
ಪ್ರಶಾಂತ್ ಕೆ.ಆರ್.
ತಿಪಟೂರು: ತಾಲ್ಲೂಕಿನ ಉದ್ಯೋಗ ವಿನ್ಯಾಸದಲ್ಲಿ ಗಾರ್ಮೆಂಟ್ ಉದ್ಯಮ ಪ್ರಮುಖ ಸ್ಥಾನ ಪಡೆದಿದೆ. ಉದ್ಯೋಗ ಅರಸಿ ಬೆಂಗಳೂರು ಕಡೆಗೆ ವಲಸೆ ಹೋಗುತ್ತಿದ್ದ ಸಾವಿರಾರು ಮಂದಿಗೆ ಸ್ಥಳೀಯವಾಗಿ ಉದ್ಯೋಗದ ಭರವಸೆ ನೀಡಿದೆ.
ಸ್ಥಳೀಯವಾಗಿ ಆರಂಭಗೊಂಡ ಗಾರ್ಮೆಂಟ್‌ಗಳು ತಾಲ್ಲೂಕಿನ ಐದು ಸಾವಿರಕ್ಕೂ ಹೆಚ್ಚು ಜನರಿಗೆ ಉದ್ಯೋಗದ ಜೊತೆಗೆ ಕೃಷಿ ಸಂಬಂಧಿತ ಚಟುವಟಿಕೆಗಳಲ್ಲಿ ತೊಡಗಿಕೊಂಡು, ಪೋಷಕರನ್ನು ಉಪಚರಿಸುತ್ತಾ ತಮ್ಮೂರಿನಲ್ಲಿಯೇ ನೆಮ್ಮದಿ ಜೀವನಕ್ಕೆ ಅನುವು ಮಾಡಿಕೊಟ್ಟಿದೆ. ಆರ್ಥಿಕ ಸದೃಢತೆ ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ.
ಗಾರ್ಮೆಂಟ್ಸ್‌ಗಳಿಂದಾಗಿ ಅಂಗಡಿ, ಹೋಟೆಲ್, ಆಟೊ ಚಾಲಕರು, ಮಿನಿ ಬಸ್, ತರಕಾರಿ ವ್ಯಾಪಾರಿಗಳ ಜೀವನೋಪಾಯಕ್ಕೂ ನೆರವಾಗಿದೆ.
ಉದ್ಯೋಗ ಸ್ಥಳಗಳಲ್ಲಿ ಕೊರೆತೆಗಳಿಲ್ಲ ಎಂದೇನಿಲ್ಲ. ಹಲವೆಡೆ ಮೂಲ ಸೌಕರ್ಯಗಳ ಕೊರತೆಗಳ ಜೊತೆಗೆ ದಿನದೂಡುವಂತಾಗಿದೆ. ಶೌಚಾಲಯ, ಮಹಿಳೆಯರ ವಿಶ್ರಾಂತಿ ಗೃಹ, ತಾಯಂದಿರ ಪ್ರತ್ಯೇಕ ಗೃಹಗಳು ಹಲವೆಡೆ ಇಲ್ಲ. ಉದ್ಯೋಗಕ್ಕಾಗಿ ಮೂವತ್ತು ಕಿ.ಮೀ ದೂರದಿಂದ ಕಿಕ್ಕಿರಿದು ತುಂಬಿದ ಆಟೊ, ಮಿನಿಬಸ್‌ಗಳಲ್ಲಿ ಸಾಮರ್ಥ್ಯ ಮೀರಿ ಹೆಚ್ಚು ಜನರನ್ನು ತುಂಬಿಕೊಂಡು ಬರುವುದರಿಂದ ಅಪಘಾತಕ್ಕೂ ಕಾರಣವಾಗುತ್ತಿದೆ.
ಬೆಳಗ್ಗೆ 9 ಗಂಟೆಗೆ ಕೆಲಸಕ್ಕೆ ಹಾಜರಾಗಬೇಕಿರುವುದರಿಂದ ಉತ್ತಮ ಕ್ಯಾಂಟೀನ್ ವ್ಯವಸ್ಥೆಯನ್ನು ಕಂಪನಿಗಳು ನೀಡಬೇಕು. ಆದರೆ ಈ ವ್ಯವಸ್ಥೆ ಇಲ್ಲ.
ಸೂಪರ್‌ವೈಸರ್‌ಗಳು ಕಾರ್ಮಿಕರಿಗೆ ಗುರಿ ಸಾಧಿಸಬೇಕೆಂದು ಒತ್ತಡ ಹೇರುವುದಿರಂದ ಮಹಿಳೆಯರಲ್ಲಿ ಕೆಲಸದ ಒತ್ತಡವೂ ಹೆಚ್ಚಿದೆ. ವೈಯಕ್ತಿಕ ಸಮಸ್ಯೆಗಳಿಗೆ ಸ್ಪಂದಿಸುವ ಸಿಬ್ಬಂದಿ ಹಾಗೂ ವೈದ್ಯಾಧಿಕಾರಿಗಳ ಕೊರತೆಯಿಂದ ಮಹಿಳೆಯರ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತಿದೆ.
ಸರ್ಕಾರವು ಉದ್ಯೋಗಸ್ಥರಿಗೆ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ನಿಯೋಜಿಸಿ, ಸುರಕ್ಷಿತ ಆಟೊ, ಮಿನಿಬಸ್‌ಗಳ ಜೊತೆ ಕಂಪನಿಯವರು ನಿಗದಿತ ದರದಲ್ಲಿ ವಾಹನಗಳ ವ್ಯವಸ್ಥೆ ಮಾಡಬೇಕಿದೆ. ಶ್ವಾಸಕೋಶ ಸಂಬಂಧಿ ಕಾಯಿಲೆಗಳು ಕಾರ್ಮಿಕರಲ್ಲಿ ನಿಧಾನವಾಗಿ ಕಂಡುಬರುವುದರಿಂದ ಪರಿಸರ ಇಲಾಖೆ ಮತ್ತು ಆರೋಗ್ಯ ಇಲಾಖೆ ಕೆಲಸದ ಸ್ಥಳದಲ್ಲಿ ಶುದ್ಧ ಹಾಗೂ ಸ್ವಚ್ಛ ವಾತಾವರಣದ ಜೊತೆಗೆ ತುರ್ತು ಸಂದರ್ಭಕ್ಕೆ ಆಂಬುಲೈನ್ಸ್, ಸ್ಥಳದಲ್ಲಿ ಚಿಕಿತ್ಸೆಗೆ ವೈದ್ಯಾಧಿಕಾರಿಯನ್ನು ನೇಮಿಸಬೇಕು ಎನ್ನುವ ಒತ್ತಾಯ ಇದೆ.
ಗಾರ್ಮೆಂಟ್ಸ್ ಹೊರಭಾಗದಲ್ಲಿ ಅನೇಕ ತರಕಾರಿ ಅಂಗಡಿ, ಹೋಟೆಲ್‌ಗಳಿವೆ. ಅಲ್ಲಿ ಸ್ವಚ್ಛತೆ ಹಾಗೂ ಗುಣಮಟ್ಟದ ಬಗ್ಗೆ ನಗರಸಭಾ ಆಡಳಿತ ನಿಗಾವಹಿಸಬೇಕು. ಕಂಪೆನಿಗಳ ಸುತ್ತ ಪೊಲೀಸ್ ರಕ್ಷಣೆ ಒದಗಿಸಬೇಕು ಎಂದು ಕಾರ್ಮಿಕರು ಒತ್ತಾಯಿಸಿದ್ದಾರೆ.
ನೇಮಕಾತಿ ವೇಳೆ ಅನುಭವ ಹೊಂದಿದವರನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಹೊಸ ನೌಕರರು ಕೆಲಸದಿಂದ ವಂಚಿತರಾಗುತ್ತಿದ್ದು ಗಾರ್ಮೆಂಟ್ಸ್‌ಗಳಲ್ಲಿ ಲಘು ತರಬೇತಿ ಕೇಂದ್ರಗಳನ್ನ ನಡೆಸುವ ಮತ್ತು ನೇಮಕಾತಿ ಮಾಡಿಕೊಳ್ಳುವ ವ್ಯವಸ್ಥೆ ಮಾಡಬೇಕು ಎಂದು ಉದ್ಯೋಗಾಕಾಂಕ್ಷಿಗಳು ಮನವಿ ಮಾಡಿದ್ದಾರೆ.
ಗಾರ್ಮೆಂಟ್ಸ್ ಬಗ್ಗೆ ದೂರು ಸಲ್ಲಿಸಿದರೆ ನಮಗೆ ಕೆಲಸದ ಅಭದ್ರತೆ ಉಂಟಾಗುತ್ತದೆ. ಒತ್ತಡ ನಿವಾರಣೆಗೆ ಸೂಕ್ತ ವಿಶ್ರಾಂತಿ ಹಾಗೂ ರಕ್ಷಣೆ ನೀಡುವತ್ತ ಉದ್ಯೋಗದಾತರು ನಿಗಾ ವಹಿಸಬೇಕು.ಗಾರ್ಮೆಂಟ್ಸ್ ಉದ್ಯೋಗಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.