ADVERTISEMENT

ಹಮಾಲಿ ಕಾರ್ಮಿಕರ ಅಹೋರಾತ್ರಿ ಧರಣಿ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2021, 4:33 IST
Last Updated 24 ಫೆಬ್ರುವರಿ 2021, 4:33 IST
ತುಮಕೂರಿನಲ್ಲಿ ಹೋರಾಟದ ಪೋಸ್ಟರ್ ಬಿಡುಗಡೆ ಮಾಡಲಾಯಿತು
ತುಮಕೂರಿನಲ್ಲಿ ಹೋರಾಟದ ಪೋಸ್ಟರ್ ಬಿಡುಗಡೆ ಮಾಡಲಾಯಿತು   

ತುಮಕೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಹಮಾಲಿ ಕಾರ್ಮಿಕರ ಫೆಡರೇಷನ್ (ಸಿಐಟಿಯು) ನೇತೃತ್ವದಲ್ಲಿ ಹಮಾಲಿ ಕಾರ್ಮಿಕರು ಮಾರ್ಚ್3ರಿಂದ ಬೆಂಗಳೂರಿನ ಪ್ರೀಡಂ ಪಾರ್ಕ್‍ನಲ್ಲಿ ಆಹೋರಾತ್ರಿ ಧರಣಿ ನಡೆಸಲಿದ್ದಾರೆ ಎಂದು ಫೆಡರೇಷನ್ ಅಧ್ಯಕ್ಷ ಕೆ.ಮಹಾಂತೇಶ ತಿಳಿಸಿದ್ದಾರೆ.

ರಾಜ್ಯ ಬಜೆಟ್‌ನಲ್ಲಿ ಹಮಾಲಿ ಕಾರ್ಮಿಕರು ಸೇರಿದಂತೆ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಜಾರಿಮಾಡಲು ₹500 ಕೋಟಿ ಒದಗಿಸಬೇಕು. ಎಪಿಎಂಸಿ ಕಾಯಕ ನಿಧಿಯಡಿ ನಿವೃತ್ತಿ ಪರಿಹಾರ ನೀಡಬೇಕು. ಅಸಂಘಟಿತ ಕಾರ್ಮಿಕರ ಭವಿಷ್ಯನಿಧಿ ಯೋಜನೆಯನ್ನು ಜಾರಿಮಾಡಬೇಕು ಎಂದು ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಒತ್ತಾಯಿಸಿದರು.

ಲೋಡಿಂಗ್, ಅನ್‌ಲೋಡಿಂಗ್‌ಗೆ ಕನಿಷ್ಠ ವೇತನ ಜಾರಿಗೊಳಿಸಬೇಕು, ಎಪಿಎಂಸಿ ಸೇರಿದಂತೆ ಎಲ್ಲಾ ವಿಭಾಗದ ಹಮಾಲಿ ಕಾರ್ಮಿಕರಿಗೆ ವಸತಿ ಯೋಜನೆ ಜಾರಿಮಾಡಬೇಕು. ‘ಕಾಯಕ ನಿಧಿ’ ಯೋಜನೆಯನ್ನು ಬಲಪಡಿಸಬೇಕು, ಈಗಿರುವ ವೈದ್ಯಕೀಯ ಮರುಪಾವತಿ ಯೋಜನೆಯಲ್ಲಿ ಎಲ್ಲಾ ರೀತಿಯ ಚಿಕಿತ್ಸೆಗಳನ್ನು ಪಡೆಯಲು ನಿಯಮಾವಳಿಗಳಿಗೆ ತಿದ್ದುಪಡಿ ತರಬೇಕು. ವೈದ್ಯಕೀಯ ವೆಚ್ಚದ ಮಿತಿಯನ್ನು ₹2 ಲಕ್ಷಕ್ಕೆ ಏರಿಸಬೇಕು. ಜೀವ ವಿಮಾ ನಿಗಮದಿಂದ ಜಾರಿಗೊಳಿಸಲು ಉದ್ದೇಶಿಸಿರುವ ವಿಮಾ ಯೋಜನೆಯನ್ನು ಕೂಡಲೇ ಜಾರಿಗೆ ತರಬೇಕು. ಮೂರು ವರ್ಷಗಳಿಂದ ಬಾಕಿ ಇರುವ ಮರಣ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ADVERTISEMENT

ಫೆಡರೇಷನ್ ಉಪಾಧ್ಯಕ್ಷ ಎನ್.ಕೆ.ಸುಬ್ರಮಣ್ಯ, ‘ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ಸ್ಥಾಪನೆಯಾಗಿ ದಶಕಗಳೇ ಕಳೆದರೂ ಮಂಡಳಿಯು ಕನಿಷ್ಠ ಸೌಲಭ್ಯಗಳನ್ನು ನೀಡಿಲ್ಲ. ಮಂಡಳಿಗೆ ಹಣಕಾಸಿನ ನೇರವು ನೀಡಬೇಕು. ಹಮಾಲಿ ಕಾರ್ಮಿಕರಿಗೆ ಪ್ರತ್ಯೇಕ ಮಂಡಳಿ ರಚಿಸಬೇಕು’ ಎಂದು ಒತ್ತಾಯಿಸಿದರು.

ಮುಖಂಡರಾದ ಗಂಗಾಧರ, ಚಿಕ್ಕಹನುಮಂತಯ್ಯ, ನಾಗರಾಜು, ಪೋತರಾಜು, ರಾಮಾಂಜಿನಿ, ಮಧು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.