ADVERTISEMENT

ಹೇಮಾವತಿ ಎಕ್ಸ್‌ಪ್ರೆಸ್‌ ಲಿಂಕ್‌ ಕೆನಾಲ್‌ ಹೋರಾಟ ಬೇಡ: ವಿ.ಸೋಮಣ್ಣ

​ಪ್ರಜಾವಾಣಿ ವಾರ್ತೆ
Published 11 ಜೂನ್ 2025, 14:53 IST
Last Updated 11 ಜೂನ್ 2025, 14:53 IST
ಗುಬ್ಬಿ ತಾಲ್ಲೂಕಿನ ಸುಂಕಾಪುರಕ್ಕೆ ಬುಧವಾರ ಕೇಂದ್ರ ಜಲ ಶಕ್ತಿ, ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಭೇಟಿ ನೀಡಿ ಪರಿಶೀಲಿಸಿದರು. ಮಾಜಿ ಸಂಸದ ಜಿ.ಎಸ್‌.ಬಸವರಾಜು, ಮಾಜಿ ಸಚಿವ ಸೊಗಡು ಶಿವಣ್ಣ, ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಸಿ.ಆಂಜನಪ್ಪ ಇತರರು ಉಪಸ್ಥಿತರಿದ್ದರು
ಗುಬ್ಬಿ ತಾಲ್ಲೂಕಿನ ಸುಂಕಾಪುರಕ್ಕೆ ಬುಧವಾರ ಕೇಂದ್ರ ಜಲ ಶಕ್ತಿ, ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಭೇಟಿ ನೀಡಿ ಪರಿಶೀಲಿಸಿದರು. ಮಾಜಿ ಸಂಸದ ಜಿ.ಎಸ್‌.ಬಸವರಾಜು, ಮಾಜಿ ಸಚಿವ ಸೊಗಡು ಶಿವಣ್ಣ, ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಸಿ.ಆಂಜನಪ್ಪ ಇತರರು ಉಪಸ್ಥಿತರಿದ್ದರು   

ಗುಬ್ಬಿ (ತುಮಕೂರು): ಹೇಮಾವತಿ ಎಕ್ಸ್‌ಪ್ರೆಸ್‌ ಲಿಂಕ್‌ ಕೆನಾಲ್‌ ಕಾಮಗಾರಿ ಬಗ್ಗೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಜತೆಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುವ ತನಕ ಹೋರಾಟಗಾರರು ಪ್ರತಿಭಟನೆ ನಡೆಸದೆ, ಶಾಂತ ರೀತಿಯಿಂದ ವರ್ತಿಸಬೇಕು ಎಂದು ಕೇಂದ್ರ ಜಲ ಶಕ್ತಿ, ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಮನವಿ ಮಾಡಿದರು.

ತಾಲ್ಲೂಕಿನ ಸುಂಕಾಪುರದ ಬಳಿ ನಡೆಯುತ್ತಿರುವ ಕೆನಾಲ್‌ ನಿರ್ಮಾಣ ಕಾಮಗಾರಿ ಸ್ಥಳಕ್ಕೆ ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಯೋಜನೆ ಕುರಿತು ಅಧಿಕಾರಿಗಳಿಂದ ಅಗತ್ಯ ಮಾಹಿತಿ ಪಡೆದರು. ನಂತರ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು.

ಕಾನೂನು ಚೌಕಟ್ಟಿನಲ್ಲೂ ಇದಕ್ಕೆ ಬರೆ ಹಾಕಬೇಕಿದೆ. ಹೋರಾಟ ಮಾಡಿ ಎಷ್ಟು ಕೇಸು ಹಾಕಿಸಿಕೊಳ್ಳುವುದು. ಇದರಿಂದ ರೈತರಿಗೆ, ಹೋರಾಟಗಾರರಿಗೆ ತೊಂದರೆಯಾಗಲಿದೆ. ಅದಕ್ಕೆ ಅವಕಾಶ ಕೊಡಬಾರದು ಎಂದು ಮನವಿ ಮಾಡಿದರು.

ADVERTISEMENT

‘ಸರ್ಕಾರದ ಹಂತದಲ್ಲಿ ಚರ್ಚೆಯಾಗಿ ಒಂದು ನಿರ್ಧಾರ ಹೊರ ಬೀಳುವ ತನಕ ಕೆಲಸ ಆರಂಭಿಸಬಾರದು’ ಎಂದು ಅಧಿಕಾರಿಗಳಿಗೆ ನಿರ್ದೇಶಿಸಿದರು. ಹೋರಾಟಗಾರರು ಅಧಿಕಾರಿಗಳಿಗೆ ವೈಯಕ್ತಿಕವಾಗಿ ನಿಂದಿಸಬಾರದು ಎಂದರು.

ಯೋಜನೆ ಕಾರ್ಯರೂಪಕ್ಕೆ ಬರಬಾರದಿತ್ತು, ಯಾಕೆ ಜಾರಿಗೊಳಿಸಿದರು ಎಂಬುವುದು ಗೊತ್ತಿಲ್ಲ. ಇದೊಂದು ಕಪ್ಪು ಚುಕ್ಕೆ. ಈಗ ಸೃಷ್ಟಿಯಾಗಿರುವ ಗೊಂದಲ ಬಗೆಹರಿಸುವುದು ನಮ್ಮ ಕರ್ತವ್ಯ. ಸಾರ್ವಜನಿಕರು ಯಾವುದೇ ಅಂತೆ ಕಂತೆಗೆ ಬೆಲೆ ಕೊಡಬಾರದು. ನಮ್ಮ ಕೈಲಾದ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದರು.

ಸಮಸ್ಯೆಯನ್ನು ತಾಂತ್ರಿಕವಾಗಿ ಸರಿ ಪಡಿಸಬೇಕು. ಇದೊಂದು ಅವೈಜ್ಞಾನಿಕ ಯೋಜನೆಯಾಗಿದ್ದು, ಸಂಪೂರ್ಣವಾಗಿ ಸ್ಥಗಿತಗೊಳಿಸಬೇಕು. ಜಿಲ್ಲೆಯ ರೈತರ ಹಕ್ಕು ಕಿತ್ತುಕೊಳ್ಳಬಾರದು. ಮತ್ತೊಬ್ಬರನ್ನು ಸಂತೈಸಲು ರೈತರಿಗೆ ಮೋಸ ಮಾಡಬಾರದು. ಮುಖ್ಯಮಂತ್ರಿ, ಸಚಿವರು, ಸ್ಥಳೀಯ ಶಾಸಕರ ಜತೆಗೆ ಮತ್ತೊಮ್ಮೆ ಚರ್ಚಿಸಲಾಗುವುದು ಎಂದರು.

‘ಜಿಲ್ಲೆಯ ನೀರನ್ನು ಬೇರೆಯವರಿಗೆ ಕೊಡುವ ನೀಚ ಕೆಲಸ ಆಗಬಾರದು. ಈ ಭಾಗದ ಜನರಿಗೆ ಮೋಸ ಆಗಲು ಬಿಡುವುದಿಲ್ಲ. ರೈತರ ಕೂಗು, ಕಿಚ್ಚು, ನೋವು ಈಗಾಗಲೇ ವಿಧಾನಸೌಧಕ್ಕೆ ತಲುಪಿದೆ. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಎಲ್ಲ ವಿಚಾರ ತಿಳಿಸಲಾಗಿದೆ. ಅನ್ಯಾಯ, ಅಪಚಾರ ಮಾಡಬೇಡಿ. ಮುಂದಿನ ಪೀಳಿಗೆಗೆ ಶಾಪಗ್ರಸ್ತ ಆಗುವುದು ಬೇಡ ಎಂದಿದ್ದೇನೆ’ ಎಂದು ಹೇಳಿದರು.

ಸ್ಥಳಕ್ಕೆ ಬಂದಿದ್ದ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ತಾಂತ್ರಿಕ ಸಲಹೆಗಾರ ಜಯಪ್ರಕಾಶ್ ಜತೆಗೂ ಚರ್ಚಿಸಿದರು.

ಶಾಸಕ ಜಿ.ಬಿ.ಜ್ಯೋತಿಗಣೇಶ್‌, ಮಾಜಿ ಸಂಸದ ಜಿ.ಎಸ್‌.ಬಸವರಾಜು, ಮಾಜಿ ಸಚಿವ ಸೊಗಡು ಶಿವಣ್ಣ, ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಸಿ.ಆಂಜನಪ್ಪ, ಮುಖಂಡ ಎಸ್‌.ಡಿ.ದಿಲೀಪ್‌ಕುಮಾರ್‌ ಇತರರು ಹಾಜರಿದ್ದರು.

ನಿವಾರಣೆಯಾಗದ ಗೊಂದಲ

ಗುಬ್ಬಿ: ಹೇಮಾವತಿ ಎಕ್ಸ್‌ಪ್ರೆಸ್‌ ಲಿಂಕ್‌ ಕೆನಾಲ್‌ ಕಾಮಗಾರಿ ನಡೆದಿರುವ ಸುಂಕಾಪುರಕ್ಕೆ ಭೇಟಿ ನೀಡಿದ್ದ ಸಚಿವ ವಿ.ಸೋಮಣ್ಣ ಅವರು ರೈತರಲ್ಲಿ ಮೂಡಿದ್ದ ಗೊಂದಲ ನಿವಾರಿಸಿಲ್ಲ ಎಂದು ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎ.ಗೋವಿಂದರಾಜು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೇಂದ್ರದ ಸಚಿವರಾಗಿರುವುದರಿಂದ ಪ್ರತ್ಯೇಕವಾಗಿ ತಾಂತ್ರಿಕ ಸಮಿತಿ ರಚಿಸಿ ವರದಿ ಪಡೆದುಕೊಂಡು ಮುಂದಿನ ಕ್ರಮದ ಪ್ರಯತ್ನ ಮಾಡಬೇಕಿತ್ತು. ಈ ವರದಿ ಆಧಾರದ ಮೇಲೆ ರಾಜ್ಯ ಸರ್ಕಾರದ ಬಳಿಗೆ ನಿಯೋಗ ಕರೆದುಕೊಂಡು ಹೋಗುತ್ತೇನೆ ಎಂದು ಹೇಳಬೇಕಿತ್ತು. ಈ ಯೋಜನೆ ವೈಜ್ಞಾನಿಕವೇ ಇಲ್ಲವೇ ಅವೈಜ್ಞಾನಿಕವೇ ಎಂಬ ಗೊಂದಲ ನಿವಾರಣೆ ಮಾಡುವ ಪ್ರಯತ್ನ ಮಾಡಿಲ್ಲ ಎಂದು ಆರೋಪಿಸಿದರು. ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಸ್ಥಳೀಯ ರೈತರು ಹೋರಾಟಗಾರರ ಜತೆಗೆ ಚರ್ಚಿಸಿ ಅಭಿಪ್ರಾಯ ಪಡೆದುಕೊಳ್ಳಬೇಕಿತ್ತು ಎಂದಿದ್ದಾರೆ.

ಸೋಮಣ್ಣ ಕಾಲಿಗೆ ಬಿದ್ದ ರೈತ

ಕಡಬ ಕೆರೆಗೆ ಹೇಮಾವತಿ ನೀರು ಹರಿಸಿಲ್ಲ. ಇದರಿಂದ ಗ್ರಾಮದ ಕೊಳವೆ ಬಾವಿಗಳು ಬತ್ತಿ ಹೋಗಿವೆ. 1500 ಅಡಿ ಕೊರೆದರೂ ನೀರು ಬರುತ್ತಿಲ್ಲ. ಕೆರೆಗೆ ನೀರು ಹರಿಸಬೇಕು ಎಂದು ಕಡಬ ಗ್ರಾಮದ ರೈತ ಚಂದನ್‌ ಎಂಬುವರು ಸಚಿವ ವಿ.ಸೋಮಣ್ಣ ಕಾಲಿಗೆ ಬಿದ್ದು ಮನವಿ ಮಾಡಿದರು. ಎಕ್ಸ್‌ಪ್ರೆಸ್‌ ಲಿಂಕ್‌ ಕೆನಾಲ್‌ ಕಾಮಗಾರಿ ಕೂಡಲೇ ನಿಲ್ಲಿಸಬೇಕು. ಈ ಭಾಗದ ಕೊಳವೆ ಬಾವಿಯಲ್ಲಿ ನೀರು ಸಿಗುತ್ತಿಲ್ಲ. ಕಾಮಗಾರಿ ನಡೆದರೆ ಮತ್ತಷ್ಟು ಕಷ್ಟವಾಗಲಿದೆ ಎಂದು ಅಳಲು ತೋಡಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.