ADVERTISEMENT

ಸರ್ಕಾರದ ವೈಫಲ್ಯ: ಕೃಷಿ ಕಾಯ್ದೆ ವಾಪಸ್‌ಗೆ ಕಾಂಗ್ರೆಸ್ ಆಗ್ರಹ

​ಪ್ರಜಾವಾಣಿ ವಾರ್ತೆ
Published 3 ಜೂನ್ 2021, 5:20 IST
Last Updated 3 ಜೂನ್ 2021, 5:20 IST
ಜಿ.ಪರಮೇಶ್ವರ
ಜಿ.ಪರಮೇಶ್ವರ   

ತುಮಕೂರು: ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸರ್ಕಾರದ ವಿರುದ್ಧ ಜಿಲ್ಲೆಯ ಕಾಂಗ್ರೆಸ್ ನಾಯಕರು ಒಟ್ಟಾಗಿ ವಾಗ್ದಾಳಿ ನಡೆಸಿದರು. ಆರ್ಥಿಕ ಕುಸಿತ, ನಿರುದ್ಯೋಗ, ಬೆಲೆ ಏರಿಕೆ, ಕೃಷಿ ಕಾಯ್ದೆ ಜಾರಿ, ಕೋವಿಡ್ ನಿರ್ವಹಣೆಯಲ್ಲಿನ ವೈಫಲ್ಯಗಳನ್ನು ಪಟ್ಟಿಮಾಡಿ
ಟೀಕಿಸಿದರು.

ಶಾಸಕ ಜಿ.ಪರಮೇಶ್ವರ, ಮುಖಂಡರಾದ ಟಿ.ಬಿ.ಜಯಚಂದ್ರ, ಕೆ.ಎಸ್.ರಾಜಣ್ಣ ಬುಧವಾರ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಸರ್ಕಾರಗಳ ವಿರುದ್ಧ ಗುಡುಗಿದರು. ಸತತ ಎರಡು ಗಂಟೆಗಳಿಗೂ ಹೆಚ್ಚು ಸಮಯ ವಾಗ್ದಾಳಿ ಮಾಡಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ತಪ್ಪು ನಿರ್ಧಾರಗಳನ್ನು ಜನರಿಗೆ ತಿಳಿಸುವ ಕೆಲಸವನ್ನು ಪಕ್ಷ ಮಾಡಲಿದೆ ಎಂದರು.

ಪರಮೇಶ್ವರ ಮಾತನಾಡಿ, ‘ಮೋದಿ ಆಡಳಿತದ 7 ವರ್ಷಗಳಲ್ಲಿ ದೇಶದ ಆರ್ಥಿಕ ವ್ಯವಸ್ಥೆ ಪಾತಾಳಕ್ಕೆ ಕುಸಿದಿದೆ. ಯುಪಿಎ ಸರ್ಕಾರದ ಅವಧಿಯಲ್ಲಿ ಜಿಡಿಪಿ ಶೇ 10.86ರಷ್ಟು ಇತ್ತು. ಆದರೆ ಈಗ ಶೇ (–) 7.30ಕ್ಕೆ ಕುಸಿದಿದೆ. ವರ್ಷಕ್ಕೆ 1 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ದು, 7 ವರ್ಷಗಳಲ್ಲಿ 7 ಕೋಟಿ ಉದ್ಯೋಗ ಸೃಷ್ಟಿಸಬೇಕಿತ್ತು. ಈ ಅವಧಿಯಲ್ಲಿ 7 ಜನಕ್ಕೂ ಉದ್ಯೋಗ ಸಿಕ್ಕಿಲ್ಲ. ಅಭಿವೃದ್ಧಿಯಲ್ಲಿ ದೇಶವನ್ನು 30 ವರ್ಷಗಳ ಹಿಂದಕ್ಕೆ ತೆಗೆದುಕೊಂಡು ಹೋಗಿದ್ದಾರೆ. 7 ವರ್ಷಗಳ ಸಾಧನೆ ಶೂನ್ಯ’ ಎಂದು ಆರೋಪಿಸಿದರು.

ADVERTISEMENT

ಕೃಷಿ ಮೇಲೆ ದೇಶದ ಆರ್ಥಿಕ ವ್ಯವಸ್ಥೆ ನಿಂತಿದ್ದು, ರೈತರ ಆದಾಯ ದ್ವಿಗುಣ ಮಾಡುವುದಾಗಿ ನೀಡಿದ್ದ ಭರವಸೆ ಈಡೇರಿಲ್ಲ. ಬದಲಾಗಿ ಕೃಷಿ ಕ್ಷೇತ್ರಕ್ಕೆ ಮಾರಕವಾದ ಕಾನೂನು ತಂದು ರೈತರ ಭೂಮಿ ಕಿತ್ತುಕೊಳ್ಳುವ ಕೆಲಸ ಮಾಡುತ್ತಿದೆ. ಕೃಷಿ ಕಾಯ್ದೆ ವಿರೋಧಿಸಿ ದೆಹಲಿ ಬಳಿ 6 ತಿಂಗಳಿಂದ ಪ್ರತಿಭಟನೆ ನಡೆಸುತ್ತಿದ್ದರೂ ಸ್ಪಂದಿಸುವ ಕೆಲಸ ಮಾಡಿಲ್ಲ. ರೈತರ ನೋವು ಅರಿತು ಕಾಯ್ದೆ ವಾಪಸ್ ಪಡೆಯುವುದಾಗಿ ಹೇಳುತ್ತಿಲ್ಲ. ಇದೊಂದು ಕರುಣೆ ಇಲ್ಲದ ಸರ್ಕಾರ ಎಂದು ಚುಚ್ಚಿದರು.

ಕೋವಿಡ್ ನಿಯಂತ್ರಣ, ನಿರ್ವಹಣೆಯಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳು ಸಂಪೂರ್ಣ ವಿಫಲವಾಗಿವೆ. ಎರಡನೇ ಅಲೆ ಬಗ್ಗೆ ತಜ್ಞರು ಎಚ್ಚರಿಸಿದರೂ ಎಚ್ಚೆತ್ತುಕೊಳ್ಳಲಿಲ್ಲ. ಲಸಿಕೆ ಉತ್ಪಾದನೆಯಲ್ಲಿ ಜಗತ್ತಿನಲ್ಲೇ ಭಾರತ ಮುಂಚೂಣಿಯಲ್ಲಿದೆ. 6.63 ಕೋಟಿ ಲಸಿಕೆಯನ್ನು ವಿದೇಶಗಳಿಗೆ ರಫ್ತುಮಾಡಿ ದೇಶದ ಜನರು ಪ್ರಾಣ ಕಳೆದುಕೊಂಡು ಪರದಾಡುವಂತೆ ಮಾಡಿದರು ಎಂದು ಹೇಳಿದರು.

2014ರಲ್ಲಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದಾಗ ಕಚ್ಚಾ ತೈಲದ ಬೆಲೆ ಬ್ಯಾರಲ್‌ಗೆ 136 ಡಾಲರ್ ಇತ್ತು. ಈಗ 60 ಡಾಲರ್ ಇದೆ. ಇಂದಿನ ಬೆಲೆಗೆ ಹೋಲಿಸಿದರೆ ಪೆಟ್ರೋಲ್ ಲೀಟರ್ ₹29ಕ್ಕೆ ಸಿಗಬೇಕಿತ್ತು. ಕೇಂದ್ರ, ರಾಜ್ಯದ ತೆರಿಗೆ ಏರಿಕೆಯಿಂದಾಗಿ ಲೀಟರ್‌ಗೆ ₹100 ತೆರಬೇಕಾಗಿದೆ ಎಂದರು.

ಮುಖಂಡ ಟಿ.ಬಿ.ಜಯಚಂದ್ರ, ‘ಜಿಲ್ಲೆಯಲ್ಲಿ 911 ಮಂದಿ ಸಾವನ್ನಪ್ಪಿದ್ದಾರೆ ಎಂದು ಜಿಲ್ಲಾ ಆಡಳಿತ ಮಾಹಿತಿ ನೀಡುತ್ತಿದೆ. ಶಿರಾದಲ್ಲಿ 61 ಜನರು ಸಾವನ್ನಪ್ಪಿದ್ದಾರೆ. ನನ್ನ ಮಾಹಿತಿ ಪ್ರಕಾರ 154 ಮಂದಿ ಮೃತಪಟ್ಟಿದ್ದಾರೆ. ರ‍್ಯಾಟ್, ಸ್ಕ್ಯಾನಿಂಗ್‌ನಲ್ಲಿ ಕೋವಿಡ್ ದೃಢಪಟ್ಟು ಸಾವನ್ನಪ್ಪಿದವರನ್ನು ಪಟ್ಟಿಯಿಂದ ಕೈಬಿಡಲಾಗಿದೆ. ವ್ಯವಸ್ಥಿತವಾಗಿ ಸಾವಿನ ಅಂಕಿ ಅಂಶ ಮುಚ್ಚಿಹಾಕಲಾಗುತ್ತಿದೆ’ ಎಂದು ಆರೋಪಿಸಿದರು.

ಕೋವಿಡ್ ಕಾರಣಕ್ಕೆ ಕೋಟ್ಯಂತರ ಜನರು ಬಡತನಕ್ಕೆ ತಳ್ಳಲ್ಪಟ್ಟಿದ್ದಾರೆ. 390 ಮಿಲಿಯನ್ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಮೋದಿ ಅವರಿಗೆ ಗುಜರಾತ್ ಮೇಲಿರುವ ವ್ಯಾಮೋಹ, ಬೇರೆ ರಾಜ್ಯಗಳ ಮೇಲಿಲ್ಲ. 25 ಸಂಸದರನ್ನು ಆಯ್ಕೆಮಾಡಿ ಕಳಿಸಿರುವ ರಾಜ್ಯದ ಜನರು ನಿರಾಸೆಯಲ್ಲಿದ್ದಾರೆ ಎಂದರು.

ಮುಖಂಡ ಕೆ.ಎನ್.ರಾಜಣ್ಣ, ‘ಎರಡು ದಿನದ ಹಿಂದೆ ವಿಶ್ವಬ್ಯಾಂಕ್ ಅಧ್ಯಕ್ಷರು ಭಾರತ ಮುಂದಿನ ದಿನಗಳಲ್ಲಿ ಆರ್ಥಿಕ ಸಮಸ್ಯೆ ಎದುರಿಸಲಿದೆ ಎಂದು ಹೇಳಿದ್ದಾರೆ. ಹೆಚ್ಚು ಜನರನ್ನು ನಿರುದ್ಯೋಗಿಗಳನ್ನಾಗಿ ಮಾಡಿ, ಬಡತನಕ್ಕೆ ತಳ್ಳಿದ್ದು ಮೋದಿ ಸರ್ಕಾರದ ಸಾಧನೆ. ಕೈಗಾರಿಕಾ ಆಮ್ಲಜನಕ ಬಳಸಿದ್ದು, ಟ್ಯಾಂಕ್ ವಾಟರ್ ಬಳಸಿದ್ದೆ ಕಪ್ಪು ಶಿಲೀಂಧ್ರ ಹೆಚ್ಚಲು ಕಾರಣ. ಅವಧಿ ಮೀರಿದ, ನಕಲಿ ಔಷಧ ನೀಡಲಾಗುತ್ತಿದೆ’ ಎಂದು ಆರೋಪಿಸಿದರು.

ಕುಂಭಮೇಳದಿಂದ ಕೋವಿಡ್ ಹೆಚ್ಚಾಯಿತು. ಹೆಣಗಳನ್ನು ಬೀದಿಗಳಲ್ಲಿ ಎಸೆದು ಹೋಗುತ್ತಿದ್ದಾರೆ. ಸಾಂಕ್ರಾಮಿಕ ರೋಗ ತಡೆಗೆ ಲಸಿಕೆ ಹಾಕಿಸಿಕೊಳ್ಳುವಂತೆ ಕಾಂಗ್ರೆಸ್ ಹೇಳಿತ್ತೇ ಹೊರತು, ವಿರೋಧ ವ್ಯಕ್ತಪಡಿಸಿಲ್ಲ ಎಂದು ಹೇಳಿದರು.

ಮುಖಂಡರಾದ ರಫಿಕ್ ಅಹಮದ್, ಷಫಿ ಅಹಮದ್, ಕೆ.ಷಡಕ್ಷರಿ, ಮುರಳೀಧರ ಹಾಲಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.