ADVERTISEMENT

ತಿಪಟೂರು: ಅಪೌಷ್ಠಿಕ ಮಕ್ಕಳ ಆರೋಗ್ಯ ತಪಾಸಣಾ ಶಿಬಿರ

​ಪ್ರಜಾವಾಣಿ ವಾರ್ತೆ
Published 31 ಜನವರಿ 2025, 14:24 IST
Last Updated 31 ಜನವರಿ 2025, 14:24 IST
ತಿಪಟೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಅಪೌಷ್ಠಿಕ ಮಕ್ಕಳ ಆರೋಗ್ಯ ತಪಾಸಣಾ ಶಿಬಿರ ನಡೆಯಿತು
ತಿಪಟೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಅಪೌಷ್ಠಿಕ ಮಕ್ಕಳ ಆರೋಗ್ಯ ತಪಾಸಣಾ ಶಿಬಿರ ನಡೆಯಿತು   

ತಿಪಟೂರು: ನಗರದ ತಾಲ್ಲೂಕು ಆಸ್ಪತ್ರೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಇಲಾಖೆ, ಸ್ತ್ರೀಶಕ್ತಿ ಒಕ್ಕೂಟ ಮತ್ತು ವೈಭವಿ ಆಸ್ಪತ್ರೆ ಸಹಯೋಗದಲ್ಲಿ ಅಪೌಷ್ಠಿಕ ಮಕ್ಕಳ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.

ಶಿಬಿರ ಉದ್ಘಾಟಿಸಿ ಮಾತನಾಡಿದ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಲೋಕೇಶ್, ಅಪೌಷ್ಠಿಕ ಮಕ್ಕಳ ಆರೋಗ್ಯ ತಪಾಸಣೆ ಮಾಡಿಸಲಾಗುತ್ತಿದೆ. ಇಲಾಖೆಯಲ್ಲಿ ಅಂಗನವಾಡಿ ಕೇಂದ್ರದಲ್ಲಿ ವಿತರಿಸುವ ಆಹಾರದಲ್ಲಿ ಅಪೌಷ್ಠಿಕ ಮಕ್ಕಳಿಗೆ ಒಂದೂವರೆ ಪಟ್ಟು ಆಹಾರ, ಹಾಲು ವಿತರಣೆ, ಕೋಳಿಮೊಟ್ಟೆಯನ್ನು ನಿಗದಿತವಾಗಿ ನೀಡುತ್ತಿದ್ದು, ಇಲಾಖೆ ಯೋಜನೆಗಳ ಸೌಲಭ್ಯಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ತಿಳಿಸಿದರು.

ತಾಲ್ಲೂಕು ಆರೋಗ್ಯಾಧಿಕಾರಿ ಡಾ.ರಾಧಿಕ ಮಾತನಾಡಿ, ಆರೋಗ್ಯ ಇಲಾಖೆಯಿಂದ ಅನುಷ್ಠಾನಗೊಳ್ಳುತ್ತಿರುವ ಅನಿಮಿಯ ಮುಕ್ತ ಭಾರತ ಕಾರ್ಯಕ್ರಮದಲ್ಲಿ ರಕ್ತಹೀನತೆಯಿಂದ ಬಳಲುತ್ತಿರುವ ಗರ್ಭಿಣಿ ಬಾಣಂತಿ ಹಾಗೂ ಹದಿಹರೆಯದ ಹೆಣ್ಣುಮಕ್ಕಳು ಹಾಗೂ ಮಕ್ಕಳ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ ಎಂದರು.

ADVERTISEMENT

ತಾಲ್ಲೂಕು ಆಸ್ಪತ್ರೆ ಆಡಳಿತಾಧಿಕಾರಿ ಶಿವಕುಮಾರ್ ಮಾತನಾಡಿ, ಮನೆಯಲ್ಲಿಯೇ ತಯಾರು ಮಾಡುವ ಮೊಳಕೆ ಕಾಳು ಹಾಗೂ ಸ್ಥಳೀಯವಾಗಿ ಸಿಗುವ ಸೊಪ್ಪು ತರಕಾರಿ ಮತ್ತು ಹಣ್ಣುಗಳನ್ನು ಯಥೇಚ್ಛವಾಗಿ ಉಪಯೋಗಿಸಬೇಕು ಎಂದು ತಿಳಿಸಿದರು.

ತಿಪಟೂರಿನ ವೈಭವಿ ಆಸ್ಪತ್ರೆ ವೈದ್ಯ ಮಧುಸೂಧನ್ ಮಾತನಾಡಿ, ಮಗು ಹುಟ್ಟಿದ ಅರ್ಧ ಗಂಟೆಯೊಳಗೆ ತಾಯಿ ಎದೆಹಾಲನ್ನು ಕೊಡುವುದು ಹಾಗೂ ಮನೆಯಲ್ಲಿ ತಯಾರಿಸಿದ ಆಹಾರ ನೀಡಬೇಕು. ಅಪೌಷ್ಠಿಕ ಮಕ್ಕಳಿಗೆ ಕಬ್ಬಿಣ ಮತ್ತು ಕ್ಯಾಲ್ಸಿಯಂ ಸಿರಪ್‌ಗಳನ್ನು ಉಚಿತವಾಗಿ ವಿತರಿಸಿದರು.

ಕಾರ್ಯಕ್ರಮದಲ್ಲಿ ಡಾ.ರವಿ, ಡಾ.ರಂಗನಾಥ್, ಮಕ್ಕಳ ತಜ್ಞರಾದ ಡಾ.ಮುಸ್ತಾಫ್ ಆರ್.ಬಿ.ಎಸ್.ಕೆ, ವೈದ್ಯಾಧಿಕಾರಿ ಡಾ.ರಾಜು ಹಾಗೂ ಸ್ತ್ರೀಶಕ್ತಿ ಒಕ್ಕೂಟದ ಅಧ್ಯಕ್ಷೆ ಎಂ.ಮಂಜುಳಾ, ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ದೀಪ ಹೆಬ್ಬಳ್ಳಿ, ಮೀನಾಕ್ಷಿ ಬಿ.ಬಟ್ಟೂರ, ಮೇಲ್ವಿಚಾರಕಿ ಬಿ.ಎನ್ ಪ್ರೇಮ, ಮಂಜುಳಾದೇವಿ, ಭಾಗ್ಯಮ್ಮ, ಅಂಗನವಾಡಿ ಕಾರ್ಯಕರ್ತೆಯರು, ಪೋಷಕರು, ಮಕ್ಕಳು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.