ADVERTISEMENT

ಲಾರಿ ಚಾಲಕರಿಂದ ಟೋಲ್‌ನಲ್ಲಿ ಗಲಾಟೆ

ಫಾಸ್ಟ್ಯಾಗ್‌ ಅಳವಡಿಸಿಕೊಳ್ಳದ ವಾಹನಗಳು l ನಗದು ಶುಲ್ಕ ಪಾವತಿಗೆ ಒಂದು ಲೇನ್‌ ಮಾತ್ರ

ಸುಮಾ ಬಿ.
Published 17 ಜನವರಿ 2020, 9:49 IST
Last Updated 17 ಜನವರಿ 2020, 9:49 IST
ಶಿರಾ ತಾಲ್ಲೂಕಿನ ಕರೆಜೀವನಹಳ್ಳಿ ಟೋಲ್‌ನಲ್ಲಿ ಫಾಸ್ಟ್ಯಾಗ್‌ ಹಾಗೂ ಶುಲ್ಕ ಪಾವತಿ ಮಾರ್ಗದ ಬಗ್ಗೆ ಮಾಹಿತಿ ನೀಡಲು ನಿಂತಿರುವ ಸಿಬ್ಬಂದಿ
ಶಿರಾ ತಾಲ್ಲೂಕಿನ ಕರೆಜೀವನಹಳ್ಳಿ ಟೋಲ್‌ನಲ್ಲಿ ಫಾಸ್ಟ್ಯಾಗ್‌ ಹಾಗೂ ಶುಲ್ಕ ಪಾವತಿ ಮಾರ್ಗದ ಬಗ್ಗೆ ಮಾಹಿತಿ ನೀಡಲು ನಿಂತಿರುವ ಸಿಬ್ಬಂದಿ   

ತುಮಕೂರು: ‘ಫಾಸ್ಟ್ಯಾಗ್’ ಅಳವಡಿಕೆಗೆ ನೀಡಿದ ಗಡುವು ಬುಧವಾರಕ್ಕೆ (ಜ.15) ಮುಕ್ತಾಯವಾಗಿದ್ದು, ಟೋಲ್‌ ಪ್ಲಾಜಾಗಳಲ್ಲಿ ಶುಲ್ಕ ಪಾವತಿಯ ಗೊಂದಲ ಮುಂದುವರಿದಿದೆ. ಶುಲ್ಕ ಪಾವತಿಸುವ ವಿಚಾರಕ್ಕೆ ಕ್ಯಾತ್ಸಂದ್ರ ಟೋಲ್‌ನಲ್ಲಿ ಗುರುವಾರ ಲಾರಿ ಚಾಲಕರು ಹಾಗೂ ಟೋಲ್‌ ಸಿಬ್ಬಂದಿ ನಡುವೆ ಗಲಾಟೆ ನಡೆದಿದೆ.

‘ಫಾಸ್ಟ್ಯಾಗ್‌ ಅಳವಡಿಸಿಕೊಳ್ಳದ ಲಾರಿ ಚಾಲಕರು ಫಾಸ್ಟ್ಯಾಗ್‌ ಮಾರ್ಗದಲ್ಲಿ ಬಂದಿದ್ದರಿಂದ ಟೋಲ್‌ ಸಿಬ್ಬಂದಿ ದುಪ್ಪಟ್ಟು ಶುಲ್ಕ ವಿಧಿಸಿದರು. ಇದಕ್ಕೆ ಚಕಾರ ತೆಗೆದ ಲಾರಿ ಚಾಲಕರು ‘ಒಂದು ಪೈಸೆಯನ್ನೂ ಕಟ್ಟುವುದಿಲ್ಲ’ ಎಂದು ಟೋಲ್‌ ಸಿಬ್ಬಂದಿ ಮೇಲೆ ಹಲ್ಲೆಗೆ ಮುಂದಾದರು. ಇದರಿಂದ ಕೆಲ ಸಮಯ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು’ ಎಂದು ಕ್ಯಾತ್ಸಂದ್ರ ಟೋಲ್‌ ಸಿಬ್ಬಂದಿಯೊಬ್ಬರು ಮಾಹಿತಿ ನೀಡಿದರು.

‘ಹಿಂಬದಿಯ ವಾಹನಗಳಿಗೂ ಅವಕಾಶ ನೀಡದೆ ಅಡ್ಡಲಾಗಿ ನಿಂತರು. ಅವರ ಬಳಿ ಗಲಾಟೆ ಮಾಡಲಾಗದೆ ಅನಿವಾರ್ಯವಾಗಿ ಶುಲ್ಕ ಪಾವತಿಸಿಕೊಳ್ಳದೆ ಹಾಗೆಯೇ ಕಳುಹಿಸಬೇಕಾಯಿತು. ಟೋಲ್‌ ಸಿಬ್ಬಂದಿಯ ರಕ್ಷಣೆಗೆ ಪೊಲೀಸ್‌ ಸಿಬ್ಬಂದಿಯನ್ನೂ ನಿಯೋಜಿಸಿಲ್ಲ. ಈ ಬಗ್ಗೆ ಪೊಲೀಸ್‌ ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ’ ಎಂದು ಅಸಹಾಯಕರಾಗಿ ನುಡಿದರು.

ADVERTISEMENT

ಉದ್ದದ ಸಾಲು: ‘ಫಾಸ್ಟ್ಯಾಗ್‌’ ಅಳವಡಿಸಿಕೊಳ್ಳದ ವಾಹನಗಳು ನಗದು ರೂಪದಲ್ಲಿ ಶುಲ್ಕ ಪಾವತಿಸಲು ಟೋಲ್‌ ಪ್ಲಾಜಾದಲ್ಲಿ ಗಂಟೆಗಟ್ಟಲೇ ಕಾಯುವ ಸ್ಥಿತಿ ನಿರ್ಮಾಣವಾಗಿದೆ. ಕ್ಯಾತ್ಸಂದ್ರ ಟೋಲ್‌ನಲ್ಲಿ ನಗದು ರೂಪದ ಶುಲ್ಕ ಸಂಗ್ರಹಿಸುವ ಲೇನ್‌ನಲ್ಲಿ ಗುರುವಾರ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಶುಲ್ಕ ಸಂಗ್ರಹಕ್ಕೆ ಒಂದು ಲೇನ್‌ ಮಾತ್ರ ಮೀಸಲಿರಿಸಲಾಗಿದೆ. ಇದರಿಂದ ಉದ್ದದ ಸರತಿ ಸಾಲಿನಲ್ಲಿ ನಿಂತು ಶುಲ್ಕ ಪಾವತಿಸುವುದು ಅನಿವಾರ್ಯವಾಗಿದೆ.

ಸಿಬ್ಬಂದಿ ನಿಯೋಜನೆ: ವಾಹನ ಚಾಲಕರಿಗೆ ಮಾಹಿತಿ ನೀಡಲು ಟೋಲ್‌ ಪ್ಲಾಜಾದಲ್ಲಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.ಶಿರಾ ತಾಲ್ಲೂಕಿನ ಕರೆಜೀವನಹಳ್ಳಿ ಟೋಲ್‌ ಹಾಗೂ ಕ್ಯಾತ್ಸಂದ್ರ ಟೋಲ್‌ಗಳಲ್ಲಿ ವಾಹನಗಳ ಫಾಸ್ಟ್ಯಾಗ್‌ ಗಮನಿಸಿ ಯಾವ ಲೇನ್‌ನಲ್ಲಿ ಸಾಗಬೇಕು ಎಂಬ ಮಾಹಿತಿಯನ್ನು ಸಿಬ್ಬಂದಿ ನೀಡುತ್ತಿದ್ದಾರೆ. ಇದರಿಂದ ಸ್ವಲ್ಪ ಮಟ್ಟಿಗೆ ಗೊಂದಲ ತಪ್ಪಿಸಲಾಗುತ್ತಿದೆ.

‘ಆದರೂ ಫಾಸ್ಟ್ಯಾಗ್‌ ಅಳವಡಿಸಿಕೊಳ್ಳದ ಕೆಲವೊಬ್ಬರು ಶುಲ್ಕ ಪಾವತಿಯ ಮಾರ್ಗದಲ್ಲಿ ಉದ್ದನೆ ಸಾಲು ನೋಡಿ ‘ಫಾಸ್ಟ್ಯಾಗ್‌’ ಮಾರ್ಗದಲ್ಲೇ ಸಾಗುತ್ತಾರೆ. ಅಂತವರಿಗೆ ದುಪ್ಪಟ್ಟು ಶುಲ್ಕ ವಿಧಿಸುತ್ತೇವೆ’ ಎನ್ನುವರು ಕರೆಜೀವನಹಳ್ಳಿ ಟೋಲ್‌ ರಕ್ಷಣಾ ಅಧಿಕಾರಿ ಶಿವಲಿಂಗಯ್ಯ.

ಬಗೆಹರಿಯದ ಗೊಂದಲ: ‘ಫಾಸ್ಟ್ಯಾಗ್‌’ ಅಳವಡಿಕೆಗೆ ಸಂಬಂಧಿಸಿದಂತೆ ಉಂಟಾಗಿರುವ ಗೊಂದಲ ಇನ್ನೂ ಬಗೆಹರಿದಿಲ್ಲ. ಈ ಸೌಲಭ್ಯ ಹೊಂದುವುದು ಹೇಗೆ ಎಂಬ ಮಾಹಿತಿ ಬಹುತೇಕ ವಾಹನ ಸವಾರರಿಗೆ ಮನವರಿಕೆಯಾಗಿಲ್ಲ. ಇದರಿಂದ ಟೋಲ್‌ ಪ್ಲಾಜಾದಲ್ಲಿ ವಾಹನ ಚಾಲಕರ ಅಸಹನೆ ವ್ಯಕ್ತವಾಗುತ್ತಿದೆ. ಟೋಲ್‌ ಸಿಬ್ಬಂದಿಯ ಜೊತೆ ವಾಗ್ವಾದ ನಡೆಯುತ್ತಿದೆ.

ಕಾರಿಗೆ ‘ಫಾಸ್ಟ್ಯಾಗ್‌’ ಅಳವಡಿಸಲು ₹ 200 ಪಾವತಿಸಬೇಕಿದೆ. ಇದರಲ್ಲಿ ₹ 100 ಭದ್ರತಾ ಠೇವಣಿ ಹಾಗೂ ₹ 100 ಖಾತೆಯಲ್ಲಿ ಉಳಿಯುತ್ತದೆ. ಸಣ್ಣ ಸರಕು ಸಾಗಣೆ ವಾಹನ, ಲಾರಿ ಸೇರಿ ಹಲವು ವಾಹನಗಳಿಗೆ ಭದ್ರತಾ ಠೇವಣಿಯ ಮಾನದಂಡ ಬದಲಾಗುತ್ತದೆ. ಖಾತೆಗೆ ಮತ್ತೆ ಹಣ ತುಂಬುವ ವಿಚಾರದಲ್ಲಿಯೂ ಗೊಂದಲಗಳಿವೆ. ನೆಟ್‌ ಬ್ಯಾಂಕಿಂಗ್‌, ಡೆಬಿಟ್‌ ಕಾರ್ಡ್‌, ಗೂಗಲ್‌ ಪೇ ಮೂಲಕ ಹಣ ಪಾವತಿಸಲು ಬಹುತೇಕ ಚಾಲಕರಿಗೆ ಸಾಧ್ಯವಾಗುತ್ತಿಲ್ಲ.

ಮೂರು ಬಾರಿ ಅವಧಿ ವಿಸ್ತರಣೆ: ಟೋಲ್‌ ಪ್ಲಾಜಾಗಳಲ್ಲಿ ವಾಹನ ದಟ್ಟಣೆ ನಿಯಂತ್ರಿಸುವ ಹಾಗೂ ನಗದು ರಹಿತ ವಹಿವಾಟು ಉತ್ತೇಜಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ‘ಫಾಸ್ಟ್ಯಾಗ್‌’ ಕಡ್ಡಾಯಗೊಳಿಸಿದೆ. ‘ಫಾಸ್ಟ್ಯಾಗ್‌’ ಅಳವಡಿಕೆಗೆ ಡಿ.1ರವರೆಗೆ ಇದ್ದ ಅವಧಿಯನ್ನು ಡಿ.15, ಬಳಿಕ ಡಿ. 31 ಹಾಗೂ ಜ.15ರವರೆಗೆ ಹೀಗೆ ಮೂರು ಬಾರಿ ವಿಸ್ತರಿಸಲಾಗಿತ್ತು. ಹೀಗಿದ್ದರೂ ನಗರದ ಶೇ 50ರಷ್ಟು ವಾಹನಗಳು ಮಾತ್ರ ಫಾಸ್ಟ್ಯಾಗ್‌ ಅಳವಡಿಸಿಕೊಂಡಿವೆ.

ಟೋಲ್‌ ಸಿಬ್ಬಂದಿ ದೂಷಣೆ ಸರಿಯಲ್ಲ

ನಮ್ಮ ಕರ್ತವ್ಯ ನಾವು ನಿರ್ವಹಿಸುತ್ತಿದ್ದೇವೆ. ಜನರಿಂದ ಸಮಸ್ಯೆ ಆಗುತ್ತಿದೆ ಅಷ್ಟೆ. ನಿಯಮದಂತೆ ಎಲ್ಲರೂ ಫಾಸ್ಟ್ಯಾಗ್‌ ಅಳವಡಿಸಿಕೊಂಡರೆ ಗೊಂದಲ ಬಗೆಹರಿಯಲಿದೆ. ಆದ್ದರಿಂದ ಸಾರ್ವಜನಿಕರೇ ಜಾಗೃತರಾಗಬೇಕು. ಫಾಸ್ಟ್ಯಾಗ್‌ ಹೊಂದಿಲ್ಲದ ವಾಹನಗಳು ಫಾಸ್ಟ್ಯಾಗ್‌ ಮಾರ್ಗದಲ್ಲಿ ಬಂದರೆ ಸ್ವಯಂಚಾಲಿತವಾಗಿ ಆ ವಾಹನಕ್ಕೆ ದುಪ್ಪಟ್ಟು ದರದ ರಶೀದಿ ಬರುತ್ತದೆ. ಆ ರೀತಿ ಈಗಾಗಲೇ ಸಿಸ್ಟಮ್‌ಗಳಲ್ಲಿ ಅಪ್‌ಡೇಟ್‌ ಮಾಡಲಾಗಿದೆ. ಚಾಲಕರು ನಮ್ಮನ್ನು ದೂಷಿಸಿದರೆ ಪ್ರಯೋಜನವಿಲ್ಲ ಎನ್ನುತ್ತಾರೆ ಕ್ಯಾತಸಂದ್ರ ಟೋಲ್ ಉಸ್ತುವಾರಿಮಲ್ಲಿಕಾರ್ಜುನ್.

ವಾಹನದ ಚಿತ್ರ ನೀಡುವುದು ಕಡ್ಡಾಯ

‘ಫಾಸ್ಟ್ಯಾಗ್‌’ ಅಳವಡಿಕೆಯಲ್ಲಿ ಉಂಟಾಗುತ್ತಿದ್ದ ವಂಚನೆಗೆ ಕಡಿವಾಣ ಹಾಕುವ ಉದ್ದೇಶದಿಂದ ವಾಹನದ ಚಿತ್ರವನ್ನು ಅಪ್ಲೋಡ್‌ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ.ಆಧಾರ್‌ ಕಾರ್ಡ್‌, ಆರ್‌ಸಿ, ಡ್ರೈವಿಂಗ್‌ ಲೈಸೆನ್ಸ್‌ ದಾಖಲೆಗಳೊಂದಿಗೆ ವಾಹನದ ಚಿತ್ರವನ್ನು ಈಗ ಕಡ್ಡಾಯವಾಗಿ ಒದಗಿಸಬೇಕಿದೆ. ಕಾರು, ಸಣ್ಣ ಸರಕು ಸಾಗಣೆ ವಾಹನ, ಟ್ರಕ್‌, ಲಾರಿ ಸೇರಿ ಹಲವು ವಾಹನಗಳಿಗೆ ಪ್ರತ್ಯೇಕ ಭದ್ರತಾ ಠೇವಣಿ ಹಾಗೂ ಶುಲ್ಕವಿದೆ.

ಫಾಸ್ಟ್ಯಾಗ್‌ನಲ್ಲಷ್ಟೇ ಶುಲ್ಕ ವಿನಾಯಿತಿ

ಈ ಮೊದಲು 24 ಗಂಟೆ ಒಳಗೆ ವಾಪಸ್‌ ಬರುವ ವಾಹನಗಳಿಗೆ ಟೋಲ್‌ಗಳಲ್ಲಿ ಶುಲ್ಕ ವಿನಾತಿಯಿ ನೀಡಲಾಗುತ್ತಿತ್ತು. ಆದರೆ, ಈ ವಿನಾಯಿತಿ ಇನ್ನುಮುಂದೆ ಫಾಸ್ಟ್ಯಾಗ್‌ ಅಳವಡಿಸಿಕೊಂಡ ವಾಹನಗಳಿಗೆ ಮಾತ್ರ ಅನ್ವಯವಾಗಲಿದೆ. ಈ ಕುರಿತು ಎನ್‌ಎಚ್‌ಎಐ ಜ. 15ರಂದು ಅಧಿಸೂಚನೆ ಹೊರಡಿಸಿದ್ದು, ಸ್ಥಳೀಯವಾಗಿ ಸಂಚರಿಸುವ ವಾಹನಗಳಿಗೂ ಇದು ಅನ್ವಯವಾಗಲಿದೆ ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.