ADVERTISEMENT

ಸಫಾಯಿ ಕರ್ಮಚಾರಿಗಳಿಗೆ ಸರ್ಕಾರದ ನೆರವು ಪಿ.ಪಿ.ವಾವಾ

ರಾಷ್ಟ್ರೀಯ ಸಫಾಯಿ ಕರ್ಮಚಾರಿಗಳ ಆಯೋಗದ ಸದಸ್ಯ ಪಿ.ಪಿ.ವಾವಾ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2023, 16:09 IST
Last Updated 20 ಮಾರ್ಚ್ 2023, 16:09 IST
ತುಮಕೂರಿನಲ್ಲಿ ಸೋಮವಾರ ರಾಷ್ಟ್ರೀಯ ಸಫಾಯಿ ಕರ್ಮಚಾರಿಗಳ ಆಯೋಗದ ಸದಸ್ಯ ಪಿ.ಪಿ.ವಾವಾ ಅವರು ಅಧಿಕಾರಿಗಳ ಜತೆ ಸಭೆ ನಡೆಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ ಬಿ.ಕರಾಳೆ, ಪಾಲಿಕೆ ಆಯುಕ್ತ ಎಚ್.ವಿ.ದರ್ಶನ್ ಇದ್ದರು
ತುಮಕೂರಿನಲ್ಲಿ ಸೋಮವಾರ ರಾಷ್ಟ್ರೀಯ ಸಫಾಯಿ ಕರ್ಮಚಾರಿಗಳ ಆಯೋಗದ ಸದಸ್ಯ ಪಿ.ಪಿ.ವಾವಾ ಅವರು ಅಧಿಕಾರಿಗಳ ಜತೆ ಸಭೆ ನಡೆಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ ಬಿ.ಕರಾಳೆ, ಪಾಲಿಕೆ ಆಯುಕ್ತ ಎಚ್.ವಿ.ದರ್ಶನ್ ಇದ್ದರು   

ತುಮಕೂರು: ಕೇಂದ್ರ ಸರ್ಕಾರ ಸಫಾಯಿ ಕರ್ಮಚಾರಿಗಳ ಅಭಿವೃದ್ಧಿಗೆ ವಿಶೇಷ ಒತ್ತು ನೀಡುತ್ತಿದೆ. ಹಲವು ಯೋಜನೆಗಳ ಮೂಲಕ ಅವರ ಬದುಕು ಸುಧಾರಣೆಗೆ ಮುಂದಾಗಿದೆ ಎಂದು ರಾಷ್ಟ್ರೀಯ ಸಫಾಯಿ ಕರ್ಮಚಾರಿಗಳ ಆಯೋಗದ ಸದಸ್ಯ ಪಿ.ಪಿ.ವಾವಾ ಇಲ್ಲಿ ಸೋಮವಾರ ಹೇಳಿದರು.

ಸಫಾಯಿ ಕರ್ಮಚಾರಿಗಳು ಒಳಚರಂಡಿಗೆ ಬಿದ್ದು ಸಾವನ್ನಪ್ಪಿದರೆ ಮೃತರ ಕುಟುಂಬಕ್ಕೆ ಸರ್ಕಾರದಿಂದ ₹18.25 ಲಕ್ಷ ಪರಿಹಾರ ನೀಡಲಾಗುತ್ತಿದೆ. ಪ್ರಧಾನಮಂತ್ರಿ ಆವಾಸ್‌ ಯೋಜನೆಯ ಮುಖಾಂತರ ಸೂರು ಕಲ್ಪಿಸುವ ಕೆಲಸವಾಗುತ್ತಿದೆ. ಸಫಾಯಿ ಕರ್ಮಚಾರಿಗಳ ಸೇವೆಯನ್ನು ಕಾಯಮಾತಿ ಮಾಡಿ, ಸೇವಾ ಭದ್ರತೆ ಒದಗಿಸಲಾಗುತ್ತಿದೆ ಎಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಆಟೊ ಖರೀದಿ ಸೇರಿದಂತೆ ಸ್ವಯಂ ಉದ್ಯೋಗಕ್ಕೆ ಸಹಾಯ ಧನ ನೀಡಲಾಗುತ್ತದೆ. ಆಯುಷ್ಮಾನ್ ಭಾರತ್ ಯೋಜನೆ ಹಲವರಿಗೆ ನೆರವಾಗುತ್ತಿದೆ. ಆಸ್ಪತ್ರೆಯಲ್ಲಿ ಉಚಿತವಾಗಿ ಗುಣಮಟ್ಟದ ಚಿಕಿತ್ಸೆ ಸಿಗುತ್ತಿದೆ. ಸಫಾಯಿ ಕರ್ಮಚಾರಿ ಮಕ್ಕಳಿಗೆ ವಿದ್ಯಾರ್ಥಿ ವೇತನ ಒದಗಿಸಲಾಗುತ್ತಿದೆ ಎಂದು ತಿಳಿಸಿದರು.

ADVERTISEMENT

ಜಿ.ಪಂ ಕಚೇರಿಯಲ್ಲಿ ಸಭೆ ನಡೆಸಿ ಅಧಿಕಾರಿಗಳ ಜತೆ ಸಭೆ ಚರ್ಚಿಸಿದರು. ಸಫಾಯಿ ಕರ್ಮಚಾರಿಗಳಿಗೆ ಮೀಸಲಿಟ್ಟಿರುವ ಅನುದಾನ ಸಮರ್ಪಕವಾಗಿ ಬಳಕೆ ಮಾಡಬೇಕು ಎಂದು ಸೂಚಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ ಬಿ.ಕರಾಳೆ, ‘ಪಾಲಿಕೆ ಸೇರಿದಂತೆ ಜಿಲ್ಲೆಯ 11 ನಗರ ಸ್ಥಳೀಯ ಸಂಸ್ಥೆಗಳಲ್ಲಿ 296 ಕಾಯಂ, ನೇರ ಪಾವತಿಯಡಿ 518, ಹೊರ ಗುತ್ತಿಗೆಯಾಗಿ 540, ಇತರೆ ಸ್ವಚ್ಛತಾ ಕಾರ್ಮಿಕರು ಒಳಗೊಂಡಂತೆ 1,354 ಸಫಾಯಿ ಕರ್ಮಚಾರಿಗಳು ಹಾಗೂ ಗ್ರಾಮೀಣ ಪ್ರದೇಶದಲ್ಲಿ 248 ಸ್ವಚ್ಛತಾ ಕಾರ್ಮಿಕರು ಸೇವೆ ಸಲ್ಲಿಸುತ್ತಿದ್ದಾರೆ’ ಎಂದು ಮಾಹಿತಿ ನೀಡಿದರು.

ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಆರ್.ಮಂಜುನಾಥ, ಪಾಲಿಕೆ ಆಯುಕ್ತ ಎಚ್.ವಿ.ದರ್ಶನ್, ಜಿ.ಪಂ ಉಪ ಕಾರ್ಯದರ್ಶಿ ಅತೀಕ್, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಕೃಷ್ಣಪ್ಪ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಅಂಜನಪ್ಪ, ಉಪವಿಭಾಗಾಧಿಕಾರಿ ಎಚ್.ಶಿವಪ್ಪ, ಕಾರ್ಮಿಕ ಅಧಿಕಾರಿ ರಮೇಶ್‌ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.