ADVERTISEMENT

ಚಿಕ್ಕನಾಯಕನಹಳ್ಳಿ: ಹೇಮಾವತಿ ನಾಲಾ ಕಾಮಗಾರಿ ಪರಿಶೀಲನೆ

ತಾಲ್ಲೂಕಿನ ಎಲ್ಲ ಕಾಮಗಾರಿ ತಡೆಯುವ ಎಚ್ಚರಿಕೆ ನೀಡಿದ್ದ ನೀರಾವರಿ ಹೋರಾಟಗಾರರು

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2026, 6:35 IST
Last Updated 24 ಫೆಬ್ರುವರಿ 2026, 6:35 IST
ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹೇಮಾವತಿ ನಾಲಾ ಕಾಮಗಾರಿ ಪರಿಶೀಲಿಸಿದ ಉಪವಿಭಾಗಾಧಿಕಾರಿ ಸಪ್ತಶ್ರೀ
ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹೇಮಾವತಿ ನಾಲಾ ಕಾಮಗಾರಿ ಪರಿಶೀಲಿಸಿದ ಉಪವಿಭಾಗಾಧಿಕಾರಿ ಸಪ್ತಶ್ರೀ   

ಚಿಕ್ಕನಾಯಕನಹಳ್ಳಿ: ಉಪವಿಭಾಗಾಧಿಕಾರಿ ಸಪ್ತಶ್ರೀ ಹಾಗೂ ತಹಶೀಲ್ದಾರ್ ಮಮತಾ ಎಂ. ಸೋಮವಾರ ತಾಲ್ಲೂಕಿನ ಹೇಮಾವತಿ ನಾಲಾ ಕಾಮಗಾರಿ ಪರಿಶೀಲಿಸಿದರು.

ತಾಲ್ಲೂಕಿಗೆ ಹರಿಯುವ ಹೇಮೆ ಕಾಮಗಾರಿ ತಡವಾಗುತ್ತಿರುವ ಹಿನ್ನೆಲೆ ತಾಲ್ಲೂಕಿನ ಎಲ್ಲ ಕಾಮಗಾರಿಗಳನ್ನು ತಡೆಯುತ್ತೇವೆ ಎಂದು ನೀರಾವರಿ ಹೋರಾಟಗಾರರ ಎಚ್ಚರಿಕೆ ನೀಡಿದ್ದರು.

ಗ್ಯಾರೇಹಳ್ಳಿ, ಬ್ಯಾಡರಹಳ್ಳಿ ಹಾಗೂ ಕೋಡಗಲ್ಲು ವ್ಯಾಪ್ತಿಯ ನಾಲಾ ಕಾಮಗಾರಿ ಪರಿಶೀಲಿಸಿ ಸ್ಥಳದಲ್ಲಿದ್ದ ಸಣ್ಣ ನೀರಾವರಿ ಇಲಾಖೆಯ ಎಂಜಿನಿಯರ್ ಪ್ರಭಾಕರ್ ಅವರಿಂದ ನಕ್ಷೆಯ ಮಾಹಿತಿ ಪಡೆದ ನಿಗದಿತ ಅವಧಿಯಲ್ಲಿ ಕೆಲಸ ಮುಗಿಸದ ಗುತ್ತಿಗೆದಾರರಿಗೆ ಉಪವಿಭಾಗಾಧಿಕಾರಿ ಸಪ್ತಶ್ರೀ ತರಾಟೆಗೆ ತೆಗೆದುಕೊಂಡರು.

ADVERTISEMENT

ಏಪ್ರಿಲ್ 31ರೊಳಗೆ ಕಾಮಗಾರಿ ಪೂರ್ಣಗೊಳಿಸುವ ಬಗ್ಗೆ ಸ್ಪಷ್ಟ ಕಾರ್ಯಸೂಚಿಯನ್ನು ಬುಧವಾರ ಬೆಳಿಗ್ಗೆ ರೈತರ ನಿಯೋಗಕ್ಕೆ ಸಲ್ಲಿಸುವಂತೆ ಸೂಚಿಸಿದರು.

11 ಕಿ.ಮೀ ಉದ್ದದ ನಾಲಾ ಕಾಮಗಾರಿಯನ್ನು 5-6 ವಿಭಾಗಗಳನ್ನಾಗಿ ವಿಂಗಡಿಸಿ, ಏಕಕಾಲದಲ್ಲಿ ಕೆಲಸ ಆರಂಭಿಸಲು ನಿರ್ದೇಶಿಸಿದರು. ಪ್ರತಿ ಸೋಮವಾರ ತಹಶೀಲ್ದಾರ್, ಎಂಜಿನಿಯರ್ ಹಾಗೂ ರೈತರ ಸಮ್ಮುಖದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಲು ತಿಳಿಸಿದರು.

ನೀರಾವರಿ ಹೋರಾಟಗಾರರ ಪ್ರಕಾರ ಹೇಮಾವತಿ ನಾಲೆಯ ಎಂಜಿನಿಯರ್‌ಗಳು ಸತತ ಎರಡು ತಿಂಗಳು ಕೆಲಸ ಮಾಡಿದರೆ ತಾಲ್ಲೂಕಿಗೆ ಮಂಜೂರು ಆಗಿರುವ 875 ಎಂಸಿಎಫ್‌ಟಿ ನೀರನ್ನು ತಾಲ್ಲೂಕಿನ 26 ಕೆರೆಗಳಿಗೂ ಹರಿಸಬಹುದಾಗಿದೆ.

ರೈತ ಹನುಮಂತಯ್ಯ ಮಾತನಾಡಿ, ಯೋಜನೆ ಆರಂಭವಾಗಿ 17 ವರ್ಷಗಳಾಗಿವೆ. ರಾಜಕೀಯ ನಾಯಕರನ್ನು ನಂಬಿ ನಮ್ಮ ಪಾಲಿನ ನೀರು ಪಡೆಯಲಾಗದೆ ಹೈರಾಣಾಗಿದ್ದೇವೆ. ಇನ್ನು ಮುಂದೆ ನಾವೇ ಒಗ್ಗಟ್ಟಾಗಿ ಕೆಲಸ ಮಾಡಿಸಿಕೊಳ್ಳುತ್ತೇವೆ ಎಂದರು.

ನೀರಾವರಿ ಹೋರಾಟಗಾರರ ಸಂಚಾಲಕ ಮಧು ಮಾತನಾಡಿ, ಒಟ್ಟು 13 ಸೇತುವೆಗಳಲ್ಲಿ ಕೇವಲ ಎರಡು ಮಾತ್ರ ಪೂರ್ಣಗೊಂಡಿವೆ. ಉಳಿದ 11 ಸೇತುವೆಗಳನ್ನು ರೈತರೇ ಮುಂದೆ ನಿಂತು ಹಂತಹಂತವಾಗಿ ಪೂರ್ಣಗೊಳಿಸಿಕೊಳ್ಳುತ್ತೇವೆ ಎಂದರು.

ಮಲ್ಲಿಕಾರ್ಜುನ ಭಟ್ಟರಹಳ್ಳಿ ಮಾತನಾಡಿ, ಜೂನ್‌ವರೆಗೆ ಕಾಲಹರಣ ಮಾಡುವುದು ಬೇಡ. ಏಪ್ರಿಲ್ ಅಂತ್ಯದೊಳಗೆ ಕೆಲಸ ಮುಗಿಯದಿದ್ದರೆ ತಾಲ್ಲೂಕಿನ ಇತರ ಯಾವುದೇ ಕಾಮಗಾರಿಗಳನ್ನು ಮಾಡಲು ಬಿಡುವುದಿಲ್ಲ ಎಂದು ಹೇಳಿದರು.

ಆಟೊ ಚಾಲಕರ ಸಂಘದ ಅಧ್ಯಕ್ಷ ಮಂಜುನಾಥ್ ಸಿ.ಎನ್, ಋಷಭೇಂದ್ರ, ರಾಮಲಿಂಗಯ್ಯ, ಕುಮಾರ್, ರಾಜೇಂದ್ರ ಕುಮಾರ್, ಬಸವರಾಜು ಸೇರಿದಂತೆ ನೂರಾರು ರೈತರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.