ADVERTISEMENT

ಶಾಸಕರೊಂದಿಗೆ ಚರ್ಚೆ: ಮುಂದುವರೆದ ಧರಣಿ

ಹುಳಿಯಾರಿನ ತ್ಯಾಜ್ಯವನ್ನು ಸದ್ಯಕ್ಕೆ ಚಿ.ನಾ.ಹಳ್ಳಿ ಘಟಕಕ್ಕೆ ಹಾಕಲು ಶಾಸಕ ಸೂಚನೆ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2025, 4:58 IST
Last Updated 29 ಅಕ್ಟೋಬರ್ 2025, 4:58 IST

ಹುಳಿಯಾರು: ​ಸಂತೆ ಸ್ಥಳಾಂತರ ಹಾಗೂ ಕಸ ವಿಲೇವಾರಿ ಘಟಕಕ್ಕೆ ಸೂಕ್ತ ಜಾಗ ಗುರುತಿಸುವಂತೆ ಒತ್ತಾಯಿಸಿ ರೈತ ಸಂಘ ನಡೆಸುತ್ತಿರುವ ಅಹೋರಾತ್ರಿ ಧರಣಿ ಮಂಗಳವಾರ 20ನೇ ದಿನಕ್ಕೆ ಕಾಲಿಟ್ಟಿದೆ. ಶಾಸಕ ಸಿ.ಬಿ. ಸುರೇಶ್ ಬಾಬು ಸ್ಥಳಕ್ಕೆ ಭೇಟಿ ನೀಡಿ ಧರಣಿನಿರತರೊಂದಿಗೆ ಚರ್ಚಿಸಿದ್ದಾರೆ.

ರೈತ ಸಂಘದ ಪ್ರಮುಖ ಬೇಡಿಕೆಗಳಾದ ಸಂತೆ ಸ್ಥಳಾಂತರ ಮತ್ತು ಕಸ ವಿಲೇವಾರಿ ಘಟಕಕ್ಕೆ ಶಾಶ್ವತ ಜಾಗ ಗುರುತಿಸುವ ಬಗ್ಗೆ ಶಾಸಕರು ಸೂಕ್ತ ನಿರ್ದೇಶನ ನೀಡಿದರು. ಎಪಿಎಂಸಿ ನಿರ್ದೇಶಕರೊಂದಿಗೆ ತಾವು ಪತ್ರ ನೀಡಿ ಮಾತನಾಡಿದ್ದು, ಸಾರ್ವಜನಿಕರ ಅನುಕೂಲಕ್ಕಾಗಿ ಎಪಿಎಂಸಿ ಆವರಣದಲ್ಲಿ ಸಂತೆ ಸ್ಥಳಾಂತರಿಸಲು ಒಪ್ಪಿಗೆ ಪಡೆಯಲಾಗಿದೆ. ಅಲ್ಲಿನ ಸ್ಥಳ ಸ್ವಚ್ಛತೆ ಕಾರ್ಯ ಆರಂಭವಾಗಿದೆ ಎಂದು ಶಾಸಕರು ತಿಳಿಸಿದರು.

​ಕಸ ವಿಲೇವಾರಿ ವ್ಯವಸ್ಥೆ: ಕಸ ವಿಲೇವಾರಿ ಘಟಕಕ್ಕೆ ಶಾಶ್ವತ ಜಾಗ ಗುರುತಿಸುವಲ್ಲಿ ಗ್ರಾಮಸ್ಥರ ವಿರೋಧದಿಂದ ತಡವಾಗುತ್ತಿರುವುದರಿಂದ ತಾತ್ಕಾಲಿಕವಾಗಿ ಚಿಕ್ಕನಾಯಕನಹಳ್ಳಿಯಲ್ಲಿರುವ ತ್ಯಾಜ್ಯ ವಿಲೇವಾರಿ ಘಟಕ ಜಾಗ ವಿಸ್ತರಿಸಿ ಅಲ್ಲಿಗೆ ಕಸ ಹಾಕಲು ವ್ಯವಸ್ಥೆ ಮಾಡಲಾಗಿದೆ ಎಂದರು.

ADVERTISEMENT

ಪಟ್ಟಣ ಪಂಚಾಯಿತಿಯವರು ತಕ್ಷಣವೇ ಹೆಚ್ಚಿನ ಸಿಬ್ಬಂದಿ ನೇಮಿಸಿ ಎಲ್ಲ ರಸ್ತೆ ಮತ್ತು ಚರಂಡಿಗಳನ್ನು ಸ್ವಚ್ಛಗೊಳಿಸಿ, ಈ ಕಸವನ್ನು ಚಿಕ್ಕನಾಯಕನಹಳ್ಳಿಯ ತಾತ್ಕಾಲಿಕ ಜಾಗಕ್ಕೆ ಹಾಕುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಶಾಶ್ವತ ಜಾಗದ ಹುಡುಕಾಟದಲ್ಲಿ ತಹಶೀಲ್ದಾರ್ ಅವರು ದಸೂಡಿ ಭಾಗದ ಸರ್ವೆ ನಂಬರ್ 201ರಲ್ಲಿ ಜಾಗ ಪರಿಶೀಲಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

ಬಹುತೇಕ ಬೇಡಿಕೆಗಳು ಈಡೇರಿರುವ ಹಿನ್ನೆಲೆಯಲ್ಲಿ, ಪ್ರತಿಭಟನೆ ಹಿಂಪಡೆಯುವಂತೆ ಶಾಸಕ ಸಿ.ಬಿ. ಸುರೇಶ್ ಬಾಬು ರೈತ ಸಂಘದ ಮುಖಂಡರಿಗೆ ಮನವಿ ಮಾಡಿದರು. ಸುದೀರ್ಘ ಚರ್ಚೆಯ ನಂತರ ಪ್ರತಿಕ್ರಿಯಿಸಿದ ರೈತ ಸಂಘದ ಅಧ್ಯಕ್ಷ ಚಂದ್ರಪ್ಪ, ‘ಶಾಸಕರ ಮಾತಿಗೆ ಸಹಮತವಿದೆ. ಆದರೆ ಕಸ ವಿಲೇವಾರಿ ಘಟಕಕ್ಕೆ ಶಾಶ್ವತ ಜಾಗ ಗುರುತಿಸಿ, ಆದೇಶ ಹೊರಡಿಸುವವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

​ರೈತ ಸಂಘದ ಮೂರು ಬೇಡಿಕೆಗಳಲ್ಲಿ ಎರಡನ್ನು (ಸಂತೆ ಸ್ಥಳಾಂತರ, ಶೌಚಾಲಯ ಉದ್ಘಾಟನೆ) ಪೂರೈಸಿದ್ದರೂ, ತ್ಯಾಜ್ಯ ವಿಲೇವಾರಿ ಘಟಕಕ್ಕೆ ಶಾಶ್ವತ ಜಾಗದ ಆದೇಶಕ್ಕಾಗಿ ಧರಣಿ ಮುಂದುವರೆಸುವ ನಿರ್ಧಾರ ತೆಗೆದುಕೊಂಡಿದೆ.

​ತಹಶೀಲ್ದಾರ್ ಪುರಂದರ ಸೇರಿದಂತೆ ಕಂದಾಯ ಇಲಾಖೆ ಅಧಿಕಾರಿಗಳು, ಪಟ್ಟಣ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.