ತುಮಕೂರು: ಈ ಬಾರಿ ಹುಣಸೆ ಹಣ್ಣಿಗೆ ಶುಕ್ರದೆಸೆ ಆರಂಭವಾಗಿದ್ದು, ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗುತ್ತಿದೆ. ನಗರದ ಎಪಿಎಂಸಿಯಲ್ಲಿ ಸೋಮವಾರ ಕ್ವಿಂಟಲ್ ಹುಣಸೆ ₹32 ಸಾವಿರದವರೆಗೂ ಮಾರಾಟವಾಗಿದೆ. ಈ ಬೆಳವಣಿಗೆ ಬೆಳೆಗಾರರಲ್ಲಿ ನಗು ಮೂಡಿಸಿದೆ.
ಉತ್ತಮ ಗುಣಮಟ್ಟದ ಹುಣಸೆ ಹಣ್ಣು ಕ್ವಿಂಟಲ್‌ಗೆ ಕನಿಷ್ಠ ₹13 ಸಾವಿರದಿಂದ ಗರಿಷ್ಠ ₹32 ಸಾವಿರದವರೆಗೂ ಮಾರಾಟವಾಗಿದೆ. ಮಧ್ಯಮ ಗುಣಮಟ್ಟದ ಹಣ್ಣನ್ನು ಕ್ವಿಂಟಲ್‌ಗೆ ₹7 ಸಾವಿರದಿಂದ ₹9 ಸಾವಿರ ಹಾಗೂ ಗೋಟು ಹಣ್ಣು ₹2,600ರಿಂದ ₹2,700ರ ವರೆಗೂ ವರ್ತಕರು ಖರೀದಿಸಿದ್ದಾರೆ.
ಹಿಂದಿನ ವರ್ಷವೂ ಆರಂಭದ ದಿನಗಳಲ್ಲಿ ಉತ್ತಮ ಬೆಲೆ ಸಿಕ್ಕಿತ್ತು. ಕಳೆದ ವರ್ಷದ ಇದೇ ಹೊತ್ತಿಗೆ ಕ್ವಿಂಟಲ್ ಹುಣಸೆ ಗರಿಷ್ಠ ₹26 ಸಾವಿರದವರೆಗೂ ಮಾರಾಟವಾಗಿತ್ತು. ಆವಕ ಹೆಚ್ಚಿದಂತೆ ಹಾಗೂ ಹಣ್ಣಿನ ಗುಣಮಟ್ಟ ಕುಸಿದಂತೆ ಧಾರಣೆಯೂ ಇಳಿಕೆ ಕಂಡಿತ್ತು.
ಸರಾಸರಿ ಕ್ವಿಂಟಲ್ ₹13 ಸಾವಿರದಿಂದ ₹20 ಸಾವಿರದ ವರೆಗೂ ಮಾರಾಟವಾಗಿತ್ತು. ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಉತ್ತಮ ಬೆಲೆ ಸಿಗುತ್ತಿದೆ. 2020ರಲ್ಲಿ ದಾಖಲೆಯ ಬೆಲೆ ಸಿಕ್ಕಿದ್ದು ಕ್ವಿಂಟಲ್ ₹35 ಸಾವಿರದವರೆಗೂ ಏರಿಕೆಯಾಗಿತ್ತು. ನಂತರದ ವರ್ಷಗಳಲ್ಲಿ ಇಳಿಕೆಯತ್ತ ಮುಖ ಮಾಡಿತ್ತು. ಹಿಂದಿನ ಎರಡು ವರ್ಷಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಬೆಲೆ ಕುಸಿತವಾಗಿತ್ತು.
ಖರೀದಿಗೆ ಬಂದ ಆಂಧ್ರ, ತಮಿಳುನಾಡಿನ ವರ್ತಕರು:
ಆಂಧ್ರಪ್ರದೇಶ ಹಾಗೂ ತಮಿಳುನಾಡಿನಿಂದ ಬಂದಿದ್ದ ವರ್ತಕರು ಖರೀದಿಯಲ್ಲಿ ಭಾಗವಹಿಸಿದ್ದಾರೆ. ಹೆಚ್ಚಿನ ಪ್ರಮಾಣದಲ್ಲಿ ಆಂಧ್ರಪ್ರದೇಶದ ವಿಜಯವಾಡಕ್ಕೆ ಸಾಗಣೆ ಮಾಡಲಾಗುತ್ತಿದ್ದು, ಅಲ್ಲಿನ ಶೀತಲಗೃಹದಲ್ಲಿ ಇಟ್ಟು ನಂತರ ಚಿಲ್ಲರೆ ಮಾರಾಟಕ್ಕೆ ಬಿಡುಗಡೆ ಮಾಡಲಾಗುತ್ತದೆ.
ಏರಿಕೆಗೆ ಕಾರಣ: ಈ ಬಾರಿ ಹುಣಸೆ ಹಣ್ಣಿನ ಇಳುವರಿ ಸಾಕಷ್ಟು ಪ್ರಮಾಣದಲ್ಲಿ ಕಡಿಮೆಯಾಗಿರುವುದು ಬೆಲೆ ಏರಿಕೆಗೆ ಪ್ರಮುಖ ಕಾರಣ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ಸಲ ಶೇ 30ರಿಂದ ಶೇ 40ರಷ್ಟು ಬೆಳೆ ರೈತರ ಕೈಸೇರಿದೆ. ಇಳುವರಿ ಕುಸಿತ, ಮಾರುಕಟ್ಟೆಯಲ್ಲಿ ಆವಕ ತಗ್ಗಿರುವುದು ಹಾಗೂ ಖರೀದಿ ಬೇಡಿಕೆಯಿಂದಾಗಿ ಧಾರಣೆ ಹೆಚ್ಚುವಂತೆ ಮಾಡಿದೆ.
ಫೆಬ್ರುವರಿ ಮಧ್ಯ ಭಾಗದಿಂದ ಎಪಿಎಂಸಿ ಮಾರುಕಟ್ಟೆಗೆ ಹುಣಸೆ ಹಣ್ಣು ಬರುತ್ತಿದ್ದು ಆರಂಭದಿಂದಲೂ ಉತ್ತಮ ಬೆಲೆ ಸಿಗುತ್ತಿದೆ. ಇನ್ನೂ ಎರಡು ತಿಂಗಳು ವಹಿವಾಟು ನಡೆಯಲಿದೆ. ಮಾರ್ಚ್ ತಿಂಗಳಲ್ಲಿ ಹುಣಸೆ ವಹಿವಾಟು ಬಿರುಸು ಪಡೆದುಕೊಳ್ಳುತ್ತದೆ. ಮುಂದಿನ ದಿನಗಳಲ್ಲೂ ಇದೇ ರೀತಿಯ ಧಾರಣೆ ಸಿಗುವ ಸೂಚನೆ ಕಾಣಿಸುತ್ತಿವೆ ಎಂದು ವರ್ತಕ ದೇವೇಂದ್ರಪ್ಪ ಹೇಳುತ್ತಾರೆ.
ಆರಂಭದಲ್ಲಿ ಐದಾರು ಲೋಡ್ ಬರುತ್ತಿದ್ದ ಹಣ್ಣು ನಿಧಾನವಾಗಿ ಏರಿಕೆಯಾಗುತ್ತಿದ್ದು ಸೋಮವಾರ 10 ಲೋಡ್ (ಸುಮಾರು 100 ಟನ್) ಬಂದಿತ್ತು. ಮುಂಗಾರು ಮಳೆಗೆ ಮುನ್ನವೇ ಮಾರಾಟ ಮಾಡಬೇಕಿದ್ದು, ಮಾರ್ಚ್ ತಿಂಗಳಲ್ಲಿ ಇದೇ ಪ್ರಮಾಣದಲ್ಲಿ ಆವಕವಾಗಬಹುದು ಎಂದು ಹೇಳಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.