ADVERTISEMENT

ಬಿಜೆಪಿಗೆ ಸೋಲಿನ ಭೀತಿ: ಸಿಪಿಐ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2024, 4:59 IST
Last Updated 2 ಏಪ್ರಿಲ್ 2024, 4:59 IST
ಬಿ.ಅಮ್ಜದ್‌
ಬಿ.ಅಮ್ಜದ್‌   

ತುಮಕೂರು: ಕೇಂದ್ರ ಸರ್ಕಾರವು ವಿರೋಧ ಪಕ್ಷಗಳನ್ನು ಕುಣಿಕೆಗೆ ಸಿಲುಕಿಸಲು ತನ್ನ ಆಡಳಿತ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಭಾರತ ಕಮ್ಯುನಿಸ್ಟ್‌ ಪಕ್ಷದ ರಾಜ್ಯ ಸಹ ಕಾರ್ಯದರ್ಶಿ ಬಿ.ಅಮ್ಜದ್‌ ಇಲ್ಲಿ ಸೋಮವಾರ ಆರೋಪಿಸಿದರು.

ವಿರೋಧ ಪಕ್ಷದ ನಾಯಕರಿಗೆ ಕಿರುಕುಳ ಕೊಡುವ ದುಷ್ಟ ರಾಜಕೀಯಕ್ಕೆ ಬಿಜೆಪಿ ಕೈ ಹಾಕಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರನ್ನು ಅಕ್ರಮವಾಗಿ ಬಂಧಿಸಲಾಗಿದೆ. ಕೇಂದ್ರದ ವಿರುದ್ಧ ಮಾತನಾಡುವ ಎಲ್ಲರನ್ನು ಹತ್ತಿಕ್ಕಲಾಗುತ್ತಿದೆ. ಇಂತಹ ಸಂವಿಧಾನ ವಿರೋಧಿ ಪಕ್ಷವನ್ನು ಆಡಳಿತದಿಂದ ದೂರ ಇರಿಸಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.

ಕೇಂದ್ರ ಸರ್ಕಾರಕ್ಕೆ ಪ್ರಜಾಪ್ರಭುತ್ವ ವ್ಯವಸ್ಥೆಯ ಬಗ್ಗೆ ಸಾಸಿವೆ ಕಾಳಿನಷ್ಟು ನಂಬಿಕೆ, ಬದ್ಧತೆ ಇಲ್ಲ. ಸಂಸತ್ತಿನಲ್ಲಿ ಸರ್ಕಾರದ ವೈಫಲ್ಯ ಎತ್ತಿ ಹಿಡಿಯುವುದು ವಿರೋಧ ಪಕ್ಷಗಳ ಕರ್ತವ್ಯ, ಸಾಂವಿಧಾನಿಕ ಹೊಣೆ. ಸಂಸತ್ತಿನಲ್ಲಿ ಪ್ರಶ್ನೆ ಮಾಡಿದ ಸಂಸದರನ್ನು ಅಮಾನತುಗೊಳಿಸಿ, ತಮಗೆ ಬೇಕಾದ ಮಸೂದೆಗಳನ್ನು ಮಂಡಿಸಿದೆ. ವಿರೋಧ ಪಕ್ಷಗಳ ಮಹತ್ವವನ್ನೇ ಕಳಚಿದೆ ಎಂದು ದೂರಿದರು.

ADVERTISEMENT

ಭ್ರಷ್ಟರು, ಕಳ್ಳರು, ವಾಮ ಮಾರ್ಗದಲ್ಲಿ ದುಡ್ಡು ಮಾಡಿದ ರಾಜಕಾರಣಿಗಳನ್ನು ಬಿಜೆಪಿ ನಾಯಕರು ತಮ್ಮ ಪಕ್ಷಕ್ಕೆ ಮುಕ್ತ ಮನಸ್ಸಿನಿಂದ ಬರ ಮಾಡಿಕೊಳ್ಳುತ್ತಿದ್ದಾರೆ. ಈಗಾಗಲೇ ಬಿಜೆಪಿಗೆ ಆಂತರಿಕವಾಗಿ ಸೋಲಿನ ಭೀತಿ ಕಾಣುತ್ತಿದೆ. ಇದಕ್ಕಾಗಿ ಇಲ್ಲ ಸಲ್ಲದ ತಂತ್ರ ಹೆಣೆದು ವಿರೋಧ ಪಕ್ಷಗಳನ್ನು ಮಣಿಸುವ ಕೆಲಸ ಮಾಡುತ್ತಿದೆ ಎಂದರು.

ಸಿಪಿಐ ಜಿಲ್ಲಾ ಕಾರ್ಯದರ್ಶಿ ಗಿರೀಶ್‌, ‘ಈ ಹಿಂದೆ ಜಿಲ್ಲೆಗೆ 4 ಸಲ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಎಚ್‌ಎಎಲ್‌, ಫುಡ್‌ಪಾರ್ಕ್‌ ಉದ್ಘಾಟನೆ ಮಾಡಿದ್ದರು. ಜಿಲ್ಲೆಯಲ್ಲಿ ಸಾವಿರಾರು ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಹೇಳಿದ್ದರು. ಆದರೆ, ಇದುವರೆಗೆ ಜಿಲ್ಲೆಯ ಯಾರೊಬ್ಬರಿಗೂ ಉದ್ಯೋಗ ಸಿಕ್ಕಿಲ್ಲ. ಮೋದಿ ಸುಳ್ಳು ಹೇಳಿ ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಿಪಿಐ ಪದಾಧಿಕಾರಿಗಳಾದ ಕಂಬೇಗೌಡ, ಆರ್‌.ಗೋವಿಂದರಾಜು, ಅಶ್ವತ್ಥನಾರಾಯಣ, ರವಿಪ್ರಸಾದ್‌, ದೊಡ್ಡತಿಮ್ಮಯ್ಯ ಹಾಜರಿದ್ದರು.

‘ಬಿಜೆಪಿ ಸೋಲಿಸಿ ದೇಶ ಉಳಿಸಿ’

ಸಮಾವೇಶ ನಾಳೆ ಸಿಪಿಐ ರಾಜಕೀಯ ಸಮಾವೇಶವು ಏ. 3ರಂದು ನಗರದ ಕನ್ನಡ ಭವನದಲ್ಲಿ ನಡೆಯಲಿದೆ. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಬಿಜಿಎಸ್‌ ವೃತ್ತದಿಂದ ಕನ್ನಡ ಭವನದ ವರೆಗೆ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ‘ಸಂವಿಧಾನ ಉಳಿಸಲು ಪ್ರಜಾಪ್ರಭುತ್ವ ರಕ್ಷಿಸಲು ಭ್ರಷ್ಟಾಚಾರಿಗಳನ್ನು ಶಿಕ್ಷಿಸಲು ಬಡ ರೈತ ಕಾರ್ಮಿಕ ವಿರೋಧಿ ಬಿಜೆಪಿ ಸೋಲಬೇಕಿದೆ. ಜನರನ್ನು ಜಾಗೃತಗೊಳಿಸಲು ‘ಬಿಜೆಪಿ ಸೋಲಿಸಿ ದೇಶ ಉಳಿಸಿ’ ರಾಜಕೀಯ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಬಿಜೆಪಿ ದುರಾಡಳಿತದ ಬಗ್ಗೆ ಜನರಿಗೆ ತಿಳಿಸುವ ಕೆಲಸವಾಗುತ್ತದೆ’ ಎಂದು ಗಿರೀಶ್‌ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.