ಗುಬ್ಬಿ: ತಾಲ್ಲೂಕಿನಾದ್ಯಂತ ಜಾತಿವಾರು ಸಮೀಕ್ಷೆ ಶನಿವಾರದಿಂದ ಚುರುಕು ಪಡೆದಿದೆ.
ಸಮೀಕ್ಷೆಗೆ ಸಾರ್ವಜನಿಕರು ಉತ್ತಮವಾಗಿ ಸ್ಪಂದಿಸುತ್ತಿದ್ದು, ಸಿಬ್ಬಂದಿಗೆ ಅಗತ್ಯವಿರುವ ಮಾಹಿತಿ ನೀಡುತ್ತಿದ್ದಾರೆ. ತಾಲ್ಲೂಕಿನ ಯಾವುದೇ ಭಾಗದಲ್ಲಿ ನೆಟ್‌ವರ್ಕ್ ಸಮಸ್ಯೆಯಾಗಿಲ್ಲ.
ತಹಶೀಲ್ದಾರ್ ಆರತಿ ಬಿ. ತಾಲ್ಲೂಕಿನ ವಿವಿಧೆಡೆ ಶನಿವಾರ ಭೇಟಿ ನೀಡಿ ಪರಿಶೀಲಿಸಿದರು.
ಸಮೀಕ್ಷೆಗೆ ಸಿಬ್ಬಂದಿಗೆ ಈಗಾಗಲೇ ವ್ಯವಸ್ಥಿತ ತರಬೇತಿ ನೀಡಿರುವುದರಿಂದ ಯಾವುದೇ ಸಮಸ್ಯೆ ಉಂಟಾಗುತ್ತಿಲ್ಲ. ಸಮಸ್ಯೆಯಾದರೆ ತಕ್ಷಣ ಗಮನಕ್ಕೆ ತರುವಂತೆ ಸೂಚಿಸಲಾಗಿದೆ ಎಂದರು.
ಹಿಂದುಳಿದ ವರ್ಗಗಳ ಆಯೋಗದ ಸೂಚನೆಯಂತೆ ಪ್ರತಿ ಕುಟುಂಬದಿಂದಲೂ 60 ಪ್ರಶ್ನೆಗಳಿಗೆ ಸಂಬಂಧಿಸಿದಂತೆ ಮಾತ್ರ ಮಾಹಿತಿ ಪಡೆದುಕೊಳ್ಳಬೇಕು. ಯಾರನ್ನೂ ಬಲವಂತವಾಗಿ ಪ್ರಶ್ನಿಸಬಾರದು ಎಂದು ಸೂಚಿಸಿದರು. ಪ್ರತಿ ಸಿಬ್ಬಂದಿಗೆ ದಿನಕ್ಕೆ 15ರಿಂದ 20 ಮನೆಗಳಂತೆ ಒಟ್ಟು ಒಬ್ಬರಿಗೆ 150 ಮನೆಗಳ ಸಮೀಕ್ಷೆ ಗುರಿ ನಿಗದಿಪಡಿಸಲಾಗಿದೆ ಎಂದು ತಿಳಿಸಿದರು.
ದತ್ತಾಂಶ ಸಂಗ್ರಹಕ್ಕೆ ಮೊಬೈಲ್ ಸಂಖ್ಯೆ ಲಿಂಕ್ ಆಗಿರುವ ಆಧಾರ್ ಕಾರ್ಡ್, ರೇಷನ್ ಕಾರ್ಡ್ ಅಗತ್ಯವಿರುವುದರಿಂದ ಕುಟುಂಬದ ಸದಸ್ಯರು ಅಗತ್ಯ ದಾಖಲೆಗಳನ್ನು ಸಿಬ್ಬಂದಿಗೆ ಒದಗಿಸಬೇಕು. ಸ್ಪಷ್ಟ ಮಾಹಿತಿ ನೀಡಿ ದತ್ತಾಂಶ ಸಂಗ್ರಹಕ್ಕೆ ಸಹಕಾರ ನೀಡಬೇಕು ಎಂದರು.
ಬಿಆರ್‌ಸಿ ಮಧುಸೂಧನ್, ಮೇಲ್ವಿಚಾರಕರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.