ADVERTISEMENT

₹25 ಸಾವಿರ ಸಾಲ ಮನ್ನಾ: ಕೆ.ಎನ್‌.ರಾಜಣ್ಣ

ಏಳು ಮಂದಿಗೆ ಸಹಕಾರ ರತ್ನ ಪ್ರಶಸ್ತಿ ಪ್ರದಾನ: ಪ್ರಯೋಜನ ಪಡೆಯಲು ಸಲಹೆ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2025, 6:10 IST
Last Updated 7 ಡಿಸೆಂಬರ್ 2025, 6:10 IST
<div class="paragraphs"><p>ತುಮಕೂರಿನಲ್ಲಿ ಶನಿವಾರ ರಾಜ್ಯ ಸಹಕಾರ ಮಹಾಮಂಡಳದಿಂದ&nbsp;ಸಹಕಾರ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು. </p></div>

ತುಮಕೂರಿನಲ್ಲಿ ಶನಿವಾರ ರಾಜ್ಯ ಸಹಕಾರ ಮಹಾಮಂಡಳದಿಂದ ಸಹಕಾರ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.

   

ತುಮಕೂರು: ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನಲ್ಲಿ (ಡಿಸಿಸಿ) ಸಾಲ ಪಡೆದು ಮೃತಪಟ್ಟ ರೈತರ ₹25 ಸಾವಿರ ಮನ್ನಾ ಮಾಡಲು ನಿರ್ಧರಿಸಲಾಗಿದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ, ಶಾಸಕ ಕೆ.ಎನ್.ರಾಜಣ್ಣ ಹೇಳಿದರು.

ನಗರದಲ್ಲಿ ಶನಿವಾರ ರಾಜ್ಯ ಸಹಕಾರ ಮಹಾಮಂಡಳ, ತುಮುಲ್‌, ಜಿಲ್ಲಾ ಸಹಕಾರಿ ಯೂನಿಯನ್‌ ವತಿಯಿಂದ ಹಮ್ಮಿಕೊಂಡಿದ್ದ ಸಹಕಾರ ರತ್ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.

ADVERTISEMENT

ಡಿ. 31ರ ಒಳಗೆ ಒಂದೇ ಕಂತಿನಲ್ಲಿ ಸಾಲ ಮರು ಪಾವತಿ ಮಾಡಿದರೆ ₹25 ಸಾವಿರ ಮನ್ನಾ ಮಾಡಲಾಗುವುದು. ಬ್ಯಾಂಕ್‌ನ ಆಡಳಿತ ಮಂಡಳಿಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗಿದೆ. ತೆಗೆದುಕೊಂಡ ಸಾಲ ತೀರಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಕುಟುಂಬಸ್ಥರು ಪಾವತಿಸಬೇಕಾಗುತ್ತದೆ. ರೈತರು ಇದರ ಪ್ರಯೋಜನ ಪಡೆಯಬೇಕು ಎಂದರು.

ಪಕ್ಷಾತೀತ, ಜಾತ್ಯತೀತವಾಗಿ ಸಹಕಾರ ಆಂದೋಲನ ಕೆಲಸ ಮಾಡಬೇಕು. ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಆರ್ಥಿಕವಾಗಿ ಸದೃಢವಾಗಬೇಕು ಎಂಬುವುದು ನಮ್ಮ ಗುರಿ. ಅದರಂತೆಯೇ ಕಾರ್ಯ ನಿರ್ವಹಿಸುತ್ತಿದ್ದೇವೆ. ಎಷ್ಟೇ ಎಕರೆ ಜಮೀನು ಇದ್ದರೂ ರೈತ ಆರ್ಥಿಕವಾಗಿ ಸದೃಢವಾಗುತ್ತಿಲ್ಲ. ಸಾಲದ ಹೊರೆ ಏರಿಕೆಯಾಗುತ್ತಿದೆ. ಇದರಿಂದ ಹೊರ ಬರಲು ಕೃಷಿಯ ಜತೆಗೆ ಉಪ ಕಸುಬು ಅಳವಡಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.

ರೈತರು ದಯನೀಯ ಸ್ಥಿತಿಯಲ್ಲಿದ್ದಾರೆ. ಸರ್ಕಾರ ಕೃಷಿಗೆ ಪೂರಕವಾದ ಸಾಮಗ್ರಿ, ರಸಗೊಬ್ಬರ, ಬಿತ್ತನೆ ಬೀಜವನ್ನು ಕಡಿಮೆ ದರದಲ್ಲಿ ಒದಗಿಸಬೇಕು. ಲಾಭದಾಯಕ ಬೆಳೆ ಬೆಳೆಯಲು ಮಾರ್ಗದರ್ಶನ ಮಾಡಬೇಕು ಎಂದು ತಿಳಿಸಿದರು.

ಶಾಸಕ ಜಿ.ಬಿ.ಜ್ಯೋತಿಗಣೇಶ್, ‘ರಾಜಣ್ಣ ಸಹಕಾರ ಕ್ಷೇತ್ರಕ್ಕೆ ಶಕ್ತಿ ಕೊಟ್ಟಿದ್ದಾರೆ. ಸಹಕಾರ ಕ್ಷೇತ್ರದ ನೆರವಿನಿಂದ ಸಾಮಾನ್ಯ ಕುಟುಂಬದ ಜನರು ಮುಖ್ಯವಾಹಿನಿಗೆ ಬರಲು ಸಾಧ್ಯವಾಗಿದೆ’ ಎಂದು ಅಭಿಪ್ರಾಯಪಟ್ಟರು.

ತುಮುಲ್‌ ಅಧ್ಯಕ್ಷ, ಶಾಸಕ ಎಚ್.ವಿ.ವೆಂಕಟೇಶ್‌, ‘ರಾಜಣ್ಣ ಬಡವರ ಪರವಾಗಿ ಕಾಳಜಿ ಹೊಂದಿರುವ ವ್ಯಕ್ತಿ. ಅವರನ್ನು ಮತ್ತೆ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಎಂದು ಅಧಿವೇಶನದ ಸಮಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಒತ್ತಾಯಿಸಲಾಗುವುದು. ಈಗಾಗಲೇ ಸಮಾನ ಮನಸ್ಕರು ಸಭೆ ಸೇರಿ ನಿರ್ಧಾರ ತೆಗೆದುಕೊಂಡಿದ್ದೇವೆ’ ಎಂದು ಹೇಳಿದರು.

ಸಹಕಾರ ಮಹಾಮಂಡಳ ನಿರ್ದೇಶಕ ಎನ್.ಗಂಗಣ್ಣ, ಜಿಲ್ಲಾ ಸಹಕಾರ ಯೂನಿಯನ್‌ ಅಧ್ಯಕ್ಷ ಬಿ.ಜಿ.ವೆಂಕಟೇಗೌಡ, ಸಹಕಾರ ಸಂಘಗಳ ನಿಬಂಧಕ ಟಿ.ಎಚ್.ಎಂ.ಕುಮಾರ್, ಡಿಸಿಸಿ ಬ್ಯಾಂಕ್‌ ಸಲಹೆಗಾರ ಜಿ.ಎಸ್‌.ರಮಣರೆಡ್ಡಿ, ಮುಖಂಡರಾದ ಮಹಾಲಿಂಗಪ್ಪ, ರಾಮಮೂರ್ತಿ, ಎಸ್.ಆರ್.ಗೌಡ, ಸಿದ್ಧಗಂಗಪ್ಪ, ಪ್ರಕಾಶ್, ಡಿ.ಕೃಷ್ಣಕುಮಾರ್, ನಾಗೇಶ್‌ಬಾಬು ಇತರರು ಪಾಲ್ಗೊಂಡಿದ್ದರು.

ಡಿಕೆಶಿ ಸಂಪುಟದಲ್ಲಿ ಸಚಿವ ಸ್ಥಾನ ಬೇಡ: ರಾಜಣ್ಣ ‘ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮುಖ್ಯಮಂತ್ರಿಯಾದರೆ ನನಗೆ ಸಚಿವ ಸ್ಥಾನ ಕೊಡುವುದು ಬೇಡ’ ಎಂದು ಶಾಸಕ ಕೆ.ಎನ್‌.ರಾಜಣ್ಣ ಹೇಳಿದರು. ನಗರದಲ್ಲಿ ಶನಿವಾರ ಸುದ್ದಿಗಾರರ ಜತೆ ಮಾತನಾಡಿ ಡಿ.ಕೆ.ಶಿವಕುಮಾರ್‌ ಸಂಪುಟದಲ್ಲಿ ನಾನು ಸಚಿವನಾಗಿ ಇರುವುದಿಲ್ಲ. ಮಂತ್ರಿ ಸ್ಥಾನ ನೀಡುವುದು ಬೇಡ. ಬೇರೆಯವರಿಗೆ ಅವಕಾಶ ಸಿಗಲಿ. ನಾನು ಅಧಿಕಾರ ಹುಡುಕಿಕೊಂಡು ಹೋಗುವುದಿಲ್ಲ. ಅಧಿಕಾರ ಬೇಕು ಅಂತ ಅಪೇಕ್ಷೆ ಪಡುವುದಿಲ್ಲ. ಅಧಿಕಾರ ಸಿಕ್ಕರೆ ಏನು ಮಾಡಬಹುದು ಎಂದು ತೋರಿಸಿ ಕೊಟ್ಟಿದ್ದೇನೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.