ADVERTISEMENT

ಅಂತೂ ಬಂತು ‘ಸಖಿ’ಗೆ ಅನುದಾನ

ತುಮಕೂರಿನಲ್ಲಿ 2016ರಲ್ಲಿ ನಡೆದ ‘ವಿಕಾಸ ಪರ್ವ’ ಸಮಾವೇಶದಲ್ಲಿ ಸಚಿವೆ ಮೇನಕಾ ಗಾಂಧಿ ಭರವಸೆ

ಡಿ.ಎಂ.ಕುರ್ಕೆ ಪ್ರಶಾಂತ
Published 8 ಜೂನ್ 2020, 6:02 IST
Last Updated 8 ಜೂನ್ 2020, 6:02 IST

ತುಮಕೂರು: ನಿರ್ಭಯ ನಿಧಿ ಅಡಿಯಲ್ಲಿ ಪ್ರತಿ ಜಿಲ್ಲೆಯಲ್ಲಿ ಕೇಂದ್ರ ಸರ್ಕಾರ ಆರಂಭಿಸಿರುವ ‘ಸಖಿ’ ಕಟ್ಟಡ ನಿರ್ಮಾಣಕ್ಕೆ ಜಿಲ್ಲೆಗೆ ಅನುದಾನ ಬಿಡುಗಡೆ ಆಗಿದೆ. ಈಗಾಗಲೇ ಕೆಲವು ಜಿಲ್ಲೆಗಳಲ್ಲಿ ‘ಸಖಿ’ ಸ್ವಂತ ಕಟ್ಟಡದೊಂದಿಗೆ ಆರಂಭವಾಗಿದೆ.

ಜಿಲ್ಲೆಯಲ್ಲಿ ‘ಸಖಿ’ ಸ್ಥಾಪಿಸುವ ಸಂಬಂಧ ಜಾಗ ಗುರುತಿಸಿಕೊಡುವಂತೆ 2017ರ ಸೆಪ್ಟೆಂಬರ್‌ನಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಕೇಂದ್ರ ಸರ್ಕಾರವು ಜಿಲ್ಲಾಧಿಕಾರಿ ಮೂಲಕ ಸೂಚಿಸಿತ್ತು. ವೈದ್ಯಕೀಯ ಸೌಲಭ್ಯ ತುರ್ತಾಗಿ ದೊರೆಯುವ ಸ್ಥಳದಿಂದ 2 ಕಿ.ಮೀ ದೂರದಲ್ಲಿ ಸಖಿ ಕೇಂದ್ರ ಇರಬೇಕು ಎನ್ನುವ ಆದೇಶದ ಹಿನ್ನೆಲೆಯಲ್ಲಿ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಕಟ್ಟಡ ನಿರ್ಮಾಣಕ್ಕೆ ನಿರ್ಧರಿಸಲಾಗಿತ್ತು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ತುಮಕೂರು ಸಾರ್ವಜನಿಕ ಆಸ್ಪತ್ರೆಯ ಮೊದಲನೇ ಮಹಡಿಯಲ್ಲಿ ‘ಸಖಿ’ ಕೇಂದ್ರ ಆರಂಭಿಸಿತ್ತು. ‘ಕೇಂದ್ರದ ಕಟ್ಟಡವು ತುಂಬಾ ಕಿರಿದಾಗಿದ್ದು, ಸಮಾಲೋಚನೆಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಬೇಕು’ ಎಂದು ‘ಸಖಿ’ ಪರಿಶೀಲನೆ ವೇಳೆ ಜಿಲ್ಲಾಧಿಕಾರಿ ಸೂಚಿಸಿದರು.

ADVERTISEMENT

ಕಟ್ಟಡ ನಿರ್ಮಿಸಲು ₹37 ಲಕ್ಷ ಅನುದಾನ ಕೋರಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪ್ರಸ್ತಾವ ಸಲ್ಲಿಸಿತ್ತು. ಈಗ ₹ 36 ಲಕ್ಷ ಬಿಡುಗಡೆಯಾಗಿದೆ. ಜಿಲ್ಲಾ ಆಸ್ಪತ್ರೆಯ ಎರಡನೇ ಮಹಡಿಯಲ್ಲಿ ಕಟ್ಟಡ ನಿರ್ಮಿಸಲು ಇಲಾಖೆ ಮುಂದಾಗಿದೆ.

ಸಚಿವರ ಭರವಸೆ: ‘ಜಿಲ್ಲಾ ಕೇಂದ್ರದಲ್ಲಿ 300 ಚದರ ಅಡಿ ನಿವೇಶನ ಕಲ್ಪಿಸಿದರೆ ‘ಸಖಿ ಕೇಂದ್ರ’ ಆರಂಭಿಸಲಾಗುವುದು. ಮೂರು ತಿಂಗಳಲ್ಲಿಯೇ ಕೇಂದ್ರಕ್ಕೆ ಚಾಲನೆ ನೀಡಲಾಗುವುದು’ ಎಂದು ಕೇಂದ್ರ ಸರ್ಕಾರಕ್ಕೆ 2 ವರ್ಷ ತುಂಬಿದ ಪ್ರಯುಕ್ತ (ನರೇಂದ್ರ ಮೋದಿ ಅವರ ಮೊದಲ ಅವಧಿ) 2016ರಲ್ಲಿ ಆಯೋಜಿಸಿದ್ದ ‘ವಿಕಾಸ ಪರ್ವ’ ಸಾಧನಾ ಸಮಾವೇಶ ಉದ್ಘಾಟಿಸಿದ್ದ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮೇನಕಾ ಗಾಂಧಿ ಭರವಸೆ ನೀಡಿದ್ದರು. ಒಂದು ವರ್ಷದ ನಂತರ ಜಾಗ ತೋರಿಸುವಂತೆ ಪತ್ರ ಬಂದಿತು. ಮೂರು ವರ್ಷದ ನಂತರ ಹಣ ಬಿಡುಗಡೆಯಾಗಿದೆ.

ದೌರ್ಜನ್ಯಕ್ಕೆ ತುತ್ತಾದ ಮಹಿಳೆಯರು ಮತ್ತು ಮಕ್ಕಳಿಗೆ ‍ನೆರವು ಮತ್ತು ಸಾಂತ್ವನ ನೀಡುವುದು ‘ಸಖಿ’ ಕೆಲಸ. ಈ ಕೇಂದ್ರದಲ್ಲಿ ಹೈಟೆಕ್ ಸೌಲಭ್ಯಗಳು ದೊರೆಯುತ್ತವೆ. ಒಬ್ಬರು ಕೇಂದ್ರ ಆಡಳಿತಾಧಿಕಾರಿ, ಒಬ್ಬರು ಸಮಾಲೋಚಕರು, ಇಬ್ಬರು ಸಮಾಜ ಕಾರ್ಯಕರ್ತರು, ಇಬ್ಬರು ಕಾನೂನು ಸಲಹೆಗಾರರು, ಇಬ್ಬರು ‘ಡಿ’ ದರ್ಜೆ ನೌಕರರು ಇಲ್ಲಿ ಕೆಲಸ ಮಾಡುತ್ತಾರೆ.

ಕೇಂದ್ರ ಸರ್ಕಾರದ ನಿಯಮಗಳ ಪ್ರಕಾರ 300 ಚದರ ಅಡಿಗಳಲ್ಲಿ ಕೇಂದ್ರದ ಕಟ್ಟಡವನ್ನು ನಿರ್ಮಿಸಬೇಕು. ಕಟ್ಟಡದ ತಳ ಮಹಡಿಯಲ್ಲಿ ಆಡಳಿತ ವಿಭಾಗ, ವಿಡಿಯೊ ಕಾನ್ಫರೆನ್ಸ್, ವೈದ್ಯಕೀಯ ನೆರವಿಗೆ ಪ್ರತ್ಯೇಕವಾದ ಕೊಠಡಿಗಳು ಹಾಗೂ ಸಂತ್ರಸ್ತೆಯರು ಉಳಿದುಕೊಳ್ಳಲು ಐದು ಹಾಸಿಗೆ ಸಾಮರ್ಥ್ಯದ ಒಂದು ಕೊಠಡಿ ಇರಬೇಕು. ಎರಡನೇ ಮಹಡಿಯಲ್ಲಿ ಆಡಳಿತ ವಿಭಾಗದವರಿಗೆ ವಸತಿ ವ್ಯವಸ್ಥೆ ಕಲ್ಪಿಸಬೇಕು‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.