ADVERTISEMENT

ಅನ್ಯಾಯವಾದಾಗ ಹೋರಾಟಕ್ಕೆ ಮುಂದಾಗಿ

‘ಒಡನಾಡಿ’ ಅಭಿನಂದನಾ ಗ್ರಂಥ ಬಿಡುಗಡೆ ಕಾರ್ಯಕ್ರಮದಲ್ಲಿ ಡಾ.ಜಿ.ಪರಮೇಶ್ವರ ಅಭಿಮತ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2021, 16:21 IST
Last Updated 21 ಫೆಬ್ರುವರಿ 2021, 16:21 IST
ಜಿ. ಪಂ ಸದಸ್ಯ ಎಚ್.ಕೆಂಚಮಾರಯ್ಯ ಕುರಿತ ‘ಒಡನಾಡಿ’ ಅಭಿನಂದನಾ ಗ್ರಂಥವನ್ನು ಗಣ್ಯರು ಬಿಡುಗಡೆ ಮಾಡಿದರು
ಜಿ. ಪಂ ಸದಸ್ಯ ಎಚ್.ಕೆಂಚಮಾರಯ್ಯ ಕುರಿತ ‘ಒಡನಾಡಿ’ ಅಭಿನಂದನಾ ಗ್ರಂಥವನ್ನು ಗಣ್ಯರು ಬಿಡುಗಡೆ ಮಾಡಿದರು   

ತುಮಕೂರು: ಪರಿಶಿಷ್ಟ ಜಾತಿ ಜನರು ವಿದ್ಯಾವಂತರಾದರು, ರಾಜಕಾರಣಿ, ಸರ್ಕಾರಿ ನೌಕರರಾದರೂ ದಲಿತ ಎನ್ನುವ ಹಣೆಪಟ್ಟಿ ಕಳಚುವುದಿಲ್ಲ. ಪರಿಶಿಷ್ಟ ಜಾತಿ ಜನರಿಗೆ ‌ಅನ್ಯಾಯ ಆದಾಗ ಸಮುದಾಯದವರು ಹೋರಾಟಕ್ಕೆ ಮುಂದಾಗಬೇಕು ಶಾಸಕ ಡಾ.ಜಿ.ಪರಮೇಶ್ವರ ಹೇಳಿದರು.

ನಗರದ ಬಾಲಭವನದಲ್ಲಿ ಭಾನುವಾರ ಭೂಮಿ ಬಳಗ ಹಾಗೂ ಎಚ್.ಕೆಂಚಮಾರಯ್ಯ ಅಭಿಮಾನಿ ಬಳಗವು ಹಮ್ಮಿಕೊಂಡಿದ್ದ ಜಿಲ್ಲಾ ಪಂಚಾಯಿತಿ ಸದಸ್ಯ ಎಚ್‌.ಕೆಂಚಮಾರಯ್ಯ ಕುರಿತ ‘ಒಡನಾಡಿ’ ಅಭಿನಂದನಾ ಗ್ರಂಥ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಪರಿಶಿಷ್ಟ ಸಮುದಾಯದವನಾಗಿರುವುದಕ್ಕೆ ನನಗೆ ಹೆಮ್ಮೆ ಇದೆ. ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿಗಳು ಒಂದಾದರೆ ಏನಾದರೂ ಮಾಡಬಹುದು. ಎಲ್ಲದಕ್ಕೂ ರಾಜಕೀಯ ಶಕ್ತಿ ಕಾರಣ. ನಮ್ಮ ಮನಸ್ಥಿತಿ ಬದಲಾಗಬೇಕಿದೆ. ಎಷ್ಟು ವರ್ಷ ನಾವು ಹೀಗೆ ಇರಬೇಕು’ ಎಂದು ಪ್ರಶ್ನಿಸಿದರು.

ADVERTISEMENT

ಇಂದು ಮುಟ್ಟಿಸಿಕೊಳ್ಳುವ ಸಮುದಾಯಗಳೂ ಮೀಸಲಾತಿ ಕೇಳುತ್ತಿರುವುದು ಏಕೆ? ಇವರುಸಾಮಾಜಿಕವಾಗಿ ಹಿಂದುಳಿದಿ
ದ್ದಾರೆಯೇ? ಸಾವಿರಾರು ವರ್ಷಗಳ ಕಾಲಶೋಷಣೆಗೆ ಒಳಗಾಗಿದ್ದಾರೆಯೇ? ಏಕೆ ಬೇಕು ಮೀಸಲಾತಿ.ಸಂವಿಧಾನವೇ ನಮ್ಮ
ಶಕ್ತಿ. ಅದನ್ನು ಬದಲಿಸುತ್ತೇನೆ ಎಂದರೆ ಸುಮ್ಮನೆ ಇರಬೇಕಾ ಎಂದು ಪ್ರಶ್ನಿಸಿದರು.

ಸಂಸದ ನಾರಾಯಣಸ್ವಾಮಿ, ಸರ್ಕಾರಿ ಶಾಲೆಗಳು ಮೌಲ್ಯಗಳನ್ನು ಕಳೆದುಕೊಂಡಿದ್ದು ಪರಿಶಿಷ್ಟರಿಗೆ, ಆರ್ಥಿಕ
ಸಂಕಷ್ಟದಲ್ಲಿರುವವರಿಗೆ ಮೀಸಲಾಗಿರುವುದು ವಿಪರ್ಯಾಸ. ಹಣವಂತರು ಶಿಕ್ಷಣ ಕ್ಷೇತ್ರ ಪ್ರವೇಶಿಸುವ ಮೊದಲು ಸರ್ಕಾರಿ ಶಾಲೆ ದೇಗುಲವಾಗಿತ್ತು. ಶಿಕ್ಷಕರು ದೇವರಾಗಿದ್ದರು. ಮಕ್ಕಳ ಮೇಲೆ ಪ್ರಭಾವ ಬೀರಿ ಉನ್ನತ ಬದುಕು ಕಟ್ಟಿಕೊಟ್ಟಿದ್ದರು ಎಂದರು.

ಅಭಿನಂದನಾ ಕೃತಿ ಬಿಡುಗಡೆ ಮಾಡಿದ ಕಾಂಗ್ರೆಸ್ ಮುಖಂಡ ಟಿ.ಬಿ‌.ಜಯಚಂದ್ರ, ಯಾರ ಮೇಲೂ ದ್ವೇಷ ಸಾಧಿಸದ ರಾಜಕಾರಣಿ ಎಂದರೆ ಕೆಂಚಮಾರಯ್ಯ ಮಾತ್ರ ಎಂದರು.

ಎಸ್‌ಸಿ, ಎಸ್‌ಟಿ ‌ನೌಕರರ ಸಮನ್ವಯ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ಶಿವಶಂಕರ್, ಜಿ.ಪಂ.ಸದಸ್ಯ ಕೆಂಚಮಾರಯ್ಯ ಮಾತನಾಡಿದರು.

ಚಿತ್ರದುರ್ಗ ಮುರುಘಾಮಠದ ಶಿವಮೂರ್ತಿ ಮುರುಘರಾಜೇಂದ್ರ ಶರಣರು, ಮಾದಾರ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು.

ಕಾಂಗ್ರೆಸ್ ಮುಖಂಡ ಎಚ್.ಆಂಜನೇಯ, ಸಾಮಾಜಿಕ ಹೋರಾಟಗಾರ ದೊರೈರಾಜು, ತುಮುಲ್ ಮಾಜಿ ಅಧ್ಯಕ್ಷ ಕೊಂಡವಾಡಿ ಚಂದ್ರಶೇಖರ್, ಪ್ರಾಧ್ಯಾಪಕರಾದ ನಾಗಭೂಷಣ ಬಗ್ಗನಡು,‌ ರವಿಕುಮಾರ್ ನೀಹಾ, ಓ.ನಾಗರಾಜು, ಎಸ್‌ಸಿ ಎಸ್‌ಟಿ ನೌಕರರ ಸಮನ್ವಯ ಸಮಿತಿ‌‌ ಜಿಲ್ಲಾ ಅಧ್ಯಕ್ಷ ವೈ.ಕೆ.ಬಾಲಕೃಷ್ಣ, ನರಸೀಯಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.