ADVERTISEMENT

ಪೊಲೀಸ್ ಇಲಾಖೆಗೆ ಹೆಚ್ಚು ಮಹಿಳೆಯರ ನೇಮಕಕ್ಕೆ ಒತ್ತು: ಜಿ.ಪರಮೇಶ್ವರ

ಪೊಲೀಸ್ ತರಬೇತಿ ಶಾಲೆಯ 9ನೇ ತಂಡದ ಮಹಿಳಾ ಪೊಲೀಸ್ ಕಾನ್‌ಸ್ಟೇಬಲ್ ನಿರ್ಗಮನ ಪಥ ಸಂಚಲನ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2018, 10:40 IST
Last Updated 6 ಸೆಪ್ಟೆಂಬರ್ 2018, 10:40 IST
ಮಹಿಳಾ ಕಾನ್‌ಸ್ಟೇಬಲ್‌ಗಳ ನಿರ್ಗಮನ ಪಥ ಸಂಚಲನದ ಒಂದು ನೋಟ
ಮಹಿಳಾ ಕಾನ್‌ಸ್ಟೇಬಲ್‌ಗಳ ನಿರ್ಗಮನ ಪಥ ಸಂಚಲನದ ಒಂದು ನೋಟ   

ತುಮಕೂರು: ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಶೇ 6ರಷ್ಟು ಮಹಿಳೆಯರಿದ್ದು, ಇದನ್ನು 20ಕ್ಕೆ ಹೆಚ್ಚಿಸಲು ಉದ್ದೇಶಿಸಲಾಗಿದೆ. ಮಹಿಳೆಯರ ನೇಮಕಾತಿಗೆ ಹೆಚ್ಚು ಒತ್ತು ಕೊಡಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದರು.

ಗುರುವಾರ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಕವಾಯತು ಮೈದಾನದಲ್ಲಿ ನಡೆದ ಪೊಲೀಸ್ ತರಬೇತಿ ಶಾಲೆಯ 9ನೇ ತಂಡದ ಮಹಿಳಾ ಪೊಲೀಸ್ ಕಾನ್‌ಸ್ಟೇಬಲ್ ನಿರ್ಗಮನ ಪಥ ಸಂಚಲನ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಇಲಾಖೆಯಲ್ಲಿ 250 ಐಪಿಎಸ್ ಅಧಿಕಾರಿಗಳಿದ್ದು, 25 ಮಹಿಳಾ ಅಧಿಕಾರಿಗಳಿದ್ದಾರೆ. ಈಗ ಡಿಜಿಪಿಯಾಗಿಯೂ ಮಹಿಳಾ ಅಧಿಕಾರಿ ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. ಸ್ನಾತಕೋತ್ತರ, ಎಂಬಿಎ, ಎಂಜಿನಿಯರಿಂಗ್ ಪದವಿ ಪಡೆದವರು ಇಲಾಖೆಗೆ ನೇಮಕಗೊಳ್ಳುತ್ತಿದ್ದಾರೆ. ಇದರಿಂದ ಇಲಾಖೆಯ ಸಮರ್ಥವಾಗಿ ನಡೆದುಕೊಂಡಲು ಸಹಕಾರವಾಗಲಿದೆ ಎಂಬ ನಂಬಿಕೆ ಇದೆ’ ಎಂದು ಹೇಳಿದರು.

ADVERTISEMENT

‘ವಿಶೇಷವಾಗಿ ಪೋಷಕರು ಹೆಣ್ಣು ಮಕ್ಕಳನ್ನು ಪೊಲೀಸ್ ಇಲಾಖೆ ನೇಮಕಾತಿಯಾಗಲು ಪ್ರೋತ್ಸಾಹಿಸುತ್ತಿರುವುದು ಅಭಿನಾಂದರ್ಹವಾಗಿದೆ. ಹಿಂದೆ ಇದ್ದ ರೀತಿ ಈಗ ಪೊಲೀಸ್ ಇಲಾಖೆ ಕಾರ್ಯಚಟುವಟಿಕೆಗಳಿಲ್ಲ. ದಿನಕ್ಕೊಂದು ಸವಾಲುಗಳು ಎದುರಾಗುತ್ತಿವೆ. ಸಾರ್ವಜನಿಕರು ಇಲಾಖೆಯಿಂದ ಭಿನ್ನ ವಿಭಿನ್ನ ರೀತಿಯ ಸೇವೆ ನಿರೀಕ್ಷೆ ಮಾಡುತ್ತಾರೆ. ನೂತನವಾಗಿ ನೇಮಕಗೊಂಡ ಸಿಬ್ಬಂದಿ ಇದನ್ನೆಲ್ಲ ಅರ್ಥ ಮಾಡಿಕೊಂಡು ಇಲಾಖೆಗೆ ಹೆಸರು ತಂದು ಕೊಡುವ ರೀತಿಯಲ್ಲಿ ಕರ್ತವ್ಯ ನಿಭಾಯಿಸಬೇಕು’ ಎಂದು ಹೇಳಿದರು.

‘ವೃತ್ತಿಯಲ್ಲಿ ಹಲವು ಸವಾಲು, ಸಮಸ್ಯೆಗಳು ಎದುರಾಗಬಹುದು. ಅವುಗಳನ್ನು ಎದುರಿಸುವ ಆತ್ಮಸ್ಥೈರ್ಯ ಬೆಳೆಸಿಕೊಳ್ಳಬೇಕು’ ಎಂದು ತಿಳಿಸಿದರು.

ಕೇಂದ್ರ ವಲಯ ಐಜಿಪಿ ಬಿ.ದಯಾನಂದ, ಪೊಲೀಸ್ ತರಬೇತಿ ವಿಭಾಗದ ಡಿಜಿಪಿ ಕೆ.ಪಿ.ಗರ್ಗ್ ವೇದಿಕೆಯಲ್ಲಿದ್ದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ದಿವ್ಯಾ ಗೋಪಿನಾಥ್ ಸ್ವಾಗತಿಸಿದರು.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ತರಬೇತಿ ಶಾಲೆ ಪ್ರಾಂಶುಪಾಲರಾದ ಡಾ.ವಿ.ಜೆ.ಶೋಭಾರಾಣಿ ಪ್ರಮಾಣ ಬೋಧಿಸಿದರು.

ಮೈಸೂರಿನ ಎಸ್.ಶಶಿಕಲಾ ಅವರಿಗೆ ಸರ್ವೋತ್ತಮ ಪ್ರಶಸ್ತಿಯನ್ನು ಗೃಹ ಸಚಿವರು ಪ್ರದಾನ ಮಾಡಿದರು.

ಪದವೀಧರರೇ ಹೆಚ್ಚು: ತರಬೇತಿ ಶಾಲೆಯಲ್ಲಿ ತರಬೇತಿ ಪಡೆದ 121 ಮಹಿಳಾ ಕಾನ್‌ಸ್ಟೇಬಲ್‌ಗಳಲ್ಲಿ 16 ಮಂದಿ ಎಂ.ಎ, 92 ಬಿ.ಎ ಪದವೀಧರರಿದ್ದು, ಇನ್ನುಳಿದವರು ಪಿಯುಸಿ ಶಿಕ್ಷಣ ಪಡೆದವರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.