ADVERTISEMENT

ಬರಗೂರು ‘ತೊಟ್ಟಿಲು’ ಉದ್ಘಾಟನೆ

ಹುಟ್ಟಿದ ಮನೆಗೆ ಮ್ಯೂಸಿಯಂ ಸ್ಪರ್ಶ: ಅಭಿಮಾನಿಗಳ ಹರ್ಷ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2023, 6:17 IST
Last Updated 16 ಫೆಬ್ರುವರಿ 2023, 6:17 IST
ಶಿರಾ ತಾಲ್ಲೂಕಿನ ಬರಗೂರು ಗ್ರಾಮದಲ್ಲಿ ಬುಧವಾರ ಬರಗೂರು ರಾಮಚಂದ್ರಪ್ಪ ಅವರ ಹುಟ್ಟಿದ ಮನೆ ಮಿನಿ ಮ್ಯೂಸಿಯಂ ಆದ ‘ತೊಟ್ಟಿಲು’ ಉದ್ಘಾಟನಾ ಸಮಾರಂಭದಲ್ಲಿ ನಟ ಸುಂದರರಾಜ್ ಮಾತನಾಡಿದರು
ಶಿರಾ ತಾಲ್ಲೂಕಿನ ಬರಗೂರು ಗ್ರಾಮದಲ್ಲಿ ಬುಧವಾರ ಬರಗೂರು ರಾಮಚಂದ್ರಪ್ಪ ಅವರ ಹುಟ್ಟಿದ ಮನೆ ಮಿನಿ ಮ್ಯೂಸಿಯಂ ಆದ ‘ತೊಟ್ಟಿಲು’ ಉದ್ಘಾಟನಾ ಸಮಾರಂಭದಲ್ಲಿ ನಟ ಸುಂದರರಾಜ್ ಮಾತನಾಡಿದರು   

ಶಿರಾ: ‘ಬಾಲ್ಯದಲ್ಲಿ ಬಸ್ ಚಾಲಕನಾಗುವ ಕನಸು ಕಂಡಿದ್ದ ಬರಗೂರು ರಾಮಚಂದ್ರಪ್ಪ ಇಂದು ತಮ್ಮ ಬರಹದ ಮೂಲಕ ಪ್ರತಿಯೊಬ್ಬರಲ್ಲಿ ಪ್ರಭಾವ ಬೀರಿ ಸರಿದಾರಿಗೆ ತರುವ ಚಾಲಕರಾಗಿದ್ದಾರೆ’ ಎಂದು ಚಿತ್ರನಟ ಸುಂದರ್ ರಾಜ್ ಹೇಳಿದರು.

ತಾಲ್ಲೂಕಿನ ಬರಗೂರು ಗ್ರಾಮದಲ್ಲಿ ಬುಧವಾರ ಬರಗೂರು ಅವರ ಹುಟ್ಟಿದ ಮನೆ ಮಿನಿ ಮ್ಯೂಸಿಯಂ ಆಗಿ ಮಾರ್ಪಡಿಸಿ ‘ತೊಟ್ಟಿಲು’ ಹೆಸರಿಟ್ಟಿದ್ದು ಇದರ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ತಪ್ಪನ್ನು ಕಂಡ ಸ್ಥಳದಲ್ಲಿ ಖಂಡಿಸುವ, ತಿದ್ದುವ, ನೇರ ನುಡಿಯ ಬರಗೂರು ರಾಮಚಂದ್ರಪ್ಪ ಅವರ ಗರಡಿಯಲ್ಲಿ ಪಳಗಿದ ಕಾರಣ ಸಾಕಷ್ಟು ಸಮಾಜಮುಖಿ ಕಾರ್ಯ ಮಾಡಲು ಸಾಧ್ಯವಾಗಿದೆ ಎಂದರು.

ADVERTISEMENT

ಸಾಹಿತಿ ರಾಜಪ್ಪ ದಳವಾಯಿ ಮಾತನಾಡಿ, ಬರಗೂರು ಅವರ ಸಾಧನೆ ಬಗ್ಗೆ ಇಂದಿನ ಯುವಪೀಳಿಗೆಗೆ ತಿಳಿಸುವ ದೃಷ್ಟಿಯಿಂದ ನಾಡೋಜ ಬರಗೂರು ಪ್ರತಿಷ್ಠಾನದಿಂದ ಗ್ರಾಮದಲ್ಲಿ ಮ್ಯೂಸಿಯಂ ಆರಂಭಿಸುವ ಜೊತೆಗೆ ಅಧ್ಯಯನ ಕೇಂದ್ರ ತೆರೆಯಲಾಗುವುದು ಎಂದು ತಿಳಿಸಿದರು.

ಸಾಹಿತಿ ಬರಗೂರು ರಾಮಚಂದ್ರಪ್ಪ ಮಾತನಾಡಿ, ‘ಪ್ರತಿಯೊಬ್ಬರಲ್ಲೂ ಕುಟುಂಬದ ಕಲ್ಪನೆ ಬಂದಾಗ‌ ಮಾತ್ರ ಸಮಾಜದಲ್ಲಿ ಶಾಂತಿ, ಸೌಹಾರ್ದ ಮೂಡಲು ಸಾಧ್ಯ. ವಿನಯವಂತಿಕೆ ಇದ್ದಾಗ ಮಾತ್ರ ಕಲಿಯಲು ಸಾಧ್ಯ. ಡಾ.ರಾಜ್‌ಕುಮಾರ್ ಅವರಿಂದ ನಾನು ವಿನಯವಂತಿಕೆ ಕಲಿಯಲು ಸಾಧ್ಯವಾಯಿತು’ ಎಂದು ಹೇಳಿದರು.

‘ಹುಟ್ಟೂರಿನಲ್ಲಿ ನನ್ನ ಸ್ನೇಹಿತರಿಂದ ಹುಟ್ಟಿದ ಮನೆಯನ್ನು ಮ್ಯೂಸಿಯಂ ಆರಂಭಿಸುವ ಕೆಲಸ ಮಾಡುತ್ತಿರುವುದು ಸಂತಸ ತಂದಿದೆ. ಜನರ ಪ್ರೀತಿಯ ಮುಂದೆ ಯಾವುದೇ ಪ್ರಶಸ್ತಿ ನನಗೆ ದೊಡ್ಡದಲ್ಲ. ನಿಮ್ಮಿಂದಾಗಿ ಇದೆಲ್ಲಾ ದೊರೆತಿದೆ. ನಿಮ್ಮ ಪ್ರೀತಿಯ ಪ್ರಶಸ್ತಿ ನನಗೆ ಮುಖ್ಯವಾದುದು’ ಎಂದರು.

ನಟ ಕುಮಾರ್ ಗೋವಿಂದ್, ನಟಿ ರೇಖಾ, ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಸುಂದರರಾಜ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಲಕ್ಷ್ಮಣಪ್ಪ, ಕಸಾಪ ಅಧ್ಯಕ್ಷ ಪಾಂಡುರಂಗಪ್ಪ, ರೂಪೇಶ್ ಕೃಷ್ಣಯ್ಯ, ನಿವೃತ್ತ ಪ್ರಾಂಶುಪಾಲರಾದ ತಿಮ್ಮನಹಳ್ಳಿ ವೇಣುಗೋಪಾಲ್, ಪಿ.ಎಚ್. ಮಹೇಂದ್ರಪ್ಪ, ನರೇಶ್ ಬಾಬು, ಪರಮೇಶ್ ಗೌಡ, ಓಂಕಾರ್, ಬಿ.ಆರ್. ಜಯರಾಮಯ್ಯ
ಇದ್ದರು.

ಗಾಯಕಿ ಶಮಿತಾ ಮಲ್ನಾಡ್ ಅವರು ಕನ್ನಡ ಗೀತ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.