿ ನಡೆಯುತ್ತಿದ್ದು, ಮುಂದಿನ ವರ್ಷ ಕೆರೆಗಳಿಗೆ ನೀರು ಹರಿಯುವ ಭರವಸೆ ಇದೆ ಎಂದರು.
ಜಿಲ್ಲಾ ಪಂಚಾಯಿತಿ ಸಿಇಒ ಪ್ರಭು ಮಾತನಾಡಿ, ತಾಲ್ಲೂಕು ಜಿಲ್ಲೆಯಲ್ಲಿ ನರೇಗಾ ಯೋಜನೆ ಅನುಷ್ಠಾನದಲ್ಲಿ 2ನೇ ಸ್ಥಾನದಲ್ಲಿದೆ. ಕಾಮಗಾರಿಗಳಲ್ಲಿ ಗುಣಮಟ್ಟ ಕಾಯ್ದುಕೊಳಬೇಕಿದೆ. ತಾಲ್ಲೂಕಿನಲ್ಲಿ 15 ಅಂಗನವಾಡಿ, 30 ಶಾಲೆಗಳ ಅಭಿವೃದ್ಧಿಗೆ ಅನುಮೋದನೆ ನೀಡಲಾಗಿದೆ. ಸರ್ಕಾರ ಹೊಸ 500 ಆಸ್ಪತ್ರೆ ಮಂಜೂರು ಮಾಡಿದ್ದು, ಅದರಲ್ಲಿ ಜಿಲ್ಲೆಗೆ ಬಹುಪಾಲು 130 ಬಂದಿವೆ. ಅದರಲ್ಲಿ 26 ಮಧುಗಿರಿ ತಾಲ್ಲೂಕಿಗೆ ಸಿಕ್ಕಿದೆ ಎಂದರು.
ತಾಲ್ಲೂಕಿನಲ್ಲಿ 3,000 ನಿವೇಶನ ಹಂಚಿಕೆ ಗುರಿ ಹೊಂದಲಾಗಿದ್ದು, ಈಗ 135 ಹಕ್ಕುಪತ್ರ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ 3 ಲಕ್ಷಕ್ಕೂ ಹೆಚ್ಚು ಇ-ಖಾತೆ ಬಾಕಿಯಿದ್ದು ಅಭಿಯಾನದಡಿ ಗುರಿಮುಟ್ಟಲಾಗುವುದು ಎಂದರು.
ಉಪ ವಿಭಾಗಾಧಿಕಾರಿ ಗೋಟೂರು ಶಿವಪ್ಪ ಮಾತನಾಡಿ, ಸರ್ಕಾರದ ಎಲ್ಲ ಸೌಲಭ್ಯಗಳು ನೇರವಾಗಿ ರೈತರು ಮತ್ತು ಜನರಿಗೆ ಮುಟ್ಟಬೇಕು. ಪ್ರತಿ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚಿಸುವುದರ ಮೂಲಕ ಜನರ ಮತ್ತು ಕ್ಷೇತ್ರ ಅಭಿವೃದ್ಧಿಗೆ ಒತ್ತು ನೀಡುತ್ತಿದ್ದಾರೆ ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅಂಜಿನಮ್ಮ ನ್ಯಾತಪ್ಪ, ಉಪಾಧ್ಯಕ್ಷೆ ಶಭೀನಾಭಾನು, ಡಿಡಿಪಿಐ ಮಾಧವರೆಡ್ಡಿ, ತಹಶೀಲ್ದಾರ್ ಶ್ರೀನಿವಾಸ್, ಇಒ ಲಕ್ಷ್ಮಣ್, ಬಿಇಒ ಕೆ.ಎನ್.ಹನುಮಂತರಾಯಪ್ಪ, ಅರಣ್ಯ ಇಲಾಖೆ ವಲಯ ಅರಣ್ಯಾಧಿಕಾರಿ ಎಚ್.ಎಂ. ಸುರೇಶ್, ಬೆಸ್ಕಾಂ ಇಇ ಜಗದೀಶ್, ಎಇಇ ಮಂಜುನಾಥ್, ಪುರಸಭೆ ಅಧ್ಯಕ್ಷ ಮಂಜುನಾಥ್, ಡಿಸಿಸಿ ಬ್ಯಾಂಕ್ ನಿರ್ದೇಶಕ ನಾಗೇಶ್ ಬಾಬು, ಎಂ.ಪಿ. ಕಾಂತರಾಜು, ಇಂದಿರಾದೇನಾನಾಯ್ಕ್, ಸುವರ್ಣಮ್ಮ, ಆದಿನಾರಾಯಣರೆಡ್ಡಿ, ಜೆ.ಡಿ. ವೆಂಕಟೇಶ್, ಸಂಜೀವಗೌಡ, ನ್ಯಾತಪ್ಪ, ಪ್ರೂಟ್ ಕೃಷ್ಣ, ಜೆ. ಮಕ್ತಿಯಾರ್, ಬಾಲಾಜಿ, ಶಾಮೀರ್,ಕೆ.ವಿ. ವೆಂಕಟೇಶ್, ಉಪತಹಶೀಲ್ದಾರ್ ಕೆ.ಎಲ್. ಸುದರ್ಶನ್, ಕಂದಾಯ ತನಿಖಾಧಿಕಾರಿ ಸಿ.ಆರ್. ರವೀಂದ್ರ, ಪಿಡಿಒ ನವೀನ್, ಗ್ರಾಮ ಲೆಕ್ಕಾಧಿಕಾರಿ ಶವಿಶಂಕರ್ ನಾಯ್ಕ್ ಹಾಜರಿದ್ದರು.
ಅಂಬೇಡ್ಕರ್ ವಸತಿ ನಿಲಯ ನಾಡಕಚೇರಿ ನೂತನ ಕಟ್ಟಡಕ್ಕೆ ಶೀಘ್ರ ಭೂಮಿಪೂಜೆ ನಡೆಸಲಾಗುವುದು. ಮುಂದಿನ ದಿನಗಳಲ್ಲಿ ತೆರಿಯೂರು ಬಳಿ ಕಾರ್ಖಾನೆ ಆರಂಭಿಸುವುದರ ಜೊತೆಗೆ ಕೊಡಿಗೇನಹಳ್ಳಿ ತಾಲ್ಲೂಕು ಕೇಂದ್ರ ಮಾಡಲು ಅಗತ್ಯ ಸೌಕರ್ಯಕ್ಕೆ ಒತ್ತು ನೀಡುವೆ.ಕೆ.ಎನ್. ರಾಜಣ್ಣ ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.