
ಕೊರಟಗೆರೆ: ಕಡಿಮೆ ಕೂಲಿ, ಹೆಚ್ಚು ದುಡಿಮೆ ಮಾಡುವ ಯುವಕರು ಕೈಗೆ ಸಿಗುವ ಕಾಸಿನಿಂದ ಅಡ್ಡದಾರಿ ಹಿಡಿಯುತ್ತಿರುವ ಸಂಖ್ಯೆ ಹೆಚ್ಚುತ್ತಿದೆ ಎಂದು ತಾಲ್ಲೂಕು ಎರಡನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ತುಂಬಾಡಿ ರಾಮಯ್ಯ ಆತಂಕ ವ್ಯಕ್ತಪಡಿಸಿದರು.
ಪಟ್ಟಣದ ಎಂ.ಜಿ. ಪ್ಯಾಲೇಸ್‌ನಲ್ಲಿ ತಾಲ್ಲೂಕು ಆಡಳಿತ ಹಾಗೂ ಕಸಪಾ ಸೋಮವಾರ ಏರ್ಪಡಿಸಿದ್ದ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದರು.
ಪ್ರತಿದಿನ ಹೊಲಗದ್ದೆಗಳ ಕೆಲಸದಲ್ಲಿ ನಿರತರಾಗಿದ್ದ ಮಹಿಳೆಯರು ಈಗ ನಸುಕಿನಲ್ಲೇ ಎದ್ದು ಗಾರ್ಮೆಂಟ್ಸ್ ಅರಸಿ ಪಟ್ಟಣ ಪ್ರದೇಶಗಳಿಗೆ ಹೋಗುತ್ತಿದ್ದಾರೆ. ರಾತ್ರಿ ಏಳೆಂಟು ಗಂಟೆಯಾದರೂ ವಾಪಸ್ಸಾಗದ ಅವರ ಬದುಕಿಗೆ ಸುರಕ್ಷತೆ, ಭದ್ರತೆ ಇಲ್ಲದಂತಾಗಿದೆ. ಹೊಲಗದ್ದೆಗಳಲ್ಲಿ ದುಡಿಯುವವರ ಸಂಖ್ಯೆ ಕ್ಷೀಣಿಸಿದೆ. ಇರುವ ಅಷ್ಟಿಷ್ಟು ಭೂಮಿ ರೈತರ ಕೈತಪ್ಪಿ ಉಳ್ಳವರ ಪಾಲಾಗುತ್ತಿದೆ. ಇಂತಹ ಬೆಳವಣಿಗೆಗಳು ಭವಿಷ್ಯಕ್ಕೆ ಮಾರಕ ಎಂದರು.
ಜನಪ್ರತಿನಿಧಿಗಳು ಪರ್ಯಾಯ ಕ್ರಮ ಹಾಗೂ ಯೋಜನೆಗಳನ್ನು ಜಾರಿಗೆ ತರಬೇಕು. ಜನರು ಸರ್ಕಾರವನ್ನು ಅವಲಂಬಿಸದೆ, ಸ್ವಾಭಿಮಾನಿ, ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವ ನಿಟ್ಟಿನಲ್ಲಿ ಮುನ್ನಡೆಯಬೇಕು ಎಂದರು.
ಸಿದ್ಧರಬೆಟ್ಟದ ವೀರಭದ್ರಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಜೀವನದ ಮೌಲ್ಯಗಳು ಕಣ್ಮರೆಯಾಗುತ್ತಿದ್ದು, ಸತ್ಯ ಹೇಳುವವರನ್ನು, ಮಾನವೀಯ ಮೌಲ್ಯ ಇರುವವರನ್ನು ಹುಡುಕಬೇಕಾದ ಸ್ಥಿತಿ ಇದೆ. ಸಾಹಿತ್ಯಗಳು ಮಾನವೀಯ ಮೌಲ್ಯ ಎತ್ತಿ ಹಿಡಿಯುವ ಹಾಗೂ ಸಮಾಜಕ್ಕೆ ಉತ್ತಮ ಸಂದೇಶ ಸಾರುವಂತಾಗಬೇಕು ಎಂದರು.
ಚಿಂತಕ ಅಗ್ರಹಾರ ಕೃಷ್ಣಮೂರ್ತಿ ಮಾತನಾಡಿ, ಸಮಾಜದಲ್ಲಿ ನೆಮ್ಮದಿ ಹಾಳಾಗಿ, ಅಶಾಂತಿ ಉಲ್ಬಣಿಸುತ್ತಿರುವುದು ಅತ್ಯಂತ ಅಪಾಯಕಾರಿ. ಸಾಮಾಜಿಕ ವೈಪರೀತ್ಯದಿಂದ ಮುಂದಿನ ದಾರಿ ಕಾಣದೆ ಜನರು ತಬ್ಬಿಬ್ಬಾಗುತ್ತಿದ್ದಾರೆ ಎಂದರು.
ತಹಶೀಲ್ದಾರ್ ಕೆ. ಮಂಜುನಾಥ್ ಮಾತನಾಡಿ, ಕನ್ನಡ ಭಾಷೆಯ ಉಳಿವು ಮತ್ತು ಬೆಳವಣಿಗೆ ಪ್ರತಿಯೊಬ್ಬ ಕನ್ನಡಿಗನ ಹೊಣೆಗಾರಿಕೆ. ಸಾಹಿತ್ಯ, ಸಂಸ್ಕೃತಿ ಮತ್ತು ಪರಂಪರೆಯ ಮೌಲ್ಯಗಳು ಈ ಸಮ್ಮೇಳನ ಮೂಲಕ ತಲುಪುವಂತಾಗಲಿ ಎಂದರು.
ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ, ತಾಲ್ಲೂಕು ಅಧ್ಯಕ್ಷ ಕೆ.ಎಸ್.ಈರಣ್ಣ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ್ ಗೌಡ, ಗೃಹ ಸಚಿವರ ವಿಶೇಷ ಕರ್ತವ್ಯಧಿಕಾರಿ ನಾಗಣ್ಣ ಮಾತನಾಡಿದರು.
ತಾಲ್ಲೂಕು ಕಚೇರಿಯಿಂದ ವೇದಿಕೆವರೆಗೆ 2 ಕಿ.ಮೀ ಸಮ್ಮೇಳನ ಅಧ್ಯಕ್ಷರು ಹಾಗೂ ಕನ್ನಡಾಂಭೆ ಭಾವಚಿತ್ರವನ್ನು ವಿವಿಧ ಜಾನಪದ ಕಲಾತಂಡಗಳು ಹಾಗೂ ಪೂರ್ಣಕುಂಭದೊಂದಿಗೆ ಮೆರವಣಿಗೆ ಮೂಲಕ ವೇದಿಕೆಗೆ ಕರೆತರಲಾಯಿತು. ಮೆರವಣಿಗೆಯುದ್ದಕ್ಕೂ ಅಧಿಕಾರಿಗಳು, ಕನ್ನಡ ಹೋರಾಟಗಾರರು, ನೌಕರರು, ಪೌರಕಾರ್ಮಿಕರು ಸೇರಿದಂತೆ ಜನರು ಬಿಸಿಲಲ್ಲೂ ಅತ್ಯುತ್ಸಾಹದಿಂದ ಕುಣಿದು ಕುಪ್ಪಳಿಸಿದರು.
ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಕವಿಗೋಷ್ಠಿಯಲ್ಲಿ 20ಕ್ಕೂ ಹೆಚ್ಚು ತಾಲ್ಲೂಕಿನ ಯುವ ಕವಿಗಳು ಭಾಗವಹಿಸಿದ್ದರು.
ಅಧ್ಯಕ್ಷರೊಂದಿಗಿನ ಸಂವಾದದಲ್ಲಿ ಕವಿಗಳಾದ ಬಿದಲೋಟಿ ರಂಗನಾಥ್, ಎ.ಒ.ನರಸಿಂಹಮೂರ್ತಿ, ತುಳಸಿತನಯ, ಸಚ್ಚಿದಾನಂದ ಮೂರ್ತಿ, ಯಲಚಗೆರೆ ಉಮೇಶ್, ಕಾಂತರಾಜು ಗುಪ್ಪಣ್ನ, ಭೀ.ರಂ.ಜಗದೀಶ್ ದಾಡಿ ವೆಂಕಟೇಶ್ ಭಾಗವಹಿಸಿದ್ದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ, ಸಾಹಿತಿಗಳಾದ ರವಿಕುಮಾರ್ ನೀಹ, ಮುಕುಂದರಾಜ್, ಕರಿಗೌಡ, ತಾ.ಪಂ.ಇಒ ಅಪೂರ್ವ, ಪುರಸಭೆ ಸಿಒ ಕೆ.ಎಸ್.ಉಮೇಶ್, ನೌಕರರ ಸಂಘದ ಅಧ್ಯಕ್ಷ ಎಚ್.ಎಂ.ರುದ್ರೇಶ್, ಬಿಇಒ ಫೈರೋಜ್ ಬೇಗಂ, ಸಿಡಿಪಿಒ ಗಂಗಾಧರ್ ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.