ತುಮಕೂರು: ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳ ಬಗ್ಗೆ ಮರು ಚಿಂತನೆ ನಡೆಸುವಂತೆ ಸಚಿವರೇ ಹೇಳುತ್ತಿದ್ದು, ಅಭಿವೃದ್ಧಿ ಕಾರ್ಯಗಳಿಗೆ ಅನುದಾನದ ಕೊರತೆಯನ್ನು ಒಪ್ಪಿಕೊಂಡಿದ್ದಾರೆ ಎಂದು ಗ್ರಾಮಾಂತರ ಶಾಸಕ ಬಿ.ಸುರೇಶ್‌ಗೌಡ ಹೇಳಿದ್ದಾರೆ.
ಗ್ಯಾರಂಟಿ ಯೋಜನೆಗಳ ಬಗ್ಗೆ ಕಾಂಗ್ರೆಸ್‌ನಲ್ಲಿ ದ್ವಂದ್ವ ನಿಲುವು ವ್ಯಕ್ತವಾಗಿದ್ದು, ರಾಜ್ಯ ಆರ್ಥಿಕವಾಗಿ ದಿವಾಳಿ ಅಂಚಿಗೆ ತಲುಪಿರುವುದು ಇದರಿಂದ ಗೊತ್ತಾಗುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಕೆಲಸಗಳ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೇರಿದಂತೆ ಅನೇಕರು ಹೇಳಿದ್ದರು. ಆದರೆ 15 ಬಾರಿ ಬಜೆಟ್ ಮಂಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ವಿಚಾರವನ್ನು ಕಿವಿಯ ಮೇಲೆ ಹಾಕಿಕೊಳ್ಳಲಿಲ್ಲ. ಈಗಲೂ ಅವರು ತಮ್ಮ ಪಕ್ಷದ ಹಿರಿಯ ಸಚಿವರ ಅಭಿಪ್ರಾಯಗಳಿಗೂ ಕಿವಿಗೊಡುತ್ತಿಲ್ಲ. ಇದೆಲ್ಲವನ್ನು ಗಮನಿಸಿದರೆ ರಾಜ್ಯದ ಆರ್ಥಿಕ ಸ್ಥಿತಿ ಸಂಪೂರ್ಣ ಹದಗೆಡುವುದನ್ನು ಕಣ್ಣಾರೆ ಕಾಣಲು ನಿರ್ಧರಿಸಿದಂತೆ ಕಾಣುತ್ತದೆ ಎಂದು ಆರೋಪಿಸಿದ್ದಾರೆ.
ಈ ವಿಚಾರಗಳಲ್ಲಿ ಮರುಚಿಂತನೆ ನಡೆಯಬೇಕಾದ ಅಗತ್ಯವನ್ನು ಸರ್ಕಾರ ಮನಗಾಣಬೇಕಾಗಿದೆ. ಅಭಿವೃದ್ಧಿ ಯೋಜನೆಗಳಿಗೆ ಹಣ ತರಲಾಗದೆ, ಜನರಿಗೆ ಮುಖ ತೋರಿಸದಂತಹ ಸ್ಥಿತಿಯಲ್ಲಿ ಶಾಸಕರು ಇದ್ದಾರೆ. ರಾಜ್ಯದಲ್ಲಿ ಇಂತಹ ದಯನೀಯ ಸ್ಥಿತಿ ಎಂದೂ ಬಂದಿರಲಿಲ್ಲ. ಇದಕ್ಕೆ ನೇರವಾಗಿ ಕಾಂಗ್ರೆಸ್ ಸರ್ಕಾರವೇ ಹೊಣೆ ಎಂದು ಅವರು ದೂರಿದ್ದಾರೆ.
ತುಂಗಭದ್ರಾ ಜಲಾಶಯದಲ್ಲಿ 19ನೇ ಗೇಟ್ ಕುಸಿದಿರುವುದು ನೋಡಿದರೆ ನೀರಾವರಿ ವಿಚಾರದಲ್ಲಿ ಸರ್ಕಾರದ ನಿರ್ಲಕ್ಷ್ಯ ಎದ್ದು ಕಾಣುತ್ತದೆ. ರಾಜ್ಯದ ಎಲ್ಲ ಅಣೆಕಟ್ಟೆಗಳ ಸುರಕ್ಷತೆ ಬಗ್ಗೆ ಉನ್ನತ ಮಟ್ಟದಲ್ಲಿ ತಜ್ಞರಿಂದ ಅಧ್ಯಯನ ನಡೆಸುವಂತೆ ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.