ಮಧುಗಿರಿ: ತಾಲ್ಲೂಕು ಕಸಬಾ ವ್ಯಾಪ್ತಿಯ ಕಾರಮರಡಿ ಗುಡ್ಡದಲ್ಲಿ ಚಿರತೆಗಳು ಆಗಾಗ್ಗೆ ಕಾಣಿಸಿಕೊಳ್ಳುತ್ತಿರುವುದು ಗುಡ್ಡದ ಸುತ್ತಮುತ್ತಲಿನ ಜನರು ಭಯಭೀತರಾಗಿದ್ದಾರೆ.
ಈ ಗುಡ್ಡದ ತುದಿ ಭಾಗದಲ್ಲಿರುವ ಕಲ್ಲು ಬಂಡೆಗಳ ಮೇಲೆ ಚಿರತೆಗಳು ಕಾಣಿಸುತ್ತಿವೆ. ಸಂಜೆಯಾದರೆ ಸಾಕು ಹಸು, ಕುರಿ, ಮೇಕೆಗಳ ರೊಪ್ಪಕ್ಕೆ ನುಗ್ಗಲು ಹೊಂಚು ಹಾಕುವ ಚಿರತೆಗಳು ಸಾಕು ಪ್ರಾಣಿಗಳ ಮೇಲೆ ದಾಳಿ ನಡೆಸಿ ತಿಂದು ಹಾಕುತ್ತಿವೆ. ಮಕ್ಕಳು, ಮಹಿಳೆಯರು ಹಾಗೂ ವೃದ್ಧರು ಮನೆಯಿಂದ ಹೊರ ಬರಲು ಹಿಂದೇಟು ಹಾಕುತ್ತಿದ್ದಾರೆ ಎಂದು ಗ್ರಾಮಸ್ಥರು ದೂರಿದರು.
‘ಉತ್ತಮ ಮಳೆ ಆಗಿರುವುದರಿಂದ ಗುಡ್ಡದಲ್ಲಿ ಹುಲ್ಲು ಮತ್ತು ವಿವಿಧ
ಜಾತಿಯ ಸೊಪ್ಪುಗಳು ಚಿಗುರಿರುವುದರಿಂದ ಜಾನುವಾರು ಗಳಿಗೆ, ಕುರಿ ಹಾಗೂ ಮೇಕೆಗಳಿಗೆ ಮೇವು ದೊರಕುತ್ತದೆ. ಆದ್ದರಿಂದ ಗುಡ್ಡಕ್ಕೆ ತೆರಳಿದರೆ, ಕುರಿ ಹಾಗೂ ಮೇಕೆಗಳ ಮೇಲೆ ಚಿರತೆಗಳು ದಾಳಿ ನಡೆಸಿ ಹಿಡಿದುಕೊಂಡು ಹೋಗುತ್ತಿವೆ. ಇದರಿಂದ ಸಾಕಷ್ಟು ನಷ್ಟ ಅನುಭವಿಸುವಂತಾಗಿದೆ’ ಎಂದು ಕುರಿಗಾಹಿಗಳು ಅಳಲು ತೋಡಿಕೊಂಡರು.
ಈಗ ತಾನೆ ಮಳೆ ಆರಂಭವಾಗಿದೆ. ತೋಟ ಹಾಗೂ ಜಮೀನಿನಲ್ಲಿ ಕೃಷಿ ಚಟುವಟಿಕೆ ನಡೆಸಬೇಕು. ಓಡಿಸಲು ಹೋದರೆ ನಮ್ಮ ಮೇಲೆಯೇ ದಾಳಿಗೆ ಮುಂದಾಗುತ್ತಿವೆ ಎಂದು ನಾಗಣ್ಣ ಹೇಳುತ್ತಾರೆ.
ಗ್ರಾಮದಲ್ಲಿ 65 ಮನೆಗಳಿದ್ದು, 300 ಜನಸಂಖ್ಯೆ ಹೊಂದಿದೆ. ಸಂಜೆ 7 ಗಂಟೆಯಾದರೆ ಸಾಕು ಚಿರತೆಗಳು ಗ್ರಾಮದ ರಸ್ತೆಯಲ್ಲಿ ರಾಜಾರೋಷವಾಗಿ ತಿರುಗಾಡುತ್ತವೆ. ಅರಣ್ಯ ಇಲಾಖೆ ಅಧಿಕಾರಿಗಳು ತಕ್ಷಣ ಈ ಚಿರತೆಗಳ ಹಾವಳಿಯನ್ನು ತಪ್ಪಿಸಿ ಜನರ ಹಾಗೂ
ಸಾಕು ಪ್ರಾಣಿಗಳ ಜೀವವನ್ನು ಉಳಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.