ADVERTISEMENT

ತುಮಕುರು: ವ್ಯಾಪಾರಕ್ಕೆ ಬೀದಿಬದಿ ವ್ಯಾಪಾರಿಗಳ ಆಗ್ರಹ

​ಪ್ರಜಾವಾಣಿ ವಾರ್ತೆ
Published 17 ಮೇ 2020, 16:25 IST
Last Updated 17 ಮೇ 2020, 16:25 IST

ತುಮಕೂರು: ಲಾಕ್‍ಡೌನ್ ನಡುವೆ ತೀವ್ರ ಸಂಕಷ್ಟ ಎದುರಿಸುತ್ತಿರುವ ಬೀದಿಬದಿ ವ್ಯಾಪಾರಿಗಳಿಗೆ ವ್ಯಾಪಾರಮಾಡಲು ಅವಕಾಶ ಕೊಡದಿದ್ದರೆ ಮೇ 18ರಿಂದ ಜಿಲ್ಲಾಧಿಕಾರಿ, ಶಾಸಕರು ಮತ್ತು ನಗರಪಾಲಿಕೆ ಆಯುಕ್ತರ ಕಚೇರಿ ಎದುರು ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಜಿಲ್ಲಾ ಫುಟ್‍ಪಾತ್ ವ್ಯಾಪಾರಿಗಳ ಸಂಘ ಎಚ್ಚರಿಸಿದೆ.

ಈಗಾಗಲೇ ಜಿಲ್ಲಾಧಿಕಾರಿ, ಮೇಯರ್, ನಗರಪಾಲಿಕೆ ಆಯುಕ್ತರು, ನಗರ ಶಾಸಕರಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದು, ವ್ಯಾಪಾರ ನಡೆಸಲು ಅವಕಾಶ ಮಾಡಿಕೊಡುವಂತೆ ಕೇಳಿಕೊಂಡಿದ್ದರೂ ಸ್ಪಂದಿಸಿಲ್ಲ. ಎರಡು ತಿಂಗಳಿಂದ ಯಾವುದೇ ವ್ಯಾಪಾರ ವಹಿವಾಟು ಇಲ್ಲದೆ ತೀವ್ರ ತೊಂದರೆಗೆ ಸಿಲುಕಿದ್ದೇವೆ ಎಂದು ಸಂಘ ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಸುಬ್ರಮಣ್ಯ, ವೆಂಡಿಂಗ್ ಕಮಿಟಿ ಸದಸ್ಯರಾದ ವಸೀಂ ಅಕ್ರಂ, ಟಿ.ಎಸ್.ರಾಜಶೇಖರ್, ಎನ್.ಮುತ್ತರಾಜ್ ತಿಳಿಸಿದ್ದಾರೆ.

ಕೊರೊನಾಗಿಂತ ಹಸಿವು ನಮ್ಮನ್ನು ವ್ಯಾಪಕವಾಗಿ ಕಾಡುತ್ತಿದೆ. ವ್ಯಾಪಾರವಿಲ್ಲದೆ ಮನೆಯಲ್ಲೇ ಕೂರುವಂತಾಗಿದ್ದು, ಮನೆ ಬಾಡಿಗೆ, ವಿದ್ಯುತ್ ಬಿಲ್, ಸಾಲ ಕಟ್ಟುವುದಕ್ಕೆ ತೊಂದರೆಯಾಗಿದೆ. ಸಾಲಗಾರರು ನಿತ್ಯವೂ ಮನೆಗೆ ಬಂದು ಸಾಲ ನೀಡುವಂತೆ ಕಿರುಕುಳ ನೀಡುತ್ತಿದ್ದಾರೆ ಎಂದು ತಿಳಿಸಿದರು.

ADVERTISEMENT

ನಗರದಲ್ಲಿ ಸುಮಾರು 3 ಸಾವಿರ ಮಂದಿ ಬೀದಿಬದಿ ವ್ಯಾಪಾರವನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಲಾಕ್‍ಡೌನ್ ಪರಿಣಾಮ ಯಾವುದೇ ಆದಾಯ ಮೂಲವೂ ಇಲ್ಲದಿರುವುದರಿಂದ ನಮ್ಮನ್ನೇ ನಂಬಿಕೊಂಡಿರುವ ಸಾವಿರಾರು ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಹಾಗಾಗಿ ಜಿಲ್ಲಾಡಳಿತ ನಮ್ಮ ನೆರವಿಗೆ ಬರಬೇಕು ಎಂದು ಒತ್ತಾಯಿಸಿದ್ದಾರೆ.

ವ್ಯಾಪಾರ ನಡೆಸಲುಅವಕಾಶ ಕೊಡದಿದ್ದರೆ ಪ್ರತಿದಿನ ₹200ರಂತೆ ಮಾಸಿಕ ₹6 ಸಾವಿರವನ್ನು ಮೂರು ತಿಂಗಳು ಪರಿಹಾರ ನೀಡಬೇಕು. ಇಲ್ಲದಿದ್ದರೆ ಅನಿವಾರ್ಯವಾಗಿ ಉಪವಾಸ ಸತ್ಯಾಗ್ರಹ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.