
ತುಮಕೂರು: ನಿಯಮಬಾಹಿರವಾಗಿ ಬಿಪಿಎಲ್ ಪಡಿತರ ಚೀಟಿ ಪಡೆದುಕೊಂಡವರು ತಾವಾಗಿಯೇ ಎಪಿಎಲ್ ಪಡಿತರ ಚೀಟಿಗೆ ಬದಲಾಯಿಸಿಕೊಳ್ಳಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಎನ್.ತಿಪ್ಪೇಸ್ವಾಮಿ ಸಲಹೆ ನೀಡಿದರು.
ನಗರದ ದಿಬ್ಬೂರಿನಲ್ಲಿ ಬುಧವಾರ ಆಹಾರ ಹಾಗೂ ನಾಗರಿಕ ಸರಬರಾಜು ಇಲಾಖೆ ಹಮ್ಮಿಕೊಂಡಿದ್ದ ಆಹಾರ ಅದಾಲತ್‌ನಲ್ಲಿ ಮಾತನಾಡಿದರು.
ಅರ್ಹರಲ್ಲದವರು ಬಿಪಿಎಲ್ ಪಡಿತರ ಚೀಟಿ ಹೊಂದಿದ್ದರೆ ಕಾನೂನಿನಂತೆ ಕ್ರಮ ಕೈಗೊಳ್ಳಲಾಗುತ್ತದೆ. ಹಾಗಾಗಿ ಬಿಪಿಎಲ್ ಕಾರ್ಡ್ ವಾಪಸ್ ಮಾಡಿ, ಎಪಿಎಲ್ ಕಾರ್ಡ್ ಮಾಡಿಸಿಕೊಳ್ಳಬೇಕು ಎಂದು ಹೇಳಿದರು.
ಪಡಿತರ ಚೀಟಿದಾರರು ಜಿಲ್ಲಾ ಕೇಂದ್ರಕ್ಕೆ ಬರುವುದನ್ನು ತಪ್ಪಿಸಲು ಹೋಬಳಿ ಮಟ್ಟದಲ್ಲಿ ಆಹಾರ ಅದಾಲತ್ ಹಮ್ಮಿಕೊಳ್ಳಲಾಗಿದೆ. ಎಲ್ಲ ಹೋಬಳಿ ಕೇಂದ್ರಗಳಲ್ಲಿ ಅದಾಲತ್ ನಡೆಯಲಿದೆ ಎಂದರು.
ಬಿಪಿಎಲ್ ಪಡಿತರ ಚೀಟಿ ಹೊಂದಿರುವ 75 ವರ್ಷದ ಮೇಲ್ಪಟ್ಟ ಏಕ ಸದಸ್ಯರಿರುವ ವಯೋವೃದ್ಧರಿಗೆ ಅವರ ಮನೆ ಬಾಗಿಲಿಗೆ ಪಡಿತರ ವಿತರಿಸಲು ‘ಅನ್ನ ಸುವಿಧ’ ಯೋಜನೆ ಜಾರಿಗೆ ಬಂದಿದೆ. ಅರ್ಹ ಫಲಾನುಭವಿಗಳು ನ್ಯಾಯಬೆಲೆ ಅಂಗಡಿಗಳಲ್ಲಿ ತಮ್ಮ ಹೆಸರು ನೋಂದಾಯಿಸಿಕೊಂಡರೆ ಅಂತಹವರ ಮನೆ ಬಾಗಿಲಿಗೆ ಪಡಿತರ ತಲುಪಿಸಲಾಗುತ್ತದೆ ಎಂದು ತಿಳಿಸಿದರು.
ಆಹಾರ ಇಲಾಖೆ ಜಂಟಿ ನಿರ್ದೇಶಕಿ ಸೌಮ್ಯ ಮಾಹಿತಿ ನೀಡಿದರು. 65 ವರ್ಷದ ಮಂಗಳಮ್ಮ, 74 ವರ್ಷದ ಗಂಗಮ್ಮ, 33 ವರ್ಷದ ಲಕ್ಷ್ಮಿದೇವಮ್ಮ ಅವರಿಗೆ ಹೊಸದಾಗಿ ಬಿಪಿಎಲ್ ಪಡಿತರ ಚೀಟಿ ವಿತರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.