ADVERTISEMENT

ಕೆರೆಗೆ ನೀರು ಹರಿಸಲು ಒತ್ತಾಯ: ಆ. 21ರಿಂದ ಮದಲೂರಿನಿಂದ ಪಾದಯಾತ್ರೆ

ಮದಲೂರು ಕೆರೆಗೆ ನೀರು ಹರಿಸಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2021, 6:28 IST
Last Updated 12 ಆಗಸ್ಟ್ 2021, 6:28 IST
ಜಯಚಂದ್ರ
ಜಯಚಂದ್ರ   

ಶಿರಾ: ಮದಲೂರು ಕೆರೆಗೆ ನೀರು ಹರಿಸಲು ಅಡ್ಡಿಪಡಿಸುತ್ತಿರುವ ಸಚಿವ ಜೆ.ಸಿ.ಮಾಧುಸ್ವಾಮಿ ಕ್ರಮ ವಿರೋಧಿಸಿ ಹಾಗೂ ಸ್ಥಳೀಯ ಜನಪ್ರತಿನಿಧಿಗಳ ವೈಫಲ್ಯ ಖಂಡಿಸಿ ಆಗಸ್ಟ್‌ 21ರಂದು ಮದಲೂರು ಕೆರೆಯಿಂದ ತುಮಕೂರು ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ನಡೆಸಲಾಗುವುದು ಎಂದು ಕಾಂಗ್ರೆಸ್ ಮುಖಂಡ ಟಿ.ಬಿ.ಜಯಚಂದ್ರ ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮದಲೂರು ಕೆರೆಯಿಂದ ತುಮಕೂರು ಜಿಲ್ಲಾಧಿಕಾರಿ ಕಚೇರಿ 63 ಕಿ.ಮೀ ದೂರವಿದೆ. ನಿತ್ಯ 21 ಕಿ.ಮೀ ನಂತೆ ಮೂರು ದಿನ ಪಾದಯಾತ್ರೆ ನಡೆಸಲಾಗುವುದು. 23 ರಂದು ನೀರು ಹರಿಸಲು ಒತ್ತಾಯಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗುವುದು. ಸರ್ಕಾರ ಬೇಡಿಕೆಗೆ ಸ್ಪಂದಿಸದಿದ್ದರೆ ಬೆಂಗಳೂರಿನವರೆಗೆ ಪಾದಯಾತ್ರೆ ಮುಂದುವರಿಸಲಾಗುವುದು
ಎಂದರು.

ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಮದಲೂರು ಕೆರೆಗೆ ನೀರು ಹರಿಸಿದರೆ ಜೈಲಿಗೆ ಹಾಕುವುದಾಗಿ ಹೇಳುತ್ತಾರೆ. ಸಭೆಯಲ್ಲಿ ತುಟಿ ಬಿಚ್ಚದೆ ಮೌನವಾಗಿ ಕುಳಿತಿದ್ದ ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ಹಾಗೂ ವಿಧಾನ ಪರಿಷತ್‌ ಸದಸ್ಯ ಚಿದಾನಂದ ಎಂ.ಗೌಡ ನಗರಕ್ಕೆ ಬಂದು ನೀರಿಗಾಗಿ ಜೈಲಿಗೆ ಮೊದಲು‌ ಹೋಗುವರು ನಾವು ಎಂದು ಹೇಳಿ ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ದೂರಿದರು.

ADVERTISEMENT

ಮದಲೂರು ಕೆರೆಗೆ ನೀರು ನಿಗದಿ ಆಗಿದೆ. ಇದು ಸಚಿವ ಹಾಗೂ ಶಾಸಕರಿಗೆ ಆರ್ಥವಾಗುತ್ತಿಲ್ಲ. ನಾವು ಭಿಕ್ಷೆ ಬೇಡುತ್ತಿಲ್ಲ. ನ್ಯಾಯ ಬದ್ಧವಾದ ಹಕ್ಕು ಕೇಳುತ್ತಿದ್ದೇವೆ ಎಂದರು.

ನೀರಿಗಾಗಿ ಎಂತಹ ಹೋರಾಟಕ್ಕೂ ಸಿದ್ಧವಿದ್ದೇವೆ. ಮದಲೂರು ಕೆರೆ ಹೆಸರು ಹೇಳಿ ತಾಲ್ಲೂಕಿಗೆ ಬರುವ ಭದ್ರಾ ಮೇಲ್ದಂಡೆ, ಎತ್ತಿನಹೊಳೆ ಹಾಗೂ ಹೇಮಾವತಿ ನೀರು ಕಬಳಿಸಲಾಗುತ್ತಿದೆ ಎಂದು ಆರೋಪಿಸಿದರು.

‘ಭದ್ರಾ ನನ್ನ ಕನಸಿನ ಕೂಸು, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಅವರ ಜೊತೆ ಸೇರಿ ತುಮಕೂರು ನಾಲೆಯನ್ನು ರೂಪಿಸಲಾಯಿತು. ತಾಲ್ಲೂಕಿಗೆ ಬರುವ ಹೇಮಾವತಿ ನೀರು ಸಾಲುವುದಿಲ್ಲ ಎಂದು ಭದ್ರಾ ಮೇಲ್ದಂಡೆ ಹಾಗೂ ಎತ್ತಿನ ಹೊಳೆ ಯೋಜನೆಯನ್ನು ನಗರಕ್ಕೆ ತರಲಾಗುತ್ತಿದೆ’
ಎಂದರು.

ಜಿಲ್ಲೆಯಲ್ಲಿ ಕುಡಿಯುವ ನೀರಿಗೆ 125 ಕೆರೆಗಳಿಗೆ ನೀರು ನಿಗದಿ ಆಗಿದೆ. ಆದರೆ 300 ಕೆರೆಗಳಿಗೆ ಅನಧಿಕೃತವಾಗಿ ನೀರು ಹರಿಸಲಾಗುತ್ತಿದೆ. ಕಾನೂನು ಪಾಲನೆ ಮಾಡುವ ಸಚಿವರು ಮೊದಲು ನಿಗದಿ ಆಗಿರುವ ಕಳ್ಳಂಬೆಳ್ಳ, ಶಿರಾ, ಮದಲೂರು ಕೆರೆ ಸೇರಿದಂತೆ ಜಿಲ್ಲೆಯ 125 ಕೆರೆಗಳಿಗೆ ನೀರು ಹರಿಸಲಿ. ನಂತರ ಅನಧಿಕೃತ ಕೆರೆಗಳಿಗೆ ನೀರು ಹರಿಸಲಿ ಎಂದು ಸವಾಲು ಹಾಕಿದರು.

ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಅವರಿಗೆ ನೀರಾವರಿ
ಬಗ್ಗೆ ಹೆಚ್ಚಿನ ಕಾಳಜಿ ಇದೆ. ಅವರ ಜೊತೆ ಹಲವು ಬಾರಿ ನೀರಾವರಿ ವಿಚಾರವಾಗಿ ಚರ್ಚಿಸಲಾಗಿದೆ
ಎಂದರು

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬರಗೂರು ನಟರಾಜು, ಪಿ.ಆರ್.ಮಂಜುನಾಥ್, ಮುಖಂಡರಾದ ಡಿ.ಸಿ.ಆಶೋಕ್, ಬಿ.ಎಸ್.ಸತ್ಯನಾರಾಯಣ, ಜಿ.ಎಸ್.ರವಿ, ಅಮಾನುಲ್ಲಾ ಖಾನ್, ಹೆಂಜಾರಪ್ಪ, ಅರೇಹಳ್ಳಿ ರಮೇಶ್, ಕಾಲೇಗೌಡ, ಕೋಟೆ ಲೋಕೇಶ್, ನರೇಶ್ ಗೌಡ, ಶ್ರೀನಿವಾಸಬಾಬು, ದೇವರಾಜು, ಹೆಂಜಾರಪ್ಪ, ಬಾಲೇನಹಳ್ಳಿ ಪ್ರಕಾಶ್, ಶೇಷಾನಾಯ್ಕ, ಲಕ್ಷ್ಮಿದೇವಮ್ಮ, ರೇಖಾ, ಸರೋಜಮ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.