ADVERTISEMENT

ನಾನೂ ರೈತ; ಸುಳ್ಳು ಹೇಳದಿರಿ

ಕೊರಟಗೆರೆ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆ; ಶಾಸಕ ಪರಮೇಶ್ವರ್ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 5 ಜೂನ್ 2020, 11:11 IST
Last Updated 5 ಜೂನ್ 2020, 11:11 IST
ಡಾ.ಜಿ.ಪರಮೇಶ್ವರ
ಡಾ.ಜಿ.ಪರಮೇಶ್ವರ   

ಕೊರಟಗೆರೆ: ತಾಲ್ಲೂಕು ಪಂಚಾಯಿತಿಯಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ಸಮರ್ಪಕವಾಗಿ ಉತ್ತರ ನೀಡದ ಅಧಿಕಾರಿಗಳನ್ನು ಶಾಸಕ ಡಾ.ಜಿ.ಪರಮೇಶ್ವರ ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

‘ತಾಲ್ಲೂಕಿಗೆ ಯಾವ ತೋಟಗಾರಿಕೆ ಬೆಳೆ ಸೂಕ್ತ ಹಾಗೂ ರೈತರು ಆರ್ಥಿಕವಾಗಿ ಸಬಲರಾಗಬಹುದು ಎಂದು ಸರ್ವೆ ಮಾಡಿದ್ದೀರಿ. ಕೇವಲ ಗುರಿ, ಸಾಧನೆ ಎಂಬ ನಕಲಿ ಅಂಕಿಅಂಶ ನನಗೆ ಬೇಕಾ ಗಿಲ್ಲ’ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಯನ್ನು ಸಭೆ ಆರಂಭ ದಲ್ಲಿಯೇ ತರಾಟೆಗೆ ತೆಗೆದು ಕೊಂಡರು.

‘ನಾನು ಒಬ್ಬ ರೈತ. ನನಗೂ ವ್ಯವಸಾಯದ ಗಂಧಗಾಳಿ ಗೊತ್ತಿದೆ. ಸುಳ್ಳು ಹೇಳಲು ಬರಬೇಡಿ. ಪ್ರತಿ ಸಭೆಯಲ್ಲೂ ಅಧಿಕಾರಿಗಳು ಕೇವಲ ಸರ್ಕಾರ ಸೂಚಿಸಿರುವ ಗುರಿ ಮತ್ತು ಸಾಧನೆಯ ಅಂಶಗಳ ದಾಖಲೆ ತರುತ್ತಿದ್ದೀರಿ. ಅದು ವಾಸ್ತವದಲ್ಲಿ ಆಗಿರುವುದಿಲ್ಲ. ಬರೀ ಕಥೆ ಹೇಳುವುದೇ ಆಗಿದೆ’ ಎಂದು ಸಿಡಿಮಿಡಿಗೊಂಡರು.

ADVERTISEMENT

ತಹಶೀಲ್ದಾರ್ ಬಿ.ಎಂ.ಗೋವಿಂದರಾಜು, ಎಸ್.ಶಿವಪ್ರಕಾಶ್, ವೆಂಕಟಪ್ಪ, ನಜೀಮಾಭಿ, ಕೆಂಪರಾಮಯ್ಯ, ಕೆಂಪಣ್ಣ, ಬೋರಣ್ಣ, ಜ್ಯೋತಿ, ಶಾಮಲಾ, ಟಿ.ಸಿ.ರಾಮಯ್ಯ, ಈರಣ್ಣ, ನರಸಮ್ಮ ಇದ್ದರು.

ಗಣಿಗಾರಿಕೆ; ಕ್ರಮಕ್ಕೆ ಸೂಚನೆ

ಗ್ರಾಮದ ಸಮೀಪದ ಗಲ್ಲು ಗಣಿಗಾರಿಕೆ ನಡೆಯುತ್ತಿದೆ. ಇಲ್ಲಿ ಅಕ್ರಮವಾಗಿ ಕಲ್ಲು ಸಿಡಿಸಲಾಗುತ್ತಿದೆ. ಇದರಿಂದ ಗ್ರಾಮಕ್ಕೆ ತೊಂದರೆ ಆಗುತ್ತಿದೆ ಎಂದು ಜಟ್ಟಿ ಅಗ್ರಹಾರ ಗ್ರಾಮಸ್ಥರು ದೂರಿದ ಹಿನ್ನೆಲೆಯಲ್ಲಿ ‘ಅಕ್ರಮ ಎಸಗುವವರ ವಿರುದ್ಧ ಕ್ರಮ ವಹಿಸುವಂತೆ ತಹಶೀಲ್ದಾರ್‌ಗೆ ಪರಮೇಶ್ವರ ಸೂಚಿಸಿದರು.

ಪಂಚಾಯಿತಿಯಲ್ಲಿ ನಡೆದ ಸಭೆಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು. ಕಲ್ಲುಗಣಿಗಾರಿಕೆಯಿಂದ ಮಾಲಿನ್ಯ ಉಂಟಾಗುತ್ತಿದೆ. ಈ ಬಗ್ಗೆ ಪಂಚಾಯಿತಿ ಅಧಿಕಾರಿಗಳು ಕ್ರಮ ವಹಿಸುತ್ತಿಲ್ಲ. ಗ್ರಾಮದ ಸಮೀಪದ ಪೆಟ್ರೋಲ್ ಬಂಕಿಗೆ ಅನಧಿಕೃತವಾಗಿ ಕುಡಿಯುವ ನೀರಿನ ಸೌಲಭ್ಯ ನೀಡಲಾಗಿದೆ ಎಂದು ಜನರು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.