ADVERTISEMENT

ಗುಬ್ಬಿ | ಹೆದ್ದಾರಿ ಬದಿಯ ಹುಲ್ಲು ಮೇಯವ ಜಾನುವಾರು: ಹಲವೆಡೆ ಅಪಘಾತ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2025, 6:46 IST
Last Updated 15 ಅಕ್ಟೋಬರ್ 2025, 6:46 IST
ಗುಬ್ಬಿ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ 73ರ ವರ್ತುಲ ರಸ್ತೆಯ ಮಧ್ಯಭಾಗದಲ್ಲಿ ಮೇಯುತ್ತಿರುವ ಜಾನುವಾರು
ಗುಬ್ಬಿ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ 73ರ ವರ್ತುಲ ರಸ್ತೆಯ ಮಧ್ಯಭಾಗದಲ್ಲಿ ಮೇಯುತ್ತಿರುವ ಜಾನುವಾರು   

ಗುಬ್ಬಿ: ತಾಲ್ಲೂಕಿನಲ್ಲಿ ಹೆದ್ದಾರಿ ಹಾಗೂ ವರ್ತುಲ ರಸ್ತೆಗಳ ಸಮೀಪದ ಗ್ರಾಮಸ್ಥರು ರಸ್ತೆಗಳ ಎರಡೂ ಬದಿಗಳಲ್ಲಿ ಹಾಗೂ ಹೆದ್ದಾರಿಯ ವಿಭಜಕಗಳ ಮಧ್ಯೆ ಬೆಳೆದಿರುವ ಹುಲ್ಲಿನಲ್ಲಿ ರಾಸುಗಳನ್ನು ಬಿಟ್ಟು ಮೇಯಿಸುತ್ತಿದ್ದು, ಇದರಿಂದ ಅಪಘಾತಗಳು ಹೆಚ್ಚಾಗಲು ಕಾರಣವಾಗುತ್ತಿದೆ.

ಈ ಮೊದಲೆಲ್ಲ ರೈತರು ತಮ್ಮ ಜಮೀನುಗಳಲ್ಲಿಯೇ ರಾಸುಗಳನ್ನು ಮೇಯಿಸುತ್ತಿದ್ದರು. ಜಮೀನು ಬದುಗಳಲ್ಲಿ ವಿವಿಧ ರೀತಿಯ ಗಿಡ, ಹುಲ್ಲುಗಳನ್ನು ತಿನ್ನುತ್ತಿದ್ದರಿಂದ ರಾಸುಗಳ ಆರೋಗ್ಯವು ಉತ್ತಮವಾಗಿರುತ್ತಿತ್ತು. ಜೊತೆಗೆ ಗುಣಮಟ್ಟದ ಹಾಲನ್ನು ಪಡೆಯಲು ಸಾಧ್ಯವಾಗುತ್ತಿತ್ತು. ಇತ್ತೀಚೆಗೆ ಹೆದ್ದಾರಿ ಹಾಗೂ ವರ್ತುಲ ರಸ್ತೆಗಳ ಬದಿಗಳಲ್ಲಿ ಹುಲ್ಲು ಸೊಗಸಾಗಿ ಬೆಳೆಯುತ್ತಿರುವುದರಿಂದ, ರಾಸುಗಳನ್ನು ಸುಲಭವಾಗಿ ಮೇಯಿಸಬಹುದು ಎಂಬ ಕಾರಣಕ್ಕಾಗಿ ರೈತರು ಅಲ್ಲಿಗೆ ಮೊರೆಹೋಗುತ್ತಿದ್ದಾರೆ.

ಹೆದ್ದಾರಿ ಹಾಗೂ ವರ್ತುಲ ರಸ್ತೆಗಳಲ್ಲಿ ವಾಹನ ಸಂಚಾರ ಹೆಚ್ಚಾಗಿರುವ ಜೊತೆಗೆ ವಾಹನಗಳು ವೇಗವಾಗಿ ಸಾಗುತ್ತಿರುವಾಗ ರಾಸುಗಳು ಅಡ್ಡಬಂದು ಅಪಘಾತಗಳು ಹೆಚ್ಚಾಗುತ್ತಿವೆ. ಇದರಿಂದ ರೈತರು ಹಾಗೂ ವಾಹನ ಸವಾರರಿಬ್ಬರೂ ತೊಂದರೆ ಅನುಭವಿಸುವಂತೆ ಆಗುತ್ತಿದೆ. ರಸ್ತೆ ವಿಭಜಕದ ಮಧ್ಯದಲ್ಲಿ ಮೇಯುತ್ತಿರುವ ರಾಸುಗಳು ವಾಹನಗಳು ಸಂಚರಿಸುವಾಗ ಅಡ್ಡ ಬಂದು ಅನೇಕ ದ್ವಿಚಕ್ರ ವಾಹನ ಸವಾರರು ಬಿದ್ದು ಆಸ್ಪತ್ರೆ ಸೇರಿರುವ ನಿದರ್ಶನಗಳಿವೆ.

ADVERTISEMENT

‘ಹೆದ್ದಾರಿಗಳಲ್ಲಿ ರಾಸುಗಳನ್ನು ಮೇಯಿಸುವುದರಿಂದ ಆಗುವ ಅನಾಹುತಗಳ ಬಗ್ಗೆ ರೈತರಲ್ಲಿ ಅರಿವು ಮೂಡಿಸಬೇಕಿದೆ. ಹೆದ್ದಾರಿಗಳಲ್ಲಿ ಅಪಘಾತವಾದಲ್ಲಿ, ಸೂಕ್ತ ಪರಿಹಾರ ಪಡೆಯಲು ಕಷ್ಟವಿರುವುದರಿಂದ ರೈತರು ಎಚ್ಚೆತ್ತುಕೊಳ್ಳಬೇಕು’ ಎನ್ನುತ್ತಾರೆ ರೈತ ಮಹೇಶ್.

ರೈತರು ಅಪಾಯದ ನಡುವೆ ರಾಸುಗಳನ್ನು ಮೇಯಿಸುವ ಬದಲಾಗಿ ಈ ಮೊದಲಿನಂತೆ ಅವರ ಜಮೀನುಗಳಲ್ಲೇ ಮೇಯಿಸುವುದನ್ನು ರೂಢಿಸಿಕೊಳ್ಳಬೇಕು. ಅಧಿಕಾರಿಗಳು ರೈತರಲ್ಲಿ ಎಚ್ಚರಿಕೆ ನೀಡಬೇಕು. ಅಗತ್ಯವಿದ್ದಲ್ಲಿ ದಂಡ ವಿಧಿಸಬೇಕು’ ಎನ್ನುತ್ತಾರೆ ವಕೀಲ ಬೊಮ್ಮಲಿಂಗೇಶ್ವರ

ಹೆದ್ದಾರಿಗಳಲ್ಲಿ ಹೆಚ್ಚು ವಾಹನ ಸಂಚರಿಸುವುದರಿಂದ ವಾಹನಗಳು ಉಗುಳುವ ಕಾರ್ಬನ್ ಮೋನಾಕ್ಸೈಡ್ ಹಾಗೂ ಸಲ್ಫರ್ ಡೈಆಕ್ಸೈಡ್ ಕಣಗಳು ರಸ್ತೆಯ ಪಕ್ಕದಲ್ಲಿರುವ ಹುಲ್ಲಿಗೆ ಅಂಟಿಕೊಳ್ಳುತ್ತದೆ. ರಾಸುಗಳು ಅಂತಹ ಹುಲ್ಲನ್ನು ಸೇವಿಸಿವುದರಿಂದ ಶ್ವಾಸಕೋಶ, ಕರುಳು ಹಾಗೂ ಇತರೆ ಒಳ ಅಂಗಗಳು ರೋಗಕ್ಕೆ ತುತ್ತಾಗಿ ಪ್ರಾಣಪಾಯವಾಗುವ ಸಾಧ್ಯತೆ ಇರುತ್ತದೆ ಎಂದು ಪಶು ವೈದ್ಯಾಧಿಕಾರಿಗಳು ಎಚ್ಚರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.