ಗುಬ್ಬಿ: ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ಸ್ಥಳಕ್ಕೆ ಭೇಟಿನೀಡಿ ಪರಿಶೀಲನೆ ನಡೆಸುವುದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ಇದು ಕೇವಲ ಕಣ್ಣೊರೆಸುವ ತಂತ್ರ. ಕಾಮಗಾರಿಯನ್ನು ಸಂಪೂರ್ಣವಾಗಿ ರದ್ದುಪಡಿಸುವವರೆಗೆ ಹೋರಾಟ ನಡೆಸುತ್ತೇವೆ ಎಂದು ಹೇಮಾವತಿ ಲಿಂಕ್ ಕೆನಾಲ್ ವಿರೋಧಿ ಹೋರಾಟಗಾರರು ಸೋಮವಾರ ಗುಬ್ಬಿ ಪಟ್ಟಣದಲ್ಲಿ ಸಭೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರ ನೇಮಿಸಿರುವ ತಜ್ಞರ ಸಮಿತಿಯು ಅಧಿಕಾರದಲ್ಲಿರುವ ಸರ್ಕಾರದ ಪರವಾಗಿಯೇ ಅಭಿಪ್ರಾಯ ತಿಳಿಸುವುದರಿಂದ ತಾಲ್ಲೂಕಿಗೆ ಮತ್ತಷ್ಟು ಅನ್ಯಾಯವಾಗುವುದು. ಕುಣಿಗಲ್ ಭಾಗಕ್ಕೆ ಪ್ರಸ್ತುತ ಇರುವ ನಾಲೆಯನ್ನು ಅಗಲೀಕರಣಗೊಳಿಸಿ ನೀರನ್ನು ತೆಗೆದುಕೊಂಡು ಹೋಗಲು ತಕರಾರು ಇಲ್ಲ. ಜಲಸಂಪನ್ಮೂಲ ಸಚಿವರು ಇಬ್ಬಗೆಯ ನೀತಿ ಅನುಸರಿಸುವುದನ್ನು ಬಿಟ್ಟು ಎಲ್ಲರ ಹಿತ ಕಾಪಾಡುವ ನಿಟ್ಟಿನಲ್ಲಿ ಕಾಮಗಾರಿ ರದ್ದುಪಡಿಸಿ ಸಾಮಾಜಿಕ ನ್ಯಾಯ ಒದಗಿಸಲು ಬದ್ಧರಾಗಲಿ ಎಂದು ಒತ್ತಾಯಿಸಿದರು.
ಮುಖಂಡ ಎಸ್.ಡಿ ದಿಲೀಪ್ ಕುಮಾರ್ ಮಾತನಾಡಿ, ‘ಗುಬ್ಬಿ ಶಾಸಕ ಎಸ್.ಆರ್ ಶ್ರೀನಿವಾಸ್ ಜಲಸಂಪನ್ಮೂಲ ಸಚಿವರು ಕರೆದಿದ್ದ ಸಭೆಯಲ್ಲಿ ಭಾಗಿಯಾಗದೆ ಅಮೆರಿಕಕ್ಕೆ ತೆರಳಿ ಮೋಜು ಮಸ್ತಿಯಲ್ಲಿ ತೊಡಗಿರುವುದು ದುರಾದೃಷ್ಟಕರ. ಶಾಸಕರಿಗೆ ತಾಲ್ಲೂಕಿನ ಹಿತಕ್ಕಿಂತ ಸ್ವ ಹಿತಾಸಕ್ತಿಯೇ ಮುಖ್ಯವಾಗಿದೆ’ ಎಂದು ಕಿಡಿಕಾರಿದರು.
ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎ.ಗೋವಿಂದರಾಜು ಮಾತನಾಡಿ, ‘ಜಲ ಸಂಪನ್ಮೂಲ ಸಚಿವರು ಕರೆದಿದ್ದ ಸಭೆಯಲ್ಲಿ ರೈತ ನಾಯಕರನ್ನೇ ಕಡೆಗಣಿಸಲಾಗಿದೆ. ರೈತರನ್ನು ಹೊರಗಿಟ್ಟು ಕೇವಲ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಭೆ ನಡೆಸುವುದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ಹೇಮಾವತಿ ನಾಲಾ ವ್ಯಾಪ್ತಿಯಲ್ಲಿ ಬರುವ ಎಲ್ಲಾ ತಾಲ್ಲೂಕುಗಳಲ್ಲಿ ಸಭೆ ನಡೆಸಿ ಜನರಲ್ಲಿ ಅರಿವು ಮೂಡಿಸಿ ಹೋರಾಟದ ತೀವ್ರತೆಯನ್ನು ಹೆಚ್ಚಿಸುತ್ತೇವೆ’ ಎಂದು ತಿಳಿಸಿದರು.
ಬಿ.ಎಸ್ ನಾಗರಾಜು ಮಾತನಾಡಿ, ‘ಲಿಂಕ್ ಕೆನಾಲ್ ಕಾಮಗಾರಿಯನ್ನು ವಿರೋಧಿಸುತ್ತೇನೆ ಎಂದು ಹೇಳುವ ಶಾಸಕರು ಬಹುಮುಖ್ಯ ಸಭೆಯಲ್ಲಿ ಭಾಗಿಯಾಗದೆ ಕ್ಷೇತ್ರದ ಜನತೆಗೆ ದ್ರೋಹ ಎಸಗಿದ್ದಾರೆ. ಈಗಲಾದರೂ ಶಾಸಕರು ಎಚ್ಚೆತ್ತು ಹೋರಾಟಕ್ಕೆ ಅಣಿಯಾಗಲಿ. ನಾವು ಜೊತೆಗೂಡುತ್ತೇವೆ’ ಎಂದು ಹೇಳಿದರು.
ಕಳ್ಳಿಪಾಳ್ಯ ಲೋಕೇಶ್ ಮಾತನಾಡಿ, ‘ಆಡಳಿತ ಪಕ್ಷದ ಯಾವುದೇ ಶಾಸಕರು ಲಿಂಕ್ ಕೆನಾಲ್ ಕಾಮಗಾರಿಯ ಬಗ್ಗೆ ತುಟಿಬಿಚ್ಚದೆ ಇರುವುದು ದುರಾದೃಷ್ಟಕರ. ಈ ಯೋಜನೆ ಜಿಲ್ಲೆಯ ಹಿತಾಸಕ್ತಿಗೆ ವಿರುದ್ಧವಾಗಿರುವುದರಿಂದ ಎಲ್ಲರೂ ಧ್ವನಿಎತ್ತಿ ಹೋರಾಟ ನಡೆಸಬೇಕಿದೆ’ ಎಂದು ತಿಳಿಸಿದರು.
ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ವೆಂಕಟೇಗೌಡ, ಕಾರ್ಯದರ್ಶಿ ಲೋಕೇಶ್, ರೈತ ಯುವ ಘಟಕದ ಅಧ್ಯಕ್ಷ ಶಿವಕುಮಾರ್ ,ಎಐಸಿಯುಟಿಯ ಅನಸೂಯಮ್ಮ, ಸರೋಜಮ್ಮ, ಯೋಗಾನಂದ ಕುಮಾರ್, ಎಚ್.ಟಿ ಭೈರಪ್ಪ, ಸುರೇಶ್ ಗೌಡ, ಶಂಕರ್ ಕುಮಾರ್, ಬ್ಯಾಟರಂಗೇಗೌಡ, ಶಿವಲಿಂಗೇಗೌಡ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.