ತುಮಕೂರು: ಸುಮಾರು 2.50 ಲಕ್ಷ ಸೇವಂತಿಗೆ ಹೂವಿನಲ್ಲಿ ಅರಳಿದ ಮಂದಾರಗಿರಿ ಗುರು ಮಂದಿರ, ವಿವಿಧ ಬಗೆಯ ಕಲಾಕೃತಿ, 80ಕ್ಕೂ ಹೆಚ್ಚು ಮಳಿಗೆಗಳು ಈ ಬಾರಿಯ ಫಲಪುಷ್ಪ ಪ್ರದರ್ಶನದಲ್ಲಿ ಗಮನ ಸೆಳೆಯುತ್ತಿವೆ.
ತೋಟಗಾರಿಕೆ ಇಲಾಖೆಯಿಂದ ನಗರದ ಎಸ್.ಎಸ್.ಪುರಂನ ಇಲಾಖೆ ಆವರಣದಲ್ಲಿ ಏರ್ಪಡಿಸಿರುವ ಫಲಪುಷ್ಪ ಪ್ರದರ್ಶನ ಹಲವು ವಿಶೇಷತೆಗಳಿಂದ ಕೂಡಿದೆ. ಕೇವಲ ಸೇವಂತಿಗೆ ಹೂವು ಬಳಸಿ ಮಂದಾರಗಿರಿ ಗುರು ಮಂದಿರ ನಿರ್ಮಿಸಲಾಗಿದೆ. ತೆಂಗಿನ ಗರಿಯಲ್ಲಿ ಬುಟ್ಟಿ, ತೊಟ್ಟಿಲು ಸೇರಿ ಹಲವು ರೀತಿಯ ಕಲಾಕೃತಿ ರಚಿಸಲಾಗಿದೆ.
ಈವರೆಗೆ ಇಸ್ರೊ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಿದ ಎಲ್ಲರ ಚಿತ್ರಗಳು ಕಲ್ಲಂಗಡಿ ಹಣ್ಣಿನಲ್ಲಿ ಕೆತ್ತಲಾಗಿದೆ. ಮಹಾತ್ಮ ಗಾಂಧೀಜಿ, ಅಬ್ದುಲ್ ಕಲಾಂ, ಸ್ವಾಮಿ ವಿವೇಕಾನಂದ ಸೇರಿದಂತೆ ಹಲವು ಮಹನೀಯರು, ಈಚೆಗೆ ನಿಧನರಾದ ಮನಮೋಹನ್ ಸಿಂಗ್, ಎಸ್.ಎಂ.ಕೃಷ್ಣ ಚಿತ್ರಗಳು ಸಹ ಕಲ್ಲಂಗಡಿಯಲ್ಲಿ ಮೂಡಿವೆ.
30 ಕೆ.ಜಿ ಬೂದು ಕುಂಬಳ: ತೋಟಗಾರಿಕೆ ಇಲಾಖೆಯಿಂದ ತೆರೆದಿರುವ ಮಳಿಗೆಯಲ್ಲಿ 30 ಕೆ.ಜಿ ತೂಕದ ಬೂದು ಕುಂಬಳ ಎಲ್ಲರನ್ನು ತನ್ನತ್ತ ಸೆಳೆಯುತ್ತಿದೆ. ಶಿರಾ ತಾಲ್ಲೂಕಿನ ಉಜ್ಜನಕುಂಟೆಯ ಚಿನ್ನಸ್ವಾಮಿ ಅವರು ಬೆಳೆದ ಬೂದು ಕುಂಬಳ ಪ್ರದರ್ಶನಕ್ಕೆ ಇಡಲಾಗಿದೆ. ಕಿರು ಧಾನ್ಯಗಳ ರಾಶಿಯಲ್ಲಿ ಜೋಳ, ರಾಗಿ, ತೊಗರಿ, ಹೆಸರು, ಹಲಸಂದಿ ಇತರೆ ಧಾನ್ಯಗಳೂ ಆಕರ್ಷಿಸುತ್ತಿವೆ.
ಪಶುಪಾಲನಾ ಇಲಾಖೆಯಿಂದ ವಿವಿಧ ತಳಿಯ ಕೋಳಿ, ಕುರಿ, ಮೊಲ, ಹಸುಗಳನ್ನು ಪರಿಚಯಿಸಲಾಗುತ್ತಿದೆ. ಬಂಡೂರ್ ಕುರಿ, ಟರ್ಕಿ, ಗಿನಿಯಾ ಕೋಳಿ, ಪುಂಗನೂರು ರಾಸು, ಮಲೆನಾಡು ಗಿಡ್ಡ ತಳಿಯ ಹಸುವಿನ ವಿಶೇಷತೆ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಲಾಗುತ್ತಿದೆ.
ಡ್ರ್ಯಾಗನ್ ಫ್ರೂಟ್, ನೇರಳೆ, ದಾಳಿಂಬೆ, ಕಾಡು ಗೋಡಂಬಿ, ಸೀಬೆ, ಸಪೋಟ, ಮಾವು ಸೇರಿ ಇತರೆ ಸಸಿಗಳ ಮಾರಾಟಕ್ಕೆ ಅವಕಾಶ ಕಲ್ಪಿಸಿದೆ. ಸ್ವ–ಸಹಾಯ ಸಂಘಗಳ ಮಹಿಳೆಯರು ತಯಾರಿಸಿದ ವಿವಿಧ ಉತ್ಪನ್ನಗಳ ಮಾರಾಟಕ್ಕೆ ಫಲಪುಷ್ಪ ಪ್ರದರ್ಶನ ವೇದಿಕೆಯಾಗಿದೆ. ಶಾಲಾ–ಕಾಲೇಜು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದಾರೆ.
ಮೈ ಮರೆಸುವ ಕೀಟ ಪ್ರಪಂಚ
ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ ತೆರೆದಿರುವ ಮಳಿಗೆಗೆ ಹೋದರೆ ಕೀಟ ಪ್ರಪಂಚ ತೆರೆದುಕೊಳ್ಳುತ್ತದೆ. ವಿವಿಧ ಬಗೆಯ ಪತಂಗ ಜೇನು ಹುಳು ಹಾಗೂ ರೈತರ ಬೆಳೆಗೆ ಅಡ್ಡಿಪಡಿಸುವ ವಿವಿಧ ರೋಗಗಳಿಗೆ ಕಾರಣವಾಗುವ ಕೀಟಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಕೀಟ ಬಾಧೆಯಿಂದ ಬೆಳೆಗಳ ಮೇಲೆ ಆಗುವ ದುಷ್ಪರಿಣಾಮ ಕುರಿತು ರೈತರಿಗೆ ವಿದ್ಯಾರ್ಥಿಗಳು ಅರಿವು ಮೂಡಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.