ADVERTISEMENT

ದೆಹಲಿಯ ದರ್ಗಾ ಸಭೆಯಲ್ಲಿ ಭಾಗವಹಿಸಿದ್ದವರಿಗೆ ಕೋವಿಡ್‌: ತುಮಕೂರು ಜನರಲ್ಲೂ ತಲ್ಲಣ

ದೆಹಲಿಯ ನಿಜಾಮುದ್ದೀನ್ ಜಮಾತ್ ಮಸೀದಿಯಲ್ಲಿ ಮಾ.10ರಂದು ನಡೆದ ಧಾರ್ಮಿಕ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2020, 11:28 IST
Last Updated 31 ಮಾರ್ಚ್ 2020, 11:28 IST
   

ತುಮಕೂರು: ದೆಹಲಿಯ ನಿಜಾಮುದ್ದೀನ್ ಜಮಾತ್ ಮಸೀದಿಯಲ್ಲಿ ಮಾ.10ರಂದು ನಡೆದ ಧಾರ್ಮಿಕ ಕಾರ್ಯಕ್ರಮ ಈಗ ಜಿಲ್ಲೆಯ ಜನರಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಶಿರಾದ 62 ವರ್ಷದ ವ್ಯಕ್ತಿ ಈಗಾಗಲೇ ಕೋವಿಡ್ 19 ರೋಗದಿಂದ ಮೃತಪಟ್ಟಿದ್ದಾರೆ. ಅವರ 13 ವರ್ಷದ ಪುತ್ರನಿಗೂ ಸೋಂಕು ತಗುಲಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ತುಮಕೂರು ನಗರದಿಂದಲೇ 10 ಮಂದಿ ಹಾಗೂ ಮೃತವ್ಯಕ್ತಿ ಸೇರಿದಂತೆ ಜಿಲ್ಲೆಯಿಂದ 13 ಮಂದಿ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು.

ಸಮ್ಮೇಳನದಲ್ಲಿ ಪಾಲ್ಗೊಂಡಿದ್ದ ಉಳಿದವರನ್ನು ಈಗಾಗಲೇ ಜಿಲ್ಲಾ ಆಸ್ಪತ್ರೆಯ ನಿಗಾ ಘಟಕದಲ್ಲಿ ಇರಿಸಲಾಗಿದೆ. ಅವರ ಗಂಟಲು ದ್ರವ, ರಕ್ತ ಮತ್ತು ಕಫದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ.

ADVERTISEMENT

ಸಮ್ಮೇಳನದಲ್ಲಿ ಪಾಲ್ಗೊಂಡು ತಮ್ಮ ಊರುಗಳಿಗೆ ಮರಳಿರುವ ತೆಲಂಗಾಣ, ಆಂಧ್ರಪ್ರದೇಶ, ಜಮ್ಮುಕಾಶ್ಮೀರ ಹೀಗೆ ನಾನಾ ಕಡೆಗಳ ಜನರಿಂದ ಅಲ್ಲಿ ಸೋಂಕು ಹರಡಿದೆ. ಈ ಸುದ್ದಿ ಜಿಲ್ಲೆಯಲ್ಲಿಯೂ ಸಂಚಲನಕ್ಕೆ ಕಾರಣವಾಗಿದೆ.

‘ದೆಹಲಿಯ ನಿಜಾಮುದ್ದೀನ್ ಜಮಾತ್ ಮಸೀದಿಯ ಕಾರ್ಯಕ್ರಮದಲ್ಲಿ ಕರ್ನಾಟಕದಿಂದ ಸುಮಾರು 45 ಮಂದಿ ಭಾಗವಹಿಸಿದ್ದರು ಎಂಬ ಮಾಹಿತಿಯಿದೆ. ಶಿರಾದಲ್ಲಿ ಮೃತಪಟ್ಟ ವ್ಯಕ್ತಿಯು ಇವರಲ್ಲೊಬ್ಬರಾಗಿದ್ದರು. ಪ್ರಾರ್ಥನೆಯಲ್ಲಿ ಭಾಗವಹಿಸಿದವರಿಗೆಲ್ಲಾ ಸೋಂಕು ಹರಡಿರುವ ಸಾಧ್ಯತೆಗಳನ್ನು ತಳ್ಳಿಹಾಕಲಾಗುವುದಿಲ್ಲ. ಹಾಗಾಗಿ ಇವರನ್ನು ಪತ್ತೆ ಮಾಡಿ, ನಿಗಾದಲ್ಲಿಡುವ ಕಾಯದಲ್ಲಿ ತೊಡಗಿಸಿಕೊಳ್ಳಲಾಗಿದೆ. ಇವರಲ್ಲಿ ಈಗಾಗಲೇ 13 ವ್ಯಕ್ತಿಗಳನ್ನು ಪತ್ತೆಹಚ್ಚಿ ಪ್ರತ್ಯೇಕಿಸಲ್ಪಟ್ಟ ಕೇಂದ್ರದಲ್ಲಿ ನಿಗಾವಹಿಸಲಾಗಿದೆ’ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಸಹ ಟ್ವೀಟ್ ಮಾಡಿದ್ದಾರೆ.

ವಿವಿಧ ರಾಜ್ಯಗಳಷ್ಟೇ ಅಲ್ಲ ದುಬೈ, ಸೌದಿ ಅರೇಬಿಯಾ, ಇಂಡೋನೇಷ್ಯಾ, ಆಸ್ಟ್ರೇಲಿಯಾ ಸೇರಿದಂತೆ ನಾನಾ ದೇಶಗಳ ಮುಸ್ಲಿಂ ಧರ್ಮ ಗುರುಗಳು, ಧರ್ಮಾಭಿಮಾನಿಗಳು ಪಾಲ್ಗೊಂಡಿದ್ದರು. ಮೂಲಗಳ ಪ್ರಕಾರ 8,000 ಮಂದಿ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು. ಮಸೀದಿಯಲ್ಲಿಯೇ ಇತ್ತೀಚಿನವರೆಗೆ 2,000 ಜನರು ಇದ್ದರು ಎನ್ನಲಾಗುತ್ತಿದೆ.

ಮೊದಲ ಸಾವು ಸಂಭವಿಸಿದಾಗಲೇ ಜಿಲ್ಲೆಯ ಜನರಲ್ಲಿ ತಲ್ಲಣ ಉಂಟಾಗಿತ್ತು. ಮತ್ತೆ ಮೃತವ್ಯಕ್ತಿಯ ಮಗನಲ್ಲಿ ಸೋಂಕು ಪತ್ತೆಯಾದಾಗ ವಿಶೇಷವಾಗಿ ಶಿರಾ ನಗರದ ಜನರು ಮತ್ತಷ್ಟು ಕಂಗೆಟ್ಟಿದ್ದರು. ಈಗ ಸಮ್ಮೇಳನದಲ್ಲಿ ಭಾಗಿಯಾಗಿರುವವ ಹೆಚ್ಚಿನವರಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿರುವುದು ತುಮಕೂರು ನಗರದ ಜನರಲ್ಲಿಯೂ ಹೆಚ್ಚಿನ ಭಯಕ್ಕೆ ಕಾರಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.