
ತುಮಕೂರು: ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆ ಸಂಬಂಧ ರಚಿಸಿರುವ ಏಳನೇ ವೇತನ ಆಯೋಗ ಮುಂದಿನ ನವೆಂಬರ್ ಒಳಗೆ ವರದಿ ಸಲ್ಲಿಸಲಿದ್ದು, ಅದರ ಜಾರಿಗೆ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ ಭರವಸೆ ನೀಡಿದರು.
ನಗರದ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಶುಕ್ರವಾರ ಆರಂಭವಾದ ಸರ್ಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಮೂರು ದಿನಗಳ ಕಾಲ ಕ್ರೀಡಾಕೂಟ ನಡೆಯಲಿದೆ.
ನವೆಂಬರ್ ಒಳಗೆ ವರದಿ ಸಲ್ಲಿಸುವಂತೆ ವೇತನ ಆಯೋಗಕ್ಕೆ ಸೂಚಿಸಲಾಗಿದೆ. ವರದಿ ಬಂದ ನಂತರ ನಿರ್ಧಾರ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗಾಗಲೇ ಭರವಸೆ ನೀಡಿದ್ದಾರೆ. ವೇತನ ಆಯೋಗ ಜಾರಿಯಾಗಲಿದ್ದು, ನೌಕರರು ಆತಂಕಪಡುವ ಅಗತ್ಯವಿಲ್ಲ ಎಂದು ಅಭಯ ನೀಡಿದರು.
ಹೊಸ ಪಿಂಚಣಿ ಯೋಜನೆ (ಎನ್‌ಪಿಎಸ್) ರದ್ದುಪಡಿಸಿ ಹಳೆಯ ಪಿಂಚಣಿ ಯೋಜನೆ (ಒಪಿಎಸ್) ಜಾರಿಗೆ ತರಲು ಸರ್ಕಾರ ಬದ್ಧವಾಗಿದ್ದು, ವರದಿ ನೀಡಲು ಸಮಿತಿ ರಚಿಸಲಾಗಿದೆ. ವರದಿ ಬಂದ ನಂತರ ಜಾರಿ ಮಾಡಲಾಗುವುದು. ವಿಧಾನಸಭೆ ಚುನಾವಣೆ ಪ್ರಣಾಳಿಕೆಯಲ್ಲಿ ಒಪಿಎಸ್ ಜಾರಿ ಮಾಡುವುದಾಗಿ ಕಾಂಗ್ರೆಸ್ ಭರವಸೆ ನೀಡಿದೆ. ಅದರಂತೆ ಸರ್ಕಾರ ನಡೆದುಕೊಳ್ಳಲಿದ್ದು, ಜಾರಿ ಮಾಡಿಯೇ ತೀರುತ್ತೇವೆ. ಎಲ್ಲಾ ಸರ್ಕಾರಿ ನೌಕರರು ಹಾಗೂ ಅವರ ಕುಟುಂಬದವರಿಗೆ ಉಚಿತವಾಗಿ ಆರೋಗ್ಯ ಸೇವೆ ಒದಗಿಸುವ ‘ಕರ್ನಾಟಕ ಆರೋಗ್ಯ ಸಂಜೀವಿನಿ’ ಯೋಜನೆಯೂ ಶೀಘ್ರವೇ ಜಾರಿಯಾಗಲಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ 5.25 ಲಕ್ಷ ಸರ್ಕಾರಿ ನೌಕರರು ಇದ್ದು, ಇನ್ನೂ 2.50 ಲಕ್ಷ ಹುದ್ದೆಗಳು ಖಾಲಿ ಉಳಿದಿವೆ. ಚುನಾವಣೆ ಪ್ರಣಾಳಿಕೆಯಲ್ಲಿ ಈ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಭರವಸೆ ನೀಡಿದ್ದು, ಮುಂದಿನ ಐದು ವರ್ಷಗಳಲ್ಲಿ ನೇಮಕ ಮಾಡಲಾಗುವುದು ಎಂದರು.
ರಾಜ್ಯದ ಆಡಳಿತ ವ್ಯವಸ್ಥೆ ದೇಶದಲ್ಲೇ ಮಾದರಿಯಾಗಿದ್ದು, ‘ಕರ್ನಾಟಕ ಮಾದರಿ’ ಎನ್ನುವಂತಾಗಿದೆ. ಅದಕ್ಕೆ ನೌಕರ ವರ್ಗದ ಬದ್ಧತೆ ಕಾರಣವಾಗಿದೆ. ದಕ್ಷತೆ, ಪ್ರಾಮಾಣಿಕತೆಯಿಂದ ಕೆಲಸ ಮಾಡಿದರೆ ಸರ್ಕಾರಕ್ಕೆ ಒಳ್ಳೆಯ ಹೆಸರು ಬರುತ್ತದೆ. ಕ್ರೀಡೆ ನೌಕರರ ಜೀವನದ ಒಂದು ಭಾಗವಾದರೆ ಆರೋಗ್ಯ ಸುಧಾರಿಸಿ ಸರಿಯಾಗಿ ಕರ್ತವ್ಯ ನಿರ್ವಹಿಸಲು ಸಾಧ್ಯವಾಗುತ್ತದೆ. ಇಂತಹ ಸದುದ್ದೇಶದಿಂದಲೇ ಕ್ರೀಡಾಕೂಟಕ್ಕೆ ರಾಜ್ಯ ಸರ್ಕಾರ ₹3.50 ಕೋಟಿ ಹಣ ನೀಡಿದೆ ಎಂದು ಹೇಳಿದರು.
ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ, ‘ಏಳನೇ ವೇತನ ಆಯೋಗದ ವರದಿ ಬಂದ ತಕ್ಷಣ ಜಾರಿ ಮಾಡಬೇಕು. ಹೊಸ ಪಿಂಚಣಿ ಯೋಜನೆ ರದ್ದುಪಡಿಸಿ ಹಳೆಯ ಪಿಂಚಣಿ ಯೋಜನೆ ಜಾರಿ ಮಾಡಬೇಕು. ತುಟ್ಟಿ ಭತ್ಯೆಯನ್ನು ಶೇ 23ರಷ್ಟು ಹೆಚ್ಚಳ ಮಾಡಬೇಕು’ ಎಂದು ಒತ್ತಾಯಿಸಿದರು.
ಶಾಸಕರಾದ ಎಂ.ಟಿ.ಕೃಷ್ಣಪ್ಪ, ಬಿ.ಸುರೇಶ್‌ಗೌಡ, ಜಿ.ಬಿ.ಜೋತಿಗಣೇಶ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕಾರ್ಯದರ್ಶಿ ತುಲಸಿ ಮುದ್ದಿನೇನಿ, ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್, ಜಿ.ಪಂ ಸಿಇಒ ಜಿ.ಪ್ರಭು, ಮಹಾನಗರ ಪಾಲಿಕೆ ಆಯುಕ್ತೆ ಬಿ.ವಿ.ಅಶ್ವಿಜ, ಎಸ್ಪಿ ಕೆ.ವಿ.ಅಶೋಕ್, ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎನ್.ನರಸಿಂಹರಾಜು ಮೊದಲಾದವರು ಉಪಸ್ಥಿತರಿದ್ದರು.
‘ಜಿಎಸ್‌ಟಿ ಪಾಲು ಹೆಚ್ಚಿಸಬೇಕು’
ಜಿಎಸ್‌ಟಿ ಸಂಗ್ರಹದಲ್ಲಿ ರಾಜ್ಯ ಎರಡನೇ ಸ್ಥಾನದಲ್ಲಿ ಇದ್ದರೂ ನಮಗೆ ಬರಬೇಕಾದ ಶೇಕಡಾವಾರು ಪಾಲು ಸರಿಯಾಗಿ ಬರುತ್ತಿಲ್ಲ. ರಾಜ್ಯದ ಪಾಲು ಹೆಚ್ಚಿಸಬೇಕು ಎಂದು ಸಚಿವ ಜಿ.ಪರಮೇಶ್ವರ ಆಗ್ರಹಿಸಿದರು. ಜಿಎಸ್‌ಟಿ ಸಂಗ್ರಹಿಸಿ ಕೇಂದ್ರಕ್ಕೆ ನೀಡುತ್ತಿದ್ದರೂ ಅದಕ್ಕೆ ಅನುಗುಣವಾಗಿ ರಾಜ್ಯಗಳಿಗೆ ಹಂಚಿಕೆ ಮಾಡುತ್ತಿಲ್ಲ. ತಾರತಮ್ಯ ಮಾಡುತ್ತಿರುವುದನ್ನು ಕೇಂದ್ರ ಸರ್ಕಾರ ಅರ್ಥಮಾಡಿಕೊಂಡು ಸರಿಪಡಿಸಬೇಕು ಎಂದು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.