ADVERTISEMENT

ರಾಜ್ಯದ ಜನತೆಯ ತೆರಿಗೆ ಹಣ ಜಾಹೀರಾತಿಗೆ ಖರ್ಚು: ಎಚ್.ಡಿ.ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2026, 5:29 IST
Last Updated 17 ಫೆಬ್ರುವರಿ 2026, 5:29 IST
ಚಿಕ್ಕನಾಯಕನಹಳ್ಳಿಯಲ್ಲಿ ಆಯೋಜಿಸಲಾಗಿದ್ದ ಜನಸ್ಪಂದನ, ವಿವಿಧ ಸವಲತ್ತುಗಳ ವಿತರಣೆ, ಆರೋಗ್ಯ ತಪಾಸಣಾ ಶಿಬಿರವನ್ನು ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಉದ್ಘಾಟಿಸಿದರು
ಚಿಕ್ಕನಾಯಕನಹಳ್ಳಿಯಲ್ಲಿ ಆಯೋಜಿಸಲಾಗಿದ್ದ ಜನಸ್ಪಂದನ, ವಿವಿಧ ಸವಲತ್ತುಗಳ ವಿತರಣೆ, ಆರೋಗ್ಯ ತಪಾಸಣಾ ಶಿಬಿರವನ್ನು ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಉದ್ಘಾಟಿಸಿದರು   

ಚಿಕ್ಕನಾಯಕನಹಳ್ಳಿ: ‘ಕರ್ನಾಟಕ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ ಎಂದು ನಾನು ಹೇಳುವುದಿಲ್ಲ. ಆದರೆ, ಜನರನ್ನು ಶಾಶ್ವತವಾಗಿ ಆರ್ಥಿಕ ಸಬಲರನ್ನಾಗಿ ಮಾಡುವಷ್ಟು ಸಂಪನ್ಮೂಲ ರಾಜ್ಯದಲ್ಲಿದೆ. ಆದರೆ, ದಿನನಿತ್ಯ ಇನ್ನೊಬ್ಬರ ಮುಂದೆ ಕೈಯೊಡ್ಡುವ ಸ್ಥಿತಿಗೆ ಜನರನ್ನು ದೂಡಲಾಗಿದೆ’ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಎಚ್.ಡಿ. ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು.

ಪಟ್ಟಣದಲ್ಲಿ ಸೋಮವಾರ ಜಿಲ್ಲಾಡಳಿತ ಹಾಗೂ ತಾಲ್ಲೂಕು ಆಡಳಿತ ಆಯೋಜಿದ್ದ ಜನಸ್ಪಂದನದ 100ನೇ ವಾರದ ಆಚರಣಾ ಸಮಾರಂಭ ಮತ್ತು ವಿವಿಧ ಸವಲತ್ತು ವಿತರಣೆ, ಉಚಿತ ಆರೋಗ್ಯ ತಪಾಸಣಾ ಮತ್ತು ಚಿಕಿತ್ಸಾ ಶಿಬಿರ ಉದ್ಘಾಟಿಸಿ ಮಾತನಾಡಿದರು.

‘ಜನರು ಬುದ್ದಿವಂತರಾಗಬೇಕು. ಇನ್ನೊಬ್ಬರಿಗೆ ಕೊಡುವ ಶಕ್ತಿ ತಮಗೆ ಬರದೇ ಇರುವ ಬಗ್ಗೆ ಆಲೋಚನೆ ಮಾಡಬೇಕು. ಮಹಾತ್ಮ ಗಾಂಧೀಜಿ ಅವರ ರಾಮರಾಜ್ಯದ ಕನಸು ನನಸು ಎಂದರೆ ತಾನು ಒಬ್ಬರ ಮುಂದೆ ಕೈಚಾಚುವುದು ಅಲ್ಲ. ಇನ್ನೊಬ್ಬರಿಗೆ ಕೊಡುವುದು’ ಎಂದರು.

ADVERTISEMENT

‘ಅಭಿವೃದ್ಧಿ ಎನ್ನುವುದು ಪ್ರಚಾರದಲ್ಲಿ ಮಾತ್ರ ಕಾಣುತ್ತಿದೆ. ಕೇವಲ ಜಾಹೀರಾತುಗಳಲ್ಲಿ ಅಭಿವೃದ್ಧಿ ಕಾಣುತ್ತಿದೆ. ನೂರಾರು ಕೋಟಿ ಜನರ ತೆರಿಗೆ ಹಣವನ್ನು ಪೋಲು ಮಾಡಿ ಜಾಹೀರಾತು ನೀಡಲಾಗುತ್ತಿದೆ. ನಾನು ಎರಡು ಬಾರಿ ಮುಖ್ಯಮಂತ್ರಿ ಆಗಿದ್ದಾಗ ಸಾಕಷ್ಟು ಜನಪರ ಕೆಲಸ ಮಾಡಿದ್ದೇನೆ. ಆದರೆ, ಅದನ್ನು ಪ್ರಚಾರಕ್ಕೆ ಬಳಕೆ ಮಾಡಿಕೊಳ್ಳಲಿಲ್ಲ. ಈಗ ನೋಡಿದರೆ ಕೆಲಸಕ್ಕಿಂತ ಪ್ರಚಾರವೇ ಜಾಸ್ತಿಯಾಗಿದೆ’ ಎಂದು ಟೀಕಿಸಿದರು.

‘ಪ್ರಚಾರಕ್ಕಿಂತ ಕರ್ತವ್ಯವೇ ಮಿಗಿಲು ಎಂದು ನಂಬಿದ್ದೇನೆ. ಕೇವಲ ರಾಜಕೀಯ ಲಾಭದ ಭರವಸೆಗಳಿಂದ ಜನರಿಗೆ ಉಪಯೋಗವಿಲ್ಲ. ಅವರನ್ನು ಶಾಶ್ವತವಾಗಿ ಮೇಲೆತ್ತುವ ಕೆಲಸ ಆಗಬೇಕಿದೆ. ಕೃಷಿಕರಿಗೆ ಶಕ್ತಿ ತುಂಬಬೇಕಿದೆ. ಶಿಕ್ಷಣ, ಆರೋಗ್ಯ, ಉದ್ಯೋಗ, ವಸತಿ ಸೌಲಭ್ಯಗಳು ಎಲ್ಲರಿಗೂ ಕೈಗೆಟುಕುವ ರೀತಿಯಲ್ಲಿರಬೇಕು. ಆದರೆ, ರಾಜ್ಯದಲ್ಲಿ ಬೇರೆಯದೇ ಪರಿಸ್ಥಿತಿ ಇದೆ’ ಎಂದರು.

‘ಪ್ರತೀ ಸರ್ಕಾರಿ ಕಾರ್ಯಕ್ರಮದಲ್ಲಿ ಸಂವಿಧಾನದ ಪೀಠಿಕೆ ಓದಿ ನಾವು ಜಾತ್ಯತೀತರು ಎಂದು ಹೇಳುತ್ತೇವೆ. ಆದರೆ, ಅದಾದ ಮೇಲೆ ಜಾತಿ ಹೆಸರಿನ ಮೇಲೆ ರಾಜಕೀಯ ಮಾಡುತ್ತೇವೆ. ಇವತ್ತು ರಾಜಕೀಯ ಲಾಭಕ್ಕಾಗಿ, ಮೀಸಲಾತಿಗಾಗಿ ಜಾತಿಗಳನ್ನು ಒಡೆಯಲಾಗುತ್ತಿದೆ. ಆಮೇಲೆ ನಾವು ಜಾತ್ಯತೀತರು ಎಂದು ಹೇಳಿಕೊಳ್ಳುತ್ತಾರೆ. ಈ ವೈರುಧ್ಯಕ್ಕೆ ಏನು ಹೇಳುವುದು’ ಎಂದು ಬೇಸರ ವ್ಯಕ್ತಪಡಿಸಿದರು.

‘ಜನತೆ ಜಾತಿಯ ವ್ಯಾಮೋಹದಿಂದ ಹೊರಬರದೇ ಹೋದರೆ ಅಭಿವೃದ್ಧಿ ಮರೀಚಿಕೆ ಆಗುತ್ತದೆ. ಕೃತಕ ಬುದ್ಧಿಮತ್ತೆ ಕಾಲದಲ್ಲಿಯೂ ನಮ್ಮ ಜಾತಿ ರಾಜಕಾರಣ ನಡೆಯುತ್ತಿದೆ’ ಎಂದು ಹೇಳಿದರು.

ಕೇಂದ್ರದ ರೈಲ್ವೆ ಮತ್ತು ಜಲಶಕ್ತಿ ರಾಜ್ಯಖಾತೆ ಸಚಿವ ವಿ.ಸೋಮಣ್ಣ ಮಾತನಾಡಿ, ‘ಸುರೇಶ್ ಬಾಬು ಮನೆ ಮಗನಾಗಿ ಜನರ ಸಮಸ್ಯೆಗಳನ್ನು ಬಗೆಹರಿಸುತ್ತಿದ್ದಾರೆ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಗ್ರಾಮ ವಾಸ್ತವ್ಯ ಮಾಡಿದ್ದರು. ಜನಸ್ಪಂದನ ಕಾರ್ಯಕ್ರಮವನ್ನು ಸಾರ್ವಜನಿಕರು ಬಳಸಿಕೊಳ್ಳಬೇಕು. ತಾಲ್ಲೂಕಿನಲ್ಲಿ ಮೈನಿಂಗ್ ಇದೆ. ಕೈಗಾರಿಕೆ ತೆರೆಯುವ ಪ್ರಸ್ತಾಪ ಕುಮಾರಸ್ವಾಮಿ ಮುಂದಿಟ್ಟಿದ್ದಾರೆ’ ಎಂದರು.

‘ಕರ್ನಾಟಕದಲ್ಲಿ ನಾನು ಕೇಂದ್ರ ಮಂತ್ರಿಯಾದ ನಂತರ ₹52,000 ಕೋಟಿ ಯೋಜನೆ ಕೈಗೆತ್ತಿಕೊಂಡಿದ್ದು ವಿಶ್ವದಲ್ಲೇ ದಕ್ಷಿಣ ಭಾರತದಲ್ಲಿ ಮೊದಲ ಸ್ಥಾನದಲ್ಲಿರುವುದು ಕರ್ನಾಟಕ. ರೈಲ್ವೆ ಯೋಜನೆಯಾಗಬೇಕಾದರೆ ರಾಜ್ಯ ಸರ್ಕಾರದಿಂದ ಭೂ ಹಸ್ತಾಂತರ ಕಠಿಣ ಕೆಲಸವಾಗಿದೆ. 52 ವರ್ಷಗಳಿಂದ ಅನೇಕ ಯೋಜನೆಗಳು ಹಾಗೆಯೇ ಉಳಿದಿದ್ದು ಮಂತ್ರಿಯಾದ ನಂತರ 5ಸಾವಿರ ಎಕರೆಗೂ ಮೇಲ್ಪಟ್ಟು ಜಾಗವನ್ನು ಪಡೆದು ಎರಡರಿಂದ ಮೂರು ಯೋಜನೆಗಳನ್ನು ಮುಗಿಸುತ್ತ ಬಂದಿದ್ದೇವೆ’ ಎಂದು ಹೇಳಿದರು.

ಆದಿ ಚುಂಚನಗಿರಿ ಮಹಾಸಂಸ್ಥಾನ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ‘ತಮ್ಮ ಕೆಲಸವನ್ನು ಕರ್ಮ ಎಂದು ಮಾಡದೇ ಸೇವೆ ಎಂದು ಮಾಡಬೇಕು. ಸೇವೆ ಮಾಡುವುದರಿಂದ ಮಾತ್ರ ನೆಮ್ಮದಿ ಸಾಧ್ಯ’ ಎಂದರು.

ವಿಧಾನ ಪರಿಷತ್ ಸದಸ್ಯ ರಮೇಶ್ ಬಾಬು ಮಾತನಾಡಿ, ‘ಸಿದ್ದರಾಮಯ್ಯ ನೀಡಿರುವ ಅನ್ನಭಾಗ್ಯ ಕಾರ್ಯಕ್ರಮ ಇಂದಿಗೂ ಜನರು ನೆನೆಯುವ ಕಾರ್ಯಕ್ರಮ. ಜನಸ್ಪಂದನಾ ಕಾರ್ಯಕ್ರಮವು ರಾಜ್ಯ ಸರ್ಕಾರದ ಕಾರ್ಯಕ್ರಮವಾಗಿದೆ. ಜನ ಸಾಮಾನ್ಯರನ್ನು ಭೇಟಿ ಮಾಡಿ ಸಮಸ್ಯೆಗಳಿಗೆ ಸ್ಪಂದಿಸಿ ಸ್ಥಳದಲ್ಲೇ ಪರಿಹಾರ ಮಾಡುತ್ತಿದ್ದಾರೆ’ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ 100 ವಾರಗಳ ಜನಸ್ಪಂದನ ಕಾರ್ಯಕ್ರಮದ ಪುಸ್ತಕ ಬಿಡುಗಡೆ ಮಾಡಲಾಯಿತು.

ಹಿರಿಯೂರಿನ ಬಸವರಮಾನಂದ ಸ್ವಾಮೀಜಿ, ನಾಗಮಂಗಲದ ಸತ್ಕೀರ್ತಿನಾಥ ಸ್ವಾಮೀಜಿ, ಹಾಸನ ಶಾಖಾ ಮಠದ ಶಂಭುನಾಥ ಸ್ವಾಮೀಜಿ, ಕೆಎಸ್‌ಆರ್‌ಟಿಸಿ ನಿಮಗದ ಅಧ್ಯಕ್ಷ ಎಸ್.ಆರ್. ಶ್ರೀನಿವಾಸ್, ಬಿಎಂಟಿಸಿ ಉಪಾಧ್ಯಕ್ಷ ನಿಕೇತ್‌ರಾಜ್, ಶಾಸಕ ಎಂ.ಟಿ.ಕೃಷ್ಣಪ್ಪ, ಉಪವಿಭಾಗಾಧಿಕಾರಿ ಸಪ್ತಶ್ರೀ, ತಹಶೀಲ್ದಾರ್ ಮಮತಾ ಎಂ., ಇಒ ದೊಡ್ಡಸಿದ್ದಯ್ಯ, ಪ್ರೀತಿ ರಾಘವೇಂದ್ರ, ಕಾಂತರಾಜು, ಎಚ್.ಆರ್.ಶಶಿಧರ್, ರಾಮಚಂದ್ರಯ್ಯ, ಸಿಂಗದಹಳ್ಳಿ ರಾಜ್‌ಕುಮಾರ್, ಎಸ್.ಆರ್.ಗೌಡ ಇದ್ದರು.

ಕಾರ್ಯಕ್ರಮದಲ್ಲಿ ನೂರಾರು ಜನರು ಅರೋಗ್ಯ ತಪಾಸಣೆಯಲ್ಲಿ ಭಾಗವಹಿಸಿದ್ದರು.
ಚಿತ್ರದುರ್ಗ- ಬಾಣಸಂದ್ರ ನಡುವೆ ರೈಲ್ವೆ ಮಾರ್ಗ ಕಲ್ಪಿಸಲು ವಿ.ಸೋಮಣ್ಣ ಗೆದ್ದಾಗಿನಿಂದ ಒತ್ತಾಯಿಸಿದ್ದೇನೆ. ಕಬ್ಬಿಣ ಕಾರ್ಖಾನೆ ಮಾಡಲು ಕುಮಾರಸ್ವಾಮಿ ಹೇಳಿದ್ದು ತಾಲ್ಲೂಕಿನಲ್ಲಿ 200 ಎಕರೆ ಜಾಗದ ಹುಡುಕಾಟದಲ್ಲಿದ್ದೇವೆ
ಸಿ.ಬಿ.ಸುರೇಶ್ ಬಾಬು ಶಾಸಕ‌

‘ನಾನು ರಾಜ್ಯದ ಆಕಸ್ಮಿಕ ಮುಖ್ಯಮಂತ್ರಿ’

‘ನನ್ನ ರಾಜಕೀಯ ಭವಿಷ್ಯ ಮುಗಿಯಿತು ಎಂಬ ಸಂದರ್ಭದಲ್ಲಿ ನರೇಂದ್ರ ಮೋದಿ ಸರ್ಕಾರ ಕೇಂದ್ರದಲ್ಲಿ ಮಂತ್ರಿಯಾಗಿ ಕೆಲಸ ಮಾಡುವಂತಹ ಒಂದು ಅವಕಾಶವನ್ನು ಮತ್ತೆ ಕಲ್ಪಿಸಿ ಕೊಟ್ಟಿದೆ’ ಎಂದು ಎಚ್.ಡಿ ಕುಮಾರಸ್ವಾಮಿ ಹೇಳಿದರು. ‘ನಾನು ಈ ರಾಜ್ಯದಲ್ಲಿ ಆಕಸ್ಮಿಕವಾಗಿ ಮುಖ್ಯಮಂತ್ರಿ ಆದವನು. ನಾಡಿನ ಆರೂವರೆ ಕೋಟಿ ಜನತೆ ಆಶೀರ್ವಾದ ಮಾಡಿ ಈ ರಾಜ್ಯದಲ್ಲಿ ನೀನು ಆಡಳಿತ ನಡೆಸು ಎಂದು ಅಧಿಕಾರ ಕೊಟ್ಟವರಲ್ಲ’ ಎಂದರು. ‘ಯಾವುದೋ ಒಂದು ದೈವ ಪ್ರೇರೇಪಣೆಯಿಂದ ಗುರು ಹಿರಿಯರ ಆಶೀರ್ವಾದ ಮತ್ತು ನಮ್ಮ ಪಕ್ಷದಲ್ಲಿ ಗೆದ್ದಂತಹ ಶಾಸಕರ ಬೆಂಬಲದೊಂದಿಗೆ ಎರಡು ಬಾರಿ ನಾನು ಮುಖ್ಯಮಂತ್ರಿಯಾಗಿದ್ದೇನೆ. ಅದು ದೈವ ಪ್ರೇರೇಪಣೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.