ADVERTISEMENT

ಗೊರವನಹಳ್ಳಿ: ವಿಜೃಂಭಣೆಯ ಲಕ್ಷ ದೀಪೋತ್ಸವ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2024, 15:46 IST
Last Updated 29 ನವೆಂಬರ್ 2024, 15:46 IST
ಕೊರಟಗೆರೆ ತಾಲ್ಲೂಕು ಗೊರವನಹಳ್ಳಿ ಮಹಾಲಕ್ಷ್ಮಿ ದೇವಾಲಯದಲ್ಲಿ ಕಾರ್ತಿಕ ಮಾಸದ ಅಂಗವಾಗಿ ಲಕ್ಷದೀಪೋತ್ಸವ ಶುಕ್ರವಾರ ವಿಜೃಂಭಣೆಯಿಂದ ನೆರವೇರಿತು
ಕೊರಟಗೆರೆ ತಾಲ್ಲೂಕು ಗೊರವನಹಳ್ಳಿ ಮಹಾಲಕ್ಷ್ಮಿ ದೇವಾಲಯದಲ್ಲಿ ಕಾರ್ತಿಕ ಮಾಸದ ಅಂಗವಾಗಿ ಲಕ್ಷದೀಪೋತ್ಸವ ಶುಕ್ರವಾರ ವಿಜೃಂಭಣೆಯಿಂದ ನೆರವೇರಿತು   

ಕೊರಟಗೆರೆ: ತಾಲ್ಲೂಕಿನ ಗೊರವನಹಳ್ಳಿ ಮಹಾಲಕ್ಷ್ಮಿ ದೇವಾಲಯದಲ್ಲಿ ಕಾರ್ತಿಕ ಮಾಸದ ಅಂಗವಾಗಿ ಬ್ರಹ್ಮ ರಥೋತ್ಸವ, ಮುತ್ತಿನ ಪಲ್ಲಕ್ಕಿ ಉತ್ಸವ ಹಾಗೂ ಲಕ್ಷದೀಪೋತ್ಸವ ಶುಕ್ರವಾರ ವಿಜೃಂಭಣೆಯಿಂದ ನೆರವೇರಿತು.

ತಾಲ್ಲೂಕು, ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆ ಹಾಗೂ ನೆರೆ ರಾಜ್ಯಗಳಾದ ಆಂಧ್ರ ಪ್ರದೇಶ, ತೆಲಂಗಾಣ, ತಮಿಳುನಾಡಿನಿಂದ ಬಂದ ಭಕ್ತರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಕಾರ್ತಿಕ ಮಾಸದ ಅಂಗವಾಗಿ ದೇವಾಲಯದಲ್ಲಿ ಆಡಳಿತ ಮಂಡಳಿಯಿಂದ ಮುಂಜಾನೆಯಿಂದ ವಿವಿಧ ಹೋಮ, ಹವನ, ಅಭಿಷೇಕ ಹಾಗೂ ವಿಶೇಷ ಪೂಜಾ ಕೈಂಕರ್ಯಗಳನ್ನು ಏರ್ಪಡಿಸಲಾಗಿತ್ತು.

ADVERTISEMENT

ಕಾರ್ಯಕ್ರಮದ ಅಂಗವಾಗಿ ಮಧ್ಯಾಹ್ನ 1 ಗಂಟೆಗೆ ಬ್ರಹ್ಮ ರಥೋತ್ಸವ, ಪ್ರಾಕಾರೋತ್ಸವ ನೆರವೇರಿತು. ಇದರ ಅಂಗವಾಗಿ ದೇವಾಲಯ ಸೇರಿದಂತೆ ದೇವಾಲಯ ಆವರಣವನ್ನು ವಿಶೇಷ ದೀಪಾಲಂಕಾರ, ಹೂವಿನ ಅಲಂಕಾರ ಮಾಡಲಾಗಿತ್ತು. ರಥೋತ್ಸವ ಸಂದರ್ಭದಲ್ಲಿ ಚಿಟ್ಟಿ ಮೇಳೆ, ಮಂಗಳವಾದ್ಯ, ಚಂಡೆ ಸೇರಿದಂತೆ ವಿವಿಧ ಜನಪದ ಕಲಾತಂಡಗಳು ಭಾಗವಹಿಸಿದ್ದವು.

ಸಂಜೆ ನಡೆದ ಕಾರ್ಯಕ್ರಮದಲ್ಲಿ ಲಕ್ಷ್ಮಿ ದೇವಿಯ ಮುತ್ತಿನ ಪಲ್ಲಕ್ಕಿ ಉತ್ಸವ, ಲಕ್ಷ ದೀಪೋತ್ಸವ ಏರ್ಪಡಿಸಲಾಗಿತ್ತು. ಲಕ್ಷ ದೀಪೋತ್ಸವದಲ್ಲಿ ನೂರಾರು ಭಕ್ತರು ಭಾಗವಹಿಸಿ ದೀಪಗಳನ್ನು ಹಚ್ಚುವ ಮೂಲಕ ಭಕ್ತ ಸಮರ್ಪಿಸಿದರು. ಗೊರವನಹಳ್ಳಿ, ನರಸಯ್ಯನಪಾಳ್ಯ, ಗೊಲ್ಲರಟ್ಟಿ ಗ್ರಾಮದ ಗ್ರಾಮಸ್ಥರಿಂದ ಆರತಿ ಉತ್ಸವ ಏರ್ಪಡಿಸಲಾಗಿತ್ತು.

ದೇವಾಲಯದ ಟ್ರಸ್ಟ್‌ನಿಂದ ಬರುವ ಭಕ್ತರಿಗೆ ಬೆಳಿಗ್ಗೆಯಿಂದ ರಾತ್ರಿ ವರೆಗೆ ನಿರಂತರವಾಗಿ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು.

ಟ್ರಸ್ಟ್ ಅಧ್ಯಕ್ಷ ಬಿ.ಜಿ.ವಾಸುದೇವ್, ಕಾರ್ಯದರ್ಶಿ ಆರ್.ಮುರಳೀಕೃಷ್ಣ, ಖಜಾಂಚಿ ಆರ್.ಜಗದೀಶ್, ಧರ್ಮದರ್ಶಿಗಳಾದ ಟಿ.ಎಸ್.ಲಕ್ಷ್ಮಿಕಾಂತ್, ಟಿ.ಆರ್.ನಟರಾಜು, ಎಸ್.ಶ್ರೀಪ್ರಸಾದ್, ರವಿರಾಜ ಅರಸ್, ಜಿ.ಎಲ್.ಮಂಜುನಾಥ್, ಓಂಕಾರೇಶ್, ಚಿಕ್ಕನರಸಯ್ಯ, ವಿ.ಬಾಲಕೃಷ್ಣ, ನರಸರಾಜು, ಲಕ್ಷ್ಮೀನರಸಯ್ಯ, ಎನ್.ಜಿ.ನಾಗರಾಜು, ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮಯ್ಯ, ವಿಶೇಷ ಅಧಿಕಾರಿ ಕೇಶವಮೂರ್ತಿ, ಅಶ್ವತ್ಥ್, ಸೋಮಣ್ಣ, ಮಂಜುನಾಥ್, ರಾಜಣ್ಣ, ರವಿಕುಮಾರ್ ಪಾಲ್ಗೊಂಡಿದ್ದರು.

ಕೊರಟಗೆರೆ ತಾಲ್ಲೂಕು ಗೊರವನಹಳ್ಳಿ ಮಹಾಲಕ್ಷ್ಮಿ ದೇವಾಲಯದಲ್ಲಿ ಕಾರ್ತಿಕ ಮಾಸದ ಅಂಗವಾಗಿ ಲಕ್ಷದೀಪೋತ್ಸವ ಶುಕ್ರವಾರ ವಿಜೃಂಭಣೆಯಿಂದ ನೆರವೇರಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.