ADVERTISEMENT

ಶಿರಾಕ್ಕೆ ಹೇಮಾವತಿ ನೀರು ತಂದವರು ಯಾರು: ಆರಂಭವಾಗಿದೆ ನೀರಿನ ರಾಜಕಾರಣ

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಕೆ. ಮಂಜುನಾಥ್

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2020, 4:53 IST
Last Updated 13 ಆಗಸ್ಟ್ 2020, 4:53 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಶಿರಾ: ಕಾವೇರಿ ನೀರಾವರಿ ಸಲಹಾ ಸಮಿತಿ ತೀರ್ಮಾನದಂತೆ ಶಿರಾಕ್ಕೆ ಹೇಮಾವತಿ ನೀರು ಹರಿಯುತ್ತಿದೆಯೇ ಹೊರತು ಮಾಜಿ ಸಚಿವರ ಶ್ರಮದಿಂದ ಅಲ್ಲ. ನೀರು ಹರಿಯಲು ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ಸರ್ಕಾರವೇ ಕಾರಣ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಕೆ. ಮಂಜುನಾಥ್ ಹೇಳಿದರು.

ಹೇಮಾವತಿ ನೀರಿನ ವಿಚಾರದಲ್ಲಿ ಮಾಜಿ ಸಚಿವರು ಬಾಲಿಶ ಹೇಳಿಕೆ ನೀಡುತ್ತಿದ್ದಾರೆ. ಶಿರಾಕ್ಕೆ ಈಗ ನೀರು ಹರಿಯಲು ನಾನೇ ಕಾರಣ ಎಂದು ಹೇಳುತ್ತಿರುವುದು ಖಂಡನೀಯ ಎಂದು ತುಮುಲ್ ನಿರ್ದೇಶಕ ಎಸ್.ಆರ್. ಗೌಡ ಅವರೊಂದಿಗೆ ಬುಧವಾರ ನಡೆಸಿದ ಜಂಟಿ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್‌ ಮುಖಂಡ ಟಿ.ಬಿ.ಜಯಚಂದ್ರ ಅವರ ಹೆಸರು ಹೇಳದೆ ತರಾಟೆಗೆ ತೆಗೆದುಕೊಂಡರು.

‘ಮಾಜಿ ಸಚಿವರ ಹೇಳಿಕೆಗಳಿಂದ ತಾಲ್ಲೂಕಿಗೆ ಹರಿಯುವ ನೀರಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ರಾಜ್ಯ ಸರ್ಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರಿಗೆ ಶಿರಾ ತಾಲ್ಲೂಕಿನ ಹಿತಕಾಯುವುದು ಹೇಗೆ ಎಂದು ತಿಳಿದಿದೆ. ಜಿಲ್ಲೆಗೆ ನಿಗಧಿಯಾಗಿರುವ 24 ಟಿಎಂಸಿ ನೀರು ಈ ಬಾರಿ ಹರಿಯುವುದು ಖಚಿತ. ಜೊತೆಗೆ ಶಿರಾ ತಾಲ್ಲೂಕಿನ ಕೆರೆಗಳಿಗೆ ಈ ಬಾರಿ ಹೆಚ್ಚಿನ ನೀರು ಹರಿಯುವುದರಲ್ಲಿ ಯಾವುದೇ ಅನುಮಾನವಿಲ್ಲ. ಮಾಜಿ ಸಚಿವರು ಮೌನವಾಗಿದ್ದರೆ ನೀರು ಯಾವುದೇ ಅಡ್ಡಿ ಇಲ್ಲದೆ ಹರಿಯುತ್ತದೆ’ ಎಂದು ಕುಟುಕಿದರು.

ADVERTISEMENT

ಮಾಜಿ ಸಚಿವರು ಅಧಿಕಾರದಲ್ಲಿ ಇದ್ದ ಸಮಯದಲ್ಲಿ ಶಿರಾಕ್ಕೆ ಏಕೆ ಹೆಚ್ಚು ನೀರು ನಿಗದಿ ಮಾಡಿಸಲಿಲ್ಲ. ₹ 24 ಕೋಟಿ ವೆಚ್ಚದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳಿಂದ ಒಂದು ಲೀಟರ್ ನೀರನ್ನು ಸಹ ಯಾರು ಕುಡಿದಿಲ್ಲ. ಮದಲೂರು ಕೆರೆ ಹಾಗೂ ಬಹು ಗ್ರಾಮ ಯೋಜನೆಗಳಿಗೆ ಖರ್ಚಾದ ಹಣ ಎಷ್ಟು ಇದರಿಂದ ಯಾರಿಗೆ ಅನುಕೂಲವಾಗಿದೆ ಎನ್ನುವ ಬಗ್ಗೆ ತನಿಖೆಯಾಗಬೇಕು ಎಂದರು.

ಬಿಜೆಪಿ ನಗರ ಮೋರ್ಚಾ ಅಧ್ಯಕ್ಷ ವಿಜಯರಾಜು, ಗ್ರಾಮಾಂತರ ಮೋರ್ಚಾ ಅಧ್ಯಕ್ಷ ರಂಗಸ್ವಾಮಿ, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ರಂಗನಾಥ ಗೌಡ, ಎಪಿಎಂಸಿ ಉಪಾಧ್ಯಕ್ಷ ರಾಮರಾಜು, ಮುಖಂಡರಾದ ಬಸವರಾಜು, ಪಡಿ ರಮೇಶ್, ಕೃಷ್ಣಮೂರ್ತಿ, ಲಕ್ಷ್ಮಿನಾರಾಯಣ, ಲತಾ ಕೃಷ್ಣ, ಲಲಿತಮ್ಮ, ಧನುಷ್, ರಮೇಶ್ ಬಾಬು, ಸಂತೋಷ್, ನಿರಂಜನ್, ಗಿರಿಧರ್, ಶ್ಯಾಮ್, ನಿವೃತ್ತ ಇಂಜಿನಿಯರ್ ಜಯರಾಮಯ್ಯ ಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.